Advertisement

ನೀಚ ರಾಜಕಾರಣಿಯಿಂದ ಕ್ಷೇತ್ರಕ್ಕೆ ಮುಕ್ತಿ ಕೊಡಿ

11:41 AM Oct 31, 2020 | Suhan S |

ಬೆಂಗಳೂರು: ರಾಜರಾಜೇಶ್ವರಿ ನಗರದ ಉಪ ಚುನಾವಣೆಯ ಧರ್ಮ ಯುದ್ಧದಲ್ಲಿ ಮತದಾರರು ಈ ಕ್ಷೇತ್ರವನ್ನು ನೀಚ ರಾಜಕಾರಣಿಯ ನಿಯಂತ್ರಣದಿಂದಮುಕ್ತಗೊಳಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ತಿಳಿಸಿದರು.

Advertisement

ರಾಜರಾಜೇಶ್ವರಿ ವಿಧಾನಸಭೆ ಉಪಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದ ಜೈ ಭುವನೇಶ್ವರಿ ನಗರ, ಜಾಲಹಳ್ಳಿಯಲ್ಲಿ ಶುಕ್ರವಾರ ಕಾಂಗ್ರೆಸ್‌ ಅಭ್ಯರ್ಥಿ ಕುಸುಮಾ ಅವರ ಪರ ಬೃಹತ್‌ ರೋಡ್‌ ಶೋ ನಡೆಸಿ ಮಾತನಾಡಿದರು. ಈ ಕ್ಷೇತ್ರದಲ್ಲಿ ಆಗಿರುವ ಅನ್ಯಾಯಕ್ಕೆ ನ್ಯಾಯ ಒದಗಿಸಲು. ನಿಮ್ಮ ಕಷ್ಟಕ್ಕೆ ಧ್ವನಿಯಾಗಲು ಕಾಂಗ್ರೆಸ್‌ ಯುವ, ವಿದ್ಯಾವಂತ ಹಾಗೂ ಮಹಿಳಾ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದೇವೆ ಎಂದು ಹೇಳಿದರು.

ಈ ಕ್ಷೇತ್ರದಿಂದ ಗೆದ್ದು ಮಾರಾಟವಾಗಿರುವ ನೀಚ ರಾಜಕಾರಣಿ ಕಾಂಗ್ರೆಸ್‌ ಪಕ್ಷದಿಂದ ತೊಲಗಿ ಹೋಗಿದ್ದೇ ಒಳ್ಳೆಯದಾಯ್ತು. ಇಂತಹವರನ್ನು ಬೆಳೆಸಿ, ನಾವು ರಾಜಕಾರಣ ಮಾಡುವ ಅಗತ್ಯವಿಲ್ಲ. ನೀವು ಈ ಬಾರಿ ಮತ ಹಾಕುವಾಗ ವಿದ್ಯಾವಂತೆ, ಬುದ್ಧಿವಂತೆ, ಪ್ರಜ್ಞಾ ವಂತೆ ಹೆಣ್ಣುಮಗಳನ್ನು ಆಯ್ಕೆ ಮಾಡಿದರೆ ನಿಮ್ಮ ಕಷ್ಟಕ್ಕೆ ಸ್ಪಂದಿಸುತ್ತಾಳೆ ಎಂಬುದನ್ನು ಯೋಚಿಸಿ ಮತಹಾಕಿ. ಬೆಂಗಳೂರಿನ 28 ಕ್ಷೇತ್ರಗಳಲ್ಲಿ 4 ಕ್ಷೇತ್ರಗಳಲ್ಲಿ ಮಹಿಳೆ ಯರಿಗೆ ಆದ್ಯತೆ ನೀಡಿದ್ದೇವೆ. ಈ ಕ್ಷೇತ್ರಕ್ಕೆ ಸ್ವಾತಂತ್ರ್ಯ ಕೊಡಿ ಸಬೇಕು, ನಿಮಗೆ ಆಗಿರುವ ಅನ್ಯಾಯಕ್ಕೆ ಧ್ವನಿಯಾಗಲು ಕುಸುಮಾ ಅವರಿಗೆ ಮತ ನೀಡಿ ಎಂದರು.

