Advertisement

ಆರ್‌.ಆರ್‌.ನಗರದಲ್ಲಿ ಮರ್ಡರ್‌ ಸಾಧ್ಯತೆ : ಬಿಜೆಪಿ ಅಭ್ಯರ್ಥಿ ಮುನಿರತ್ನ ಕಳವಳ

03:01 PM Oct 23, 2020 | Suhan S |

ಟಿ.ದಾಸರಹಳ್ಳಿ: ರಾಜರಾಜೇಶ್ವರಿ ನಗರ ಚುನಾವಣಾ ಗೆಲುವಿಗಾಗಿ ಕೊಲೆಗಳಾಗುವ ಸಾಧ್ಯತೆ ತುಂಬಾ ಇದೆ ಎಂದು ಬಿಜೆಪಿ ಅಭ್ಯರ್ಥಿ ಮುನಿರತ್ನ ಕಳವಳ ವ್ಯಕ್ತಪಡಿಸಿದರು.

Advertisement

ಕ್ಷೇತ್ರದ ಬಂಡಪ್ಪ ಗಾರ್ಡನ್‌ನಲ್ಲಿ ಮತಯಾಚನೆ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಕ್ಷೇತ್ರಕ್ಕೆ ಹೊರಗಿನಿಂದ 4 ಸಾವಿರ ಜನ ಬಂದಿದ್ದು, ಗಲಭೆ ಸೃಷ್ಟಿಸಲು ಮುಂದಾಗಿದ್ದಾರೆ.  ಈಗಾಗಲೇ ಕ್ಷೇತ್ರದಲ್ಲಿ ಭಯದ ವಾತಾವರಣ ನಿರ್ಮಿಸಿದ್ದಾರೆ. ಇದು ಎಲ್ಲಿಗೆ ಹೋಗಿ ಮುಟ್ಟುತ್ತದೋ ಗೊತ್ತಿಲ್ಲ. ಇಂಥ ಗೂಂಡಾ ಸಂಸ್ಕೃತಿಯನ್ನು ಪೋಷಿಸುವುದು ಬೇಡ 15 ದಿನಗಳಲ್ಲಿ ಚುನಾವಣೆ ಮುಕ್ತಾಯವಾಗುತ್ತದೆ ಅಹಿತಕರ ಘಟನೆಗಳಿಗೆ ಅವಕಾಶ ಮಾಡಿಕೊಡಬೇಡಿ, ಕ್ಷೇತ್ರದಲ್ಲಿ ಅಭಿವೃದ್ಧಿ ಮಂತ್ರದ ಮೂಲಕ ಜನರನ್ನು ಒಟ್ಟುಗೂಡಿಸಲು ಶ್ರಮಿಸಲಾಗುತ್ತಿದ್ದು, ಕ್ಷೇತ್ರದಲ್ಲಿ ಮತ್ತಷ್ಟು ಕೆಲಸಗಳನ್ನು ಮಾಡುವುದಾಗಿ ಭರವಸೆ ನೀಡಿದರು. ಪಾಲಿಕೆ ಮಾಜಿ ಸದಸ್ಯ ಬಿ.ಆರ್‌.ನಂಜುಂಡಪ್ಪ, ಮುಖಂಡರಾದ ಸುನಂದ ಬೋರೇಗೌಡ, ಕಿರಣ ಮತ್ತಿತರರಿದ್ದರು.

