Advertisement

ಪ್ರಬಲ ರಾಜಸ್ಥಾನ ರಾಯಲ್ಸ್‌ ವಿರುದ್ಧ ಹಾರ್ದಿಕ್‌ ಪಾಂಡ್ಯ ತಂಡಕ್ಕೆ ಭರ್ಜರಿ ಜಯ

12:06 AM Apr 15, 2022 | Team Udayavani |

ಮುಂಬೈ: ಪ್ರಬಲ ರಾಜಸ್ಥಾನ ರಾಯಲ್ಸ್‌ ತಂಡವನ್ನು ಹಾರ್ದಿಕ್‌ ಪಾಂಡ್ಯ ನಾಯಕತ್ವದ ಗುಜರಾತ್‌ ಟೈಟಾನ್ಸ್‌ ಸೋಲಿಸಿದೆ. ಗುರುವಾರ ರಾತ್ರಿ ನಡೆದ ಐಪಿಎಲ್‌ ಪಂದ್ಯದಲ್ಲಿ ಜಯ ಸಾಧಿಸಿದ ಗುಜರಾತ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು. ಅದು ಆಡಿದ 5 ಪಂದ್ಯಗಳಲ್ಲಿ 4ನೇ ಜಯ ಸಾಧಿಸಿತು.

Advertisement

ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ 20 ಓವರ್‌ಗಳಲ್ಲಿ 4 ವಿಕೆಟಿಗೆ 192 ರನ್ನುಗಳ ದೊಡ್ಡ ಮೊತ್ತ ದಾಖಲಿಸಿತು. ಇದನ್ನು ಬೆನ್ನತ್ತಿದ ರಾಜಸ್ಥಾನ 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 155 ರನ್‌ ಗಳಿಸಿ 37 ರನ್‌ ಅಂತರದಿಂದ ಸೋತುಹೋಯಿತು. ರಾಜಸ್ಥಾನ ಪರ ಜೋಸ್‌ ಬಟ್ಲರ್‌ ಏಕಾಂಗಿಯಾಗಿ ಹೋರಾಡಿ 24 ಎಸೆತಗಳಲ್ಲಿ 54 ರನ್‌ ಗಳಿಸಿದರು. ಇದರಲ್ಲಿ 8 ಬೌಂಡರಿ, 3 ಸಿಕ್ಸರ್‌ಗಳಿದ್ದವು. ಅವರಿಗೆ ಉಳಿದವರ ನೆರವು ಸಿಗಲಿಲ್ಲ. ಗುಜರಾತ್‌ನ ಲಾಕೀ ಫ‌ರ್ಗ್ಯುಸನ್‌ (23ಕ್ಕೆ 3), ಯಶ್‌ ದಯಾಳ್‌ (40ಕ್ಕೆ 3) ಬೌಲಿಂಗ್‌ನಲ್ಲಿ ಮಿಂಚಿದರು.

ಸಿಡಿದ ಹಾರ್ದಿಕ್‌: ಮೊದಲು ಬ್ಯಾಟಿಂಗ್‌ ಗುಜರಾತನ್ನು ಕುಸಿತದಿಂದ ರಕ್ಷಿಸಿದ್ದು ನಾಯಕ ಹಾರ್ದಿಕ್‌ ಪಾಂಡ್ಯ. ರಾಜಸ್ಥಾನ್‌ ತಂಡದ ಎಲ್ಲ ನಮೂನೆಯ ದಾಳಿಗೂ ಸೂಕ್ತ ಉತ್ತರ ನೀಡುತ್ತ ಹೋದರು. ಅವರಿಗೆ ಕರ್ನಾಟಕದ ಯುವ ಬ್ಯಾಟರ್‌ ಅಭಿನವ್‌ ಮನೋಹರ್‌ ಮತ್ತು ದಕ್ಷಿಣ ಆಫ್ರಿಕಾದ ಹಾರ್ಡ್‌ ಹಿಟ್ಟರ್‌ ಡೇವಿಡ್‌ ಮಿಲ್ಲರ್‌ ಉತ್ತಮ ಬೆಂಬಲವಿತ್ತರು.

ಪಾಂಡ್ಯ 52 ಎಸೆತಗಳಿಂದ ಜವಾಬ್ದಾರಿಯುತ ಇನಿಂಗ್ಸ್‌ ಕಟ್ಟಿದರು. ಇದು ಅವರ ಸತತ 2ನೇ ಅರ್ಧಶತಕ. ಸಿಡಿಸಿದ್ದು 8 ಬೌಂಡರಿ ಹಾಗೂ 4 ಸಿಕ್ಸರ್‌. ಅಭಿನವ್‌ ಮನೋಹರ್‌ ಆಟವೂ ಆಕ್ರಮಣಕಾರಿಯಾಗಿತ್ತು. ಅವರು 28 ಎಸೆತಗಳಿಂದ 43 ರನ್‌ ಬಾರಿಸಿದರು. ಇದು 4 ಬೌಂಡರಿ, 2 ಸಿಕ್ಸರ್‌ಗಳನ್ನು ಒಳಗೊಂಡಿತ್ತು. ಪಾಂಡ್ಯ-ಅಭಿನವ್‌ ಜೋಡಿಯಿಂದ 4ನೇ ವಿಕೆಟಿಗೆ 86 ರನ್‌ ಒಟ್ಟುಗೂಡಿತು.

