Advertisement

ಹಿಂದೂ ಶಾಸಕನ ಪುತ್ರಿಯಿಂದ ರೋಜಾ !

12:53 PM May 08, 2020 | mahesh |

ವಿಜಯಪುರ: ಈಕೆ ಹಿಂದೂ ಶಾಸಕನ ಪುತ್ರಿ. ಆದರೆ ಕಳೆದ ಏಳೆಂಟು ವರ್ಷಗಳಿಂದ ಮುಸ್ಲಿಂ ಧರ್ಮೀಯರ ಪವಿತ್ರ ರಂಜಾನ್‌ ಮಾಸದಲ್ಲಿ ರೋಜಾ ಆಚರಿಸುತ್ತಾರೆ. ಕುಟುಂಬದಲ್ಲಿ ದೊಡ್ಡಪ್ಪ ಕಳೆದ ಅರ್ಧ ಶತಮಾನದಿಂದ ರಂಜಾನ್‌ ಸಂದರ್ಭ ಆಚರಿಸುತ್ತ ಬರುತ್ತಿದ್ದ ಕಠೊರ ಉಪವಾಸವೇ ಈಕೆಗೂ ಪ್ರೇರಣೆ. ಬಸವೇಶ್ವರರ ಜನ್ಮಭೂಮಿ ಬಸವನಬಾಗೇವಾಡಿ ಕ್ಷೇತ್ರ ಪ್ರತಿನಿಧಿಸುತ್ತಿರುವ ಕಾಂಗ್ರೆಸ್‌ ಶಾಸಕ, ಮಾಜಿ ಸಚಿವ ಶಿವಾನಂದ ಎಸ್‌. ಪಾಟೀಲರ ಹಿರಿಯ ಪುತ್ರಿ
ಸಂಯುಕ್ತಾ ಪಾಟೀಲ ರೋಜಾ ಆಚರಿಸುತ್ತಿದ್ದು, ಧಾರ್ಮಿಕ ಸೌಹಾರ್ದತೆಗೆ ಇಂಥ ಆಚರಣೆಗಳನ್ನು ಮಾಡುತ್ತಿರುವುದಾಗಿ ಹೇಳುತ್ತಾರೆ.

Advertisement

ಸಂಯುಕ್ತಾ ಕಾನೂನು ಪದವಿಯಲ್ಲಿ ಅಂತಾರಾಷ್ಟ್ರೀಯ ಮಾನವೀಯ ಸಂಬಂಧಗಳ ಕುರಿತು ವಿಶೇಷ ಅಧ್ಯಯನ ಮಾಡಿದ್ದಾರೆ. ದೊಡ್ಡಪ್ಪ ಶಿವಶರಣಗೌಡ ಪಾಟೀಲ 50 ವರ್ಷಗಳಿಂದ ರಂಜಾನ್‌ ಮಾಸದಲ್ಲಿ ಕಠೊರ ಉಪವಾಸ ಮಾಡುತ್ತಿದ್ದರು. ಬಾಲ್ಯದಲ್ಲಿ ದೊಡ್ಡಪ್ಪ ಮಾಡುತ್ತಿದ್ದ ರೋಜಾ ನೋಡುತ್ತಿದ್ದ ಸಂಯುಕ್ತಾ ಕಳೆದ 7-8 ವರ್ಷಗಳಿಂದ ದೊಡ್ಡಪ್ಪನ ಜೊತೆಗೆ ರೋಜಾ ಮಾಡಲು ಆರಂಭಿಸಿದ್ದಾರೆ. ಒಂದೆರಡು ವರ್ಷ ಮಾಸ ಪೂರ್ತಿ ರೋಜಾ ಆಚರಿಸಿದ್ದಾರೆ. ಪ್ರಸಕ್ತ
ವರ್ಷ ರೋಜಾ ಅರಂಭವಾದ ದಿನದಿಂದಲೇ ಉಪವಾಸ ವ್ರತ ಆಚರಿಸಿದ್ದಾರೆ.

ರಂಜಾನ್‌ ಮಾಸದಲ್ಲಿ ರೋಜಾ ಆಚರಿಸಿದರೂ ಮುಸ್ಲಿಂ ಸಮುದಾಯದವರಂತೆ ಅಲ್ಹಾನ ಪ್ರಾರ್ಥನೆ ಮಾಡಲು ಈಕೆಗೆ ನಮಾಜು ಮಾಡಲು ಬರುವುದಿಲ್ಲ. ಆದರೆ ರಂಜಾನ್‌ ಮಾಸದಲ್ಲಿ ಬೆಳಗ್ಗೆ  4ಕ್ಕೆ ಏಳುವ ಸಂಯುಕ್ತಾ ಪಾಟೀಲ, ನಿತ್ಯ ಕರ್ಮಗಳನ್ನು ಮುಗಿಸಿ ಮನೆಯಲ್ಲಿರುವ ದೇವರಿಗೆ ಪೂಜೆ ಸಲ್ಲಿಸಿ, ಸೂರ್ಯೋದಯಕ್ಕೆ ಮುನ್ನವೇ ಪ್ರಸಾದ ಸೇವಿಸುತ್ತಾರೆ. ಅನಂತರ ಮುಸ್ಲಿಂ ಸಮುದಾಯದವರು ಮಾಡುವಂತೆ ಐದು ಬಾರಿ ದೇವರ ಧ್ಯಾನ ಮಾಡುವ ಸಂಯುಕ್ತಾ, ಸೂರ್ಯಾಸ್ತದ ನಂತರವೇ ಸ್ನಾನ-ಪೂಜೆ ಮುಗಿಸಿ ಪ್ರಸಾದ ಸೇವಿಸುತ್ತಾರೆ.