ಬಿಜೆಪಿ ಸಂಸ್ಕೃತಿಯಂತೆ ಎಲೆಕ್ಷನ್‌ :  ಕನಕಪುರದಲ್ಲಿ ಡಿ.ಕೆ.ಶಿವಕುಮಾರ್‌ ಹಾಗೂ ಸಂಸದ ಡಿ.ಕೆ.ಸುರೇಶ್‌ ಚುನಾವಣೆ ಎಕ್ಸ್‌ಪರ್ಟ್‌ಗಳು. ಅಕ್ರಮ ಮಾಡಿ ಅವರಿಗೆ ಅಭ್ಯಾಸ. ಕಾಂಗ್ರೆಸ್‌ ಅಂದ್ರೆ ಗೂಂಡಾಗಿರಿ, ಕಾಂಗ್ರೆಸ್‌ ಗೆ ಸೋಲಿನ ಭೀತಿ ವಾಸನೆ ಬಂದಿದೆ. ಹೀಗಾಗಿ ಪೊಲೀಸ್‌ ಸ್ಟೇಷನ್‌ ಮುಂದೆ ಚುನಾವಣೆ ಮುಂದೂಡಿ ಎಂದು ಪ್ರತಿಭಟನೆ ಮಾಡಿದ್ದಾರೆ. ಆರ್‌.ಆರ್‌.ನಗರದಲ್ಲಿ ಬಿಜೆಪಿ 40 ರಿಂದ 50 ಸಾವಿರ ಅಂತರದಲ್ಲಿ ಗೆಲ್ಲಲಿದೆ. ಮುನಿರತ್ನ ಕಾಂಗ್ರೆಸ್‌ನಲ್ಲಿದ್ದಾಗ ಕಾಂಗ್ರೆಸ್‌ ಸಂಸ್ಕೃತಿಯಲ್ಲಿ ಚುನಾವಣೆ ಮಾಡಿದ್ದಾರೆ.ಈಗ ಬಿಜೆಪಿಯಲ್ಲಿದ್ದು, ಬಿಜೆಪಿ ಸಂಸ್ಕೃತಿಯಂತೆ ಚುನಾವಣೆ ಮಾಡುತ್ತಿದ್ದಾರೆ ಎಂದು ಸಚಿವ ಆರ್‌.ಅಶೋಕ್‌ ತಿಳಿಸಿದರು.

ಸೇನಾಪಡೆ ನಿಯೋಜನೆಗೆ ಪತ್ರ :  ಚುನಾವಣಾ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ತೇಜೋ ವಧೆ ಮಾಡುವುದು ಮಾಮೂಲಾಗಿದೆ. ಚುನಾವಣೆಯಲ್ಲಿ ರಾಜಕೀಯ ದ್ವೇಷವಿರಲಿ ಅದು ವೈಯಕ್ತಿಕ ದ್ವೇಷಕ್ಕೆ ಪರಿವರ್ತನೆಯಾಗುವುದು ಬೇಡ. ಶಾಂತಿಯುತ ಮತದಾನಕ್ಕೆ ಅರೆ ಮಿಲಿಟರಿ ಪಡೆ ಸಾಲದು ಸೇನಾ ಪಡೆಯನ್ನು ನಿಯೋಜಿಸಬೇಕೆಂದು ಕೇಂದ್ರ ಹಾಗೂ ಚುನಾವಣಾ ಆಯೋಗಕ್ಕೆ ಪತ್ರ ಬರೆಯುವುದಾಗಿ ಮುನಿರತ್ನ ತಿಳಿಸಿದರು.

ಪೊಲೀಸರಿಂದ ಭದ್ರತೆ  : ಆರ್‌.ಆರ್‌.ನಗರ ಉಪ ಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿದ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಚುನಾವಣೆ ಶಾಂತವಾಗಿ ನಡೆಯಬೇಕು. ಮತದಾರರು ನಿರ್ಭಯವಾಗಿ ಮತಚಲಾಯಿಸುವ ವಾತಾವರಣ ನಿರ್ಮಿಸಬೇಕು. ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ನಿಯಂತ್ರಿಸುವ ವಿಚಾರದಲ್ಲಿ ಪೊಲೀಸರು ಕ್ರಮಕೈಗೊಳ್ಳುತ್ತಾರೆ. ಚುನಾವಣಾ ಆಯೋಗ ಮೇಲುಸ್ತುವಾರಿ ವಹಿಸಿಕೊಂಡಿದೆ. ಸಣ್ಣ-ಪುಟ್ಟ ಸಂಘರ್ಷ ಆದರೂ ಗಂಭೀರವಾಗಿ ತೆಗೆದುಕೊಂಡು ಕಾನೂನು ಸುವ್ಯವಸ್ಥೆ ಕಾಪಾಡುತ್ತೇವೆ ಎಂದು ಹೇಳಿದರು.