ಯುದ್ಧ: ಈ ಚುನಾವಣೆ ರಾಜಕಾರಣದ ಧರ್ಮ ಹಾಗೂ ಅಧರ್ಮದ ನಡುವಿನ ಯುದ್ಧ. ಒಂದು ಪಕ್ಷದಲ್ಲಿ ಗೆದ್ದು, ಆ ಪಕ್ಷ ಹಾಗೂ ಮತದಾರರನ್ನು ಕೇಳದೇ ಅವರು ಕೊಟ್ಟ ಮತ ಹಾಗೂ ಸ್ಥಾನವನ್ನು ಮಾರಿಕೊಂಡಿರುವುದು ರಾಜಕಾರಣದ ಅಧರ್ಮ. ಒಂದು ವ್ಯಕ್ತಿಯ ಸ್ವಾರ್ಥಕ್ಕಾಗಿ ಇಂದು ಈ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ಏನೆಲ್ಲಾ ನಡೆ ಯುತ್ತಿದೆ ಎಂದು ನೀವು ಗಮನಿಸುತ್ತಿದ್ದೀರಿ. ಈ ಹಿಂದೆ ನಾನು ಸೇರಿದಂತೆ ಕೆಲವು ತಪ್ಪಿಗೆ ಕಾರಣಕರ್ತನಾಗಿದ್ದೇವೆ ಎಂದು ಹೇಳಿದರು.

ಸುಳ್ಳು ಪ್ರಕರಣಗಳ ವಿರುದ್ಧ ಹೋರಾಟ: ಆರ್‌.ಆರ್‌. ನಗರ ಕ್ಷೇತ್ರದಲ್ಲಿ ಅನಗತ್ಯವಾಗಿ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ. ಮುಂದಿನ ದಿನಗಳಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸಭೆಯಲ್ಲಿ ಈ ಕ್ಷೇತ್ರದಲ್ಲಿ ದ್ವೇಷದಿಂದ ಹಾಕಲಾಗಿರುವ ಕೇಸ್‌ಗಳ ಕುರಿತು ಸಮಗ್ರ ತನಿಖೆಗೆ ಆಗ್ರಹಿಸುತ್ತೇವೆ. ಹೆಣ್ಣು ಮಕ್ಕಳು, ವಿದ್ಯಾರ್ಥಿಗಳು, ಯುವಕರು, ಎಲ್ಲಾ ಪಕ್ಷಗಳ ಕಾರ್ಯಕರ್ತರ ಮೇಲೆ ಹಾಕಿರುವ ಕೇಸುಗಳ ವಿರುದ್ಧ ಹೋರಾಟ ಮಾಡುತ್ತೇವೆ. ಈ ವ್ಯಕ್ತಿ ಮೂವರು ಮಹಿಳಾ ಕಾರ್ಯಕರ್ತರ ಮೇಲೆ ಮಾತ್ರ ಈ ರೀತಿ ಕಿರುಕುಳ ನೀಡಿದ್ದಾನೆ ಎಂದುಕೊಂಡಿದ್ದೆ. ಆದರೆ ಬೀದಿಬೀದಿಯಲ್ಲಿ ಇಂತಹ ಕೇಸುಗಳು ದಾಖ ಲಾಗಿವೆ. ತನ್ನ ವಿರುದ್ಧ ಧ್ವನಿ ಎತ್ತಿದ ಮಹಿಳೆಯರ ಮೇಲೆ ವೇಶ್ಯಾವಾಟಿಕೆ ಕೇಸು ದಾಖಲಾಗಿವೆ ಎಂದು ಹೇಳಿದರು.

Advertisement

ಈ ಚುನಾವಣೆ ನಂತರ ಮುನಿರತ್ನ ವಿರುದ್ಧ ಹೋರಾಟ ಮಾಡುತ್ತೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ವಿಚಾರವಾಗಿ ತನಿಖೆ ನಡೆಸಲು ಒಂದು ಪ್ರತ್ಯೇಕ ಆಯೋಗವನ್ನೇ ರಚಿಸುತ್ತೇವೆ. ಈ ಚುನಾವಣೆ ಬಿಜೆಪಿಗೂ ನಮಗೂ ಅಲ್ಲ, ಜೆಡಿಎಸ್‌ಗೂ ಕಾಂಗ್ರೆಸ್‌ ನಡುವೆ ಅಲ್ಲ. ಇದು ಒಬ್ಬ ವ್ಯಕ್ತಿ ಮಾಡಿರುವ ಅನಾಚಾರ, ಅನ್ಯಾಯ, ದಬ್ಟಾಳಿಕೆ, ಅಧಿಕಾರ ದುರುಪಯೋಗ ಮಾಡಿಕೊಂಡಿರು ವುದಕ್ಕೆ ಶಿಕ್ಷೆ ನೀಡುವ ಚುನಾವಣೆ ಎಂದು ಹೇಳಿದರು.

