Advertisement

ಸೋಲಿನ ಸರದಾರಿಗೆ ದಾಖಲೆಯ ಅವಕಾಶ!ಬೆಂಗಳೂರಿನಲ್ಲಿಂದು ಕೋಲ್ಕತಾ ಎದುರಾಳಿ

12:36 PM May 07, 2017 | Team Udayavani |

ಬೆಂಗಳೂರು: ರಾಯಲ್‌ ಚಾಲೆಂಜರ್ ಬೆಂಗಳೂರು ತಂಡದ ಕುರಿತು ಸಕಾರಾತ್ಮಕವಾಗಿ ನುಡಿಯುವ-ಬರೆಯುವ, ಒಳಿತನ್ನು ಹಾರೈಸುವ ಕಾಲವೀಗ ಮುಗಿದಿದೆ. 10ನೇ ಐಪಿಎಲ್‌ನಲ್ಲಿ ಅಂತಿಮ ಸ್ಥಾನವನ್ನೇ ಗಟ್ಟಿ ಮಾಡಿಕೊಳ್ಳಲು ಟೊಂಕ ಕಟ್ಟಿರುವ ತಂಡದ ಬಗ್ಗೆ ಇನ್ನು ಹೇಳಲುಳಿದಿರುವುದು ನಕಾರಾತ್ಮಕ ಸಂಗತಿ ಮಾತ್ರ!

Advertisement

ಶುಕ್ರವಾರ ರಾತ್ರಿ ತನ್ನದೇ ಅಂಗಳದಲ್ಲಿ ಪಂಜಾಬ್‌ಗ ಶರಣಾಗುವುದರೊಂದಿಗೆ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಐಪಿಎಲ್‌ನಲ್ಲಿ ಅತ್ಯಧಿಕ 83 ಸೋಲನುಭವಿಸಿದ ಡೆಲ್ಲಿ ಡೇರ್‌ಡೆವಿಲ್ಸ್‌ ದಾಖಲೆಯನ್ನು ಸರಿದೂಗಿಸಿದೆ. ರವಿವಾರ ಕೋಲ್ಕತಾ ನೈಟ್‌ರೈಡರ್ ವಿರುದ್ಧ ಮತ್ತೆ ಎಡವಿದರೆ ಆಗ ಐಪಿಎಲ್‌ನಲ್ಲಿ ಅತೀ ಹೆಚ್ಚು ಸೋಲುಂಡ ಹೆಗ್ಗಳಿಕೆ ಬೆಂಗಳೂರು ತಂಡದ್ದಾಗಲಿದೆ. ಮುಂದೆ ಟಿ-ಟ್ವೆಂಟಿಯಲ್ಲಿ ಅತ್ಯಧಿಕ 93 ಸೋಲಿನ ವಿಶ್ವದಾಖಲೆಯತ್ತ ಓಟ ಬೆಳೆಸಬಹುದು. ಈ ನಡುವೆ ಡೆಲ್ಲಿ ತಂಡ ಶನಿವಾರ ರಾತ್ರಿ ಮುಂಬೈಯನ್ನು ಎದುರಿಸಿದ್ದು, ಇಲ್ಲಿನ ಫ‌ಲಿತಾಂಶ ಆರ್‌ಸಿಬಿ “ದಾಖಲೆ’ಗೆ ನಿರ್ಣಾಯಕವಾಗಲಿದೆ ಎಂಬ ಅಂಶವನ್ನು ಗಮನಿಸಬೇಕು.

ಆರ್‌ಸಿಬಿ ಈ ಋತುವಿನಲ್ಲಿ ಸತತ 5 ಪಂದ್ಯಗಳಲ್ಲಿ ಲಾಗ ಹಾಕಿದೆ. ಇದು ಬೆಂಗಳೂರು ತಂಡದ ಅತ್ಯಧಿಕ ಸತತ ಸೋಲಿನ ಜಂಟಿ ದಾಖಲೆ. 2008ರಲ್ಲೂ ಅದು ಸತತ 5 ಪಂದ್ಯಗಳಲ್ಲಿ ಸೋಲನ್ನು ಮೈಮೇಲೆ ಎಳೆದುಕೊಂಡಿತ್ತು. ಇದನ್ನು ಆರಕ್ಕೆ, ಬಳಿಕ ಏಳಕ್ಕೆ ವಿಸ್ತರಿಸಿಕೊಳ್ಳುವ ಸುವರ್ಣಾವಕಾಶವೊಂದು ಆರ್‌ಸಿಬಿಗೆ ಎದುರಾಗಿದೆ. ಬಹುಶಃ ಇದನ್ನು ಬೆಂಗಳೂರು ಹುಡುಗರು ಮಿಸ್‌ ಮಾಡಿಕೊಳ್ಳಲಿಕ್ಕಿಲ್ಲ!