ಡೇವಿಡ್‌ ಮಿಲ್ಲರ್‌ ಕೇವಲ 14 ಎಸೆತಗಳಿಂದ 31 ರನ್‌ ಚಚ್ಚಿದರು (5 ಬೌಂಡರಿ, 1 ಸಿಕ್ಸರ್‌). ಮುರಿಯದ 5ನೇ ವಿಕೆಟಿಗೆ 53 ರನ್‌ ಹರಿದು ಬಂತು. ಈ ಮೂವರ ಬ್ಯಾಟಿಂಗ್‌ ಸಾಹಸದಿಂದ ಗುಜರಾತ್‌ ಅಂತಿಮ 5 ಓವರ್‌ಗಳಲ್ಲಿ 62 ರನ್‌ ಸೂರೆಗೈದಿತು.

Advertisement

ಅಬ್ಬರದ ಬಳಿಕ ಕುಸಿತ: ಗುಜರಾತ್‌ ಬಿರುಸಿನಿಂದಲೇ ಬ್ಯಾಟಿಂಗ್‌ ಆರಂಭಿಸಿತ್ತು. ಜಿಮ್ಮಿ ನೀಶಮ್‌ ಅವರ ಮೊದಲ ಓವರ್‌ನಲ್ಲೇ ಮ್ಯಾಥ್ಯೂ ವೇಡ್‌ 3 ಬೌಂಡರಿ ಬಾರಿಸಿ ಅಬ್ಬರಿಸಿದರು. ಆದರೆ ದ್ವಿತೀಯ ಓವರ್‌ನಲ್ಲಿ ವೇಡ್‌ಗೆ ದುರದೃಷ್ಟ ಕಾಡಿತು. ಡುಸೆನ್‌ ಅವರ ನೇರಎಸೆತಕ್ಕೆ ವೇಡ್‌ ರನೌಟಾಗಿ ಮರಳಬೇಕಾಯಿತು.

3ನೇ ಓವರ್‌ ಎಸೆಯಲು ಬಂದ ಕುಲದೀಪ್‌ ಸೇನ್‌ 5ನೇ ಎಸೆತದಲ್ಲಿ ದೊಡ್ಡದೊಂದು ಯಶಸ್ಸು ಸಾಧಿಸಿದರು. ತಂಡಕ್ಕೆ ಮರಳಿದ ವಿಜಯ್‌ ಶಂಕರ್‌ ಕೇವಲ 2 ರನ್ನಿಗೆ ವಿಕೆಟ್‌ ಒಪ್ಪಿಸಿದರು. 3ನೇ ವಿಕೆಟಿಗೆ ಶುಭಮನ್‌ ಗಿಲ್‌ ಮತ್ತು ಹಾರ್ದಿಕ್‌ ಪಾಂಡ್ಯ ಒಟ್ಟುಗೂಡಿದರು. ಪಾಂಡ್ಯ ಬಿರುಸಿನ ಆಟಕ್ಕೆ ಇಳಿದರು. ಗಿಲ್‌ ಎಚ್ಚರಿಕೆಯ ಆಟವಾಡುತ್ತಿದ್ದರು. ಪವರ್‌ಪ್ಲೇ ಮುಕ್ತಾಯಕ್ಕೆ ಮೊತ್ತವನ್ನು 42 ರನ್ನಿಗೆ ಏರಿಸುವಲ್ಲಿ ಯಶಸ್ವಿಯಾದರು.

ಪವರ್‌ ಪ್ಲೇ ಬಳಿಕ ದಾಳಿಗಿಳಿದ ರಿಯಾನ್‌ ಪರಾಗ್‌ ಅವರಿಗೆ ಪಾಂಡ್ಯ ಸಿಕ್ಸರ್‌ ಮೂಲಕ ಸ್ವಾಗತ ಕೋರಿದರು. ಆದರೆ ಪರಾಗ್‌ 4ನೇ ಎಸೆತದಲ್ಲಿ ಗಿಲ್‌ ವಿಕೆಟ್‌ ಉಡಾಯಿಸಿ ಸೇಡು ತೀರಿಸಿಕೊಂಡರು. ಗಿಲ್‌ ಗಳಿಕೆ 14 ಎಸೆತಗಳಿಂದ 13 ರನ್‌.

ನಾಯಕ ಪಾಂಡ್ಯ ಮತ್ತು ಅಭಿನವ್‌ ಮನೋಹರ್‌ ಜತೆಗೂಡಿದರು. 10 ಓವರ್‌ ಮುಕ್ತಾಯಕ್ಕೆ ಸ್ಕೋರ್‌ 72ಕ್ಕೆ ಏರಿತು. ಬಳಿಕ ಅಭಿನವ್‌ ಅಮೋಘ ಪ್ರದರ್ಶನ ನೀಡತೊಡಗಿದರು. ಚಹಲ್‌ಗೆ ಬೌಂಡರಿ, ಸಿಕ್ಸರ್‌ ರುಚಿ ತೋರಿಸತೊಡಗಿದರು. 13ನೇ ಓವರ್‌ನಲ್ಲಿ ಮೊತ್ತ ನೂರರ ಗಡಿ ದಾಟಿತು.

ಸಂಕ್ಷಿಪ್ತ ಸ್ಕೋರ್‌: ಗುಜರಾತ್‌ ಟೈಟಾನ್ಸ್‌ 20 ಓವರ್‌, 192/4 (ಹಾರ್ದಿಕ್‌ ಪಾಂಡ್ಯ 87, ಅಭಿನವ್‌ ಮನೋಹರ್‌ 43, ಚಹಲ್‌ 32ಕ್ಕೆ 1). ರಾಜಸ್ಥಾನ 20 ಓವರ್‌, 155/9 (ಜೋಸ್‌ ಬಟ್ಲರ್‌ 54, ಲಾಕೀ ಫ‌ರ್ಗ್ಯುಸನ್‌ 23ಕ್ಕೆ 3, ಯಶ್‌ ದಯಾಳ್‌ 40ಕ್ಕೆ 3).

Advertisement

Udayavani is now on Telegram. Click here to join our channel and stay updated with the latest news.

Next