ಕಾಂಗ್ರೆಸ್‌ ಮಹಿಳೆಗೆ ಅವಕಾಶ ನೀಡಿದೆ: “ಮಹಿಳೆ  ಯರು ತಮಗಿಂತ ತಮ್ಮ ಮನೆಯವರ ಬಗ್ಗೆ ಯೋಚಿಸುವುದೇ ಹೆಚ್ಚು. ಆದರೆ ಮಹಿಳೆಯರಿಗೆ ಅವಕಾಶ ಸಿಗುವುದು ಕಡಿಮೆ. ಆ ಅವಕಾಶವನ್ನು ಕಾಂಗ್ರೆಸ್‌ ನನಗೆ ನೀಡಿದೆ’ ಎಂದು ಕುಸುಮಾ ತಿಳಿಸಿದ್ದಾರೆ.  ಈ ಚುನಾವಣೆಯಲ್ಲಿ ತನ್ನ ಹೆಸರು ಕೇಳಿ ಬರುತ್ತಿದ್ದಂತೆ ನನ್ನ ಮೇಲೆ ಗದಾಪ್ರಹಾರ ನಡೆಯುತ್ತಿದೆ. ನಾನು ನನ್ನ ಗಂಡನ ಹೆಸರು ಬಳಸಬಾರದು ಅಂತಾರೆ. ನನ್ನ ಮೇಲೆ ಎಫ್ಐಆರ್‌ ಹಾಕ್ತಾರೆ. ಪ್ರಚಾರಕ್ಕೆ ಹೋದಲ್ಲೆಲ್ಲಾ ತೊಂದರೆ ಕೊಡುತ್ತಿದ್ದಾರೆ. ನಾನು ಹೆಣ್ಣು ಮಗಳಾಗಿ ನಾನು ರಾಜಕೀಯಕ್ಕೆ ಬರೋದು ತಪ್ಪಾ? ಜನರ ಸೇವೆ ಮಾಡೋದು ತಪ್ಪಾ?. ಇಲ್ಲಿರುವ ಯುವಕರು,  ಮಹಿಳೆಯರು ಒಟ್ಟಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.

ಕ್ಷೇತ್ರದಲ್ಲಿ ಶೇ 50 ರಷ್ಟಿರುವ ಮಹಿಳೆಯರ ಕಷ್ಟ, ಸುಖ ಅವರ ಮೇಲೆ ಆಗುವ ದೌರ್ಜನ್ಯದ ಬಗ್ಗೆ ಕೇಳಲು ಯಾರೂ ಇಲ್ಲದಂತಾಗಿದೆ. ಈಗ ನಾನು ನಿಮ್ಮ ಮುಂದೆ ಬಂದು ನಿಂತಿದೀನಿ. ನಿಮ್ಮ ಮನೆ ಮಗಳಂತೆ ನನ್ನ ಸ್ವೀಕರಿಸಿ ನಿಮ್ಮ ಸೇವೆ ಮಾಡಲು ಒಂದು ಅವಕಾಶ ನೀಡಿ. ಪಕ್ಷದ ಹಿರಿಯ ನಾಯಕರ ಜೊತೆ ನಿಮ್ಮ ಮುಂದೆ ಮತ ಭಿಕ್ಷೆ ಬೇಡಲು ಬಂದಿದ್ದೇನೆ. ನಾನು ಒಂದು ಕೈ ಚಾಚಿದ್ದೇನೆ. ನೀವು ನಿಮ್ಮ ಕೈ ಚಾಚಿ ನನ್ನನ್ನು ನಿಮ್ಮ ಮಗಳೆಂದು ಸ್ವೀಕರಿಸಿ. ನಾನು ಕ್ಷೇತ್ರದಲ್ಲಿ ದೌರ್ಜನ್ಯಕ್ಕೊಳಗಾದ ಹೆಣ್ಣು ಮಕ್ಕಳ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮಾಜಿ ಸಚಿವರಾದ ಕೃಷ್ಣಬೈರೇಗೌಡ, ರಾಮ ಲಿಂಗಾರೆಡ್ಡಿ, ಐವಾನ್‌ ಡಿಸೋಜಾ, ಡಾ.ಅಜಯ್‌ಸಿಂಗ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next