Advertisement

ಸರ್ವೀಸ್‌ ಪ್ರೊವೈಡರ್‌ಗಳೇ ಮೀರ್‌ ಸಾಧಿಕ್‌ಗಳು :

ಬೆಂಗಳೂರು: ಸರ್ವೀಸ್‌ ಪ್ರೊವೈಡರ್‌ ಮಿಸ್ಟರ್‌ಗಳೇ ಮೀರ್‌ ಸಾಧಿಕ್‌ಗಳು ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಮತ್ತು ಸಂಸದ ಡಿ.ಕೆ.ಸುರೇಶ್‌ ವಿರುದ್ಧ ಉಪಮುಖ್ಯಮಂತ್ರಿ ಡಾ.ಸಿ.ಎನ್‌.ಅಶ್ವಥ್‌ ನಾರಾಯಣ ಕಿಡಿಕಾರಿದ್ದಾರೆ.

ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ವೀಸ್‌ ಪ್ರೊವೈಡರ್‌ ಯಾರು ಎಂದು ಎಲ್ಲರಿಗೂ ತಿಳಿದಿದೆ. ಆ ಮಿಸ್ಟರ್‌ಗಳೇ ನಿಜವಾದ ಮೀರ್‌ ಸಾಧಿಕ್‌ಗಳೂ ಕೂಡಾ ಆಗಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ. ವ್ಯಕ್ತಿ ಆಧಾರಿತ ರಾಜಕಾರಣ ಬಿಟ್ಟು ಪಕ್ಷ ಸಿದ್ಧಾಂತದ ಮೇಲೆ ರಾಜಕಾರಣ ಮಾಡಿದರೆ ಅರ್ಥವಿರುತ್ತದೆ. ಕೆಲವರು ನಾನು ಆಡಿದ್ದೇ ಆಟ ಎಂಬ ಮನೋ ಸ್ಥಿತಿಯಲ್ಲಿದ್ದು, ಅವರಿಗೆ ಲೆಕ್ಕ ಕೇಳುವವರೇ ಇಲ್ಲದಂತಾಗಿದೆ. ಜನರಿಗೆ ಸರಿಯಾಗಿ ಉತ್ತರ ಹೇಳದೆ ಚುನಾವಣೆಯಲ್ಲಿ ಗೆದ್ದು

ಬಂದಿದ್ದಾರೆ. ಅವರು ಎಲ್ಲಿಂದ ಬಂದಿದ್ದರು?ಹೇಗಿದ್ದವರು ಹೇಗಾದರು? ಎಂಬುದಕ್ಕೆ ಲೆಕ್ಕ ಬೇಕು. ಇನ್ನು ಮುಂದೆ ಅವರ ಆಟ ನಡೆಯುವುದಿಲ್ಲ. ಎಲ್ಲದಕ್ಕೂ ಒಂದು ಇತಿಮಿತಿ ಇರಬೇಕೆಂದು ಎಂದು ಪರೋಕ್ಷವಾಗಿ ಡಿಕೆಶಿ ಹಾಗೂ ಸುರೇಶ್‌ ಅವರ ಹೆಸರು  ಹೇಳದೆ ವಾಗ್ಧಾಳಿ ನಡೆಸಿದರು.

ತಾಯಿಗೆ ದ್ರೋಹ ಬಗೆಯುವುದು ಒಂದೇ ಪಕ್ಷಕ್ಕೆ ಮೋಸ ಮಾಡುವುದು ಒಂದೇ. ಇಂಥವರು ಸಾರ್ವಜನಿಕ ಜೀವನದಲ್ಲಿ ಇರಲು ಯೋಗ್ಯರಲ್ಲ. ನಂಬಿದ ಪಕ್ಷಕ್ಕೆ ಮೋಸ ಮಾಡಿದವರನ್ನು ಮೀರ್‌ ಸಾಧಿಕರು ಎನ್ನದೆ ಇನ್ನೇನನ್ನಬೇಕು ಎಂದು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next