ಜೈಪುರ: ಬೌಲರ್ ಗಳ ಸಂಘಟಿತ ದಾಳಿಯ ನೆರವಿನಿಂದ ರಾಜಸ್ಥಾನ ರಾಯಲ್ಸ್ ವಿರುದ್ಧದ ಜೈಪುರ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಭರ್ಜರಿ ಗೆಲುವು ಸಾಧಿಸಿದೆ. ತವರು ಮೈದಾದನದಲ್ಲಿ ರಾಜಸ್ಥಾನವು 112 ರನ್ ಅಂತರದ ಸೋಲನುಭವಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ಐದು ವಿಕೆಟ್ ನಷ್ಟಕ್ಕೆ 171 ರನ್ ಮಾಡಿದರೆ, ರಾಯಲ್ಸ್ ಕೇವಲ 10.3 ಓವರ್ ಗಳಲ್ಲಿ ಕೇವಲ 59 ರನ್ ಗೆ ಆಲೌಟಾಯಿತು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐದು ವಿಕೆಟ್ ಗೆ 171 ರನ್ ಮಾಡಿತು. ಬೆಂಗಳೂರು ಪರ ಮತ್ತೆ ನಾಯಕ ಫಾಫ್ ಮತ್ತು ಗ್ಲೆನ್ ಮ್ಯಾಕ್ಸವೆಲ್ ಮಿಂಚಿದರು. ತಲಾ ಅರ್ಧಶತಕ ಸಿಡಿಸಿದ ಉಭಯರು ಎರಡನೇ ವಿಕೆಟ್ ಗೆ 69 ರನ್ ಜೊತೆಯಾಟವಾಡಿದರು.
ಪ್ಲೆಸಿಸ್ 44 ಎಸೆತಗಳಲ್ಲಿ