ಭಾರತೀಯ ಪರಂಪರೆಯಲ್ಲಿ, ಅದರಲ್ಲೂ ವಿಜಯಪುರ ಜಿಲ್ಲೆ ಧಾರ್ಮಿಕ ಸೌಹಾರ್ದಕ್ಕೆ ಹೆಸರಾಗಿದೆ. ನಮ್ಮ ಅಜ್ಜ ಸಿದ್ರಾಮಪ್ಪಗೌಡ ಪಾಟೀಲ ಅವರು ಹಿಂದು-ಮುಸ್ಲಿಂ ಸಮುದಾಯದ ಪ್ರೀತಿಗೆ ಪಾತ್ರರಾಗಿದ್ದು, ನಗರಸಭೆ ಸದಸ್ಯರೂ ಆಗಿದ್ದರು. ಮುಸ್ಲಿಂ ಸಮುದಾಯದ ಜನರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಅಜ್ಜ ಸಿದ್ರಾಮಪ್ಪಗೌಡ ಅವರ ಮುಸ್ಲಿಂ ಸ್ನೇಹಿತರು ಕೂಡ ಗಣೇಶೋತ್ಸವ, ದೀಪಾವಳಿ, ದಸರಾ ಸೇರಿದಂತೆ ಹಲವು ಹಬ್ಬಗಳನ್ನು ಒಗ್ಗೂಡಿ ಮಾಡುತ್ತಿದ್ದರು. ಎಲ್ಲಕ್ಕಿಂತ ಹೆಚ್ಚಾಗಿ ಅಜ್ಜಿ ಪಾರ್ವತಮ್ಮ ಸೂಫಿ ಪಂಥೀಯರಾಗಿದ್ದರು. ಇಂಥ ಕೌಟುಂಬಿಕ ಹಿನ್ನೆಲೆ ದೊಡ್ಡಪ್ಪ ಅವರಿಗೆ ಪ್ರೇರಣೆ ನೀಡಿದ್ದು, ನನಗೆ
ದೊಡ್ಡಪ್ಪ ಸ್ಫೂರ್ತಿ ಎನ್ನುತ್ತಾರೆ ಸಂಯುಕ್ತಾ.

ಕಳೆದ ಎರಡು ವರ್ಷಗಳಿಂದ ದೊಡ್ಡಪ್ಪನವರಿಗೆ ಆರೋಗ್ಯ ಸರಿ ಇಲ್ಲದ ಕಾರಣ ಅವರ ಪರವಾಗಿ ನಾನೇ ಪೂರ್ಣ ಪ್ರಮಾಣದಲ್ಲಿ ರಂಜಾನ್‌ ರೋಜಾ ಆಚರಿಸುತ್ತಿದ್ದೇನೆ. ಹಲವು ವರ್ಷಗಳಿಂದ ಈ ಕಠೊರ ವ್ರತಾಚರಣೆ ಮಾಡಿಕೊಂಡು ಬಂದಿರುವ ಕಾರಣ ಉಗುಳು ಕೂಡ ನುಂಗಬಾರದ ಈ
ಉಪವಾಸ ಕಷ್ಟ ಎನಿಸುತ್ತಿಲ್ಲ ಎನ್ನುತ್ತಾರೆ.

Advertisement

ಬಸವಾದಿ ಶರಣರ ವಚನಗಳ ಜೀವನ ಶೈಲಿ ರೂಢಿಸಿಕೊಂಡಿರುವ ಕುಟುಂಬದಲ್ಲಿ ಕ್ರಿಸ್‌ ಮಸ್‌ ಹಬ್ಬವನ್ನೂ ಆಚರಿಸುತ್ತೇನೆ. ಬೈಬಲ್‌ ಓದಿರುವ ನಾನು ಭವಿಷ್ಯದಲ್ಲಿ ಪವಿತ್ರ ಕುರಾನ್‌ ಓದುವ ಗುರಿ ಇರಿಸಿಕೊಂಡಿದ್ದೇನೆ. ಸತ್ಕಾರ್ಯದಲ್ಲಿ ದೇವರಿದ್ದಾನೆಂದು ಬಸವೇಶ್ವರರು ಹೇಳಿದ ಸಂದೇಶಗಳನ್ನೇ ಎಲ್ಲ ಧರ್ಮಗಳೂ ಸಾರುತ್ತಿವೆ. ಎಲ್ಲರೂ ಸ್ವ ಧರ್ಮಗಳ ಆಚರಣೆ ಜೊತೆಗೆ ಅನ್ಯ ಧರ್ಮಗಳನ್ನು ಪ್ರೀತಿಸಿ, ಗೌರವಿಸುವಲ್ಲೇ ಧಾರ್ಮಿಕ ಸೌಹಾರ್ದತೆ ಹಾಗೂ ದೇಶದ ಏಕತೆ ಸಾಧ್ಯ.
● ಸಂಯುಕ್ತಾ ಪಾಟೀಲ

● ಜಿ.ಎಸ್‌.ಕಮತರ

Advertisement

Udayavani is now on Telegram. Click here to join our channel and stay updated with the latest news.

Next