ನಾವಾಡುವುದೇ ನಿಮಗಾಗಿ!: ಈಗಾಗಲೇ ಹೇಳಿರುವಂತೆ ಆರ್‌ಸಿಬಿ ಇನ್ನು ಆಡುವುದು ತನಗಾಗಿ ಅಲ್ಲ, ಉಳಿದ ತಂಡಗಳಿಗಾಗಿ. ಪ್ಲೇ-ಆಫ್ ಪೈಪೋಟಿಯನ್ನು ತೀವ್ರಗೊಳಿಸುವ ನಿಟ್ಟಿನಲ್ಲಿ ವಿರಾಟ್‌ ಕೊಹ್ಲಿ ಪಡೆ ವಹಿಸುವ ಪಾತ್ರ ನಿರ್ಣಾಯಕವಾಗಲಿದೆ. ಎಲ್ಲರೂ ಬೆಂಗಳೂರು ತಂಡದ ವಿರುದ್ಧ ಗೆಲ್ಲುತ್ತ ಹೋದರೆ ಟಾಪ್‌-ಫೋರ್‌ನ ಕೊನೆಯೆರಡು ಸ್ಥಾನಗಳಿಗೆ ಭಾರೀ ಫೈಟ್‌ ಕಂಡುಬರಲಿದೆ. ಕೆಲವು ತಂಡಗಳ ಭವಿಷ್ಯ ಬೆಂಗಳೂರಿನ ಕೈಯಲ್ಲಿರುವುದೂ ಸುಳ್ಳಲ್ಲ. ಹೀಗಾಗಿ ಕೂಟದಿಂದ ಹೊರಬಿದ್ದರೂ ಆರ್‌ಸಿಬಿ ಪಂದ್ಯಗಳ ಮಹತ್ವವೇನೂ ಕಡಿಮೆ ಆಗಿಲ್ಲ. ಇದು ಕೊಹ್ಲಿ ತಂಡದ ಪಾಲಿನ ಹೆಮ್ಮೆಯ ಸಂಗತಿ! 

ಶುಕ್ರವಾರ ರಾತ್ರಿ 9ನೇ ಸೋಲನುಭವಿಸಿದ ಆರ್‌ಸಿಬಿ, ಎದುರಾಳಿ ಪಂಜಾಬ್‌ಗ ಜೀವಸೆಲೆಯಾಗಿ ಪರಿಣಮಿಸಿತು. ರವಿವಾರವೂ ಸೋತರೆ ಕೋಲ್ಕತಾ ನೈಟ್‌ರೈಡರ್ ತಂಡದ ಪ್ಲೇ-ಆಫ್ ಅಧಿಕೃತಗೊಳ್ಳಲಿದೆ. ಅನಂತರ ಬೆಂಗಳೂರು ತಂಡಕ್ಕೆ ಒಂದು ವಾರದ ಭರ್ಜರಿ ವಿಶ್ರಾಂತಿ. ಅಂತಿಮ ಲೀಗ್‌ ಪಂದ್ಯ ಆಡುವುದೇನಿದ್ದರೂ ಮುಂದಿನ ರವಿವಾರವೇ ಆಯಿತು. 

Advertisement

ಎದುರಾಳಿ ಡೆಲ್ಲಿ ಡೇರ್‌ಡೆವಿಲ್ಸ್‌. ಪಂದ್ಯದ ತಾಣ ಫಿರೋಜ್‌ ಶಾ ಕೋಟ್ಲಾ ಅಂಗಳ. ಈ ನಡುವೆ ಡೆಲ್ಲಿ ಸತತ ಗೆಲುವನ್ನು ಕಂಡು ಪ್ಲೇ-ಆಫ್ ಬಾಗಿಲಲ್ಲಿ ನಿಂತರೆ, ಅಂತಿಮ ಲೀಗ್‌ ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿದರೆ ಆಗ ಆರ್‌ಸಿಬಿ ಆಟಗಾರರು ಖಂಡಿತವಾಗಿಯೂ ಡೆಲ್ಲಿ ಮೇಲೆ “ಕರುಣೆ’ ತೋರದೇ ಇರಲಾರರು ಎಂದು ಭಾವಿಸಬಹುದಾಗಿದೆ! 

ಇದು ಲೀಗ್‌ ಹಂತದ ಕಟ್ಟಕಡೆಯ ಪಂದ್ಯವೂ ಹೌದು. ಹೀಗಾಗಿ 10ನೇ ಐಪಿಎಲ್‌ನ ಲೀಗ್‌ ಕುತೂಹಲ ಕೊನೆಯ ಪಂದ್ಯದ ತನಕ ಉಳಿದದ್ದೇ ಆದರೆ ಅದರ ಸಂಪೂರ್ಣ ಶ್ರೇಯಸ್ಸು ಆರ್‌ಸಿಬಿಗೇ ಸಲ್ಲಬೇಕಾಗುತ್ತದೆ.

“ಆಲೌಟ್‌ 49′ ದಾಖಲೆ!: ಕೆಕೆಆರ್‌ ವಿರುದ್ಧದ ಹಿಂದಿನ ಪಂದ್ಯವನ್ನು ಆರ್‌ಸಿಬಿ ಅಭಿಮಾನಿಗಳು ಮರೆಯುವಂತೆಯೇ ಇಲ್ಲ. 

ಎ. 23ರ ಈ “ಈಡನ್‌’ ಮುಖಾಮುಖೀಯಲ್ಲಿ 132 ರನ್‌ ಬೆನ್ನಟ್ಟುವ ವೇಳೆ ಆರ್‌ಸಿಬಿ 49 ರನ್ನಿಗೆ ಆಲೌಟ್‌ ಆಗಿತ್ತು. ಇದು ಐಪಿಎಲ್‌ನ ಕನಿಷ್ಠ ಮೊತ್ತದ ದಾಖಲೆಯಾಗಿದೆ. ಮನಸ್ಸು ಮಾಡಿದರೆ ಕೊಹ್ಲಿ ಹುಡುಗರು ಇದನ್ನು ತಿದ್ದಿ ಬರೆಯಲೂ ಶಕ್ತರು!

Advertisement

Udayavani is now on Telegram. Click here to join our channel and stay updated with the latest news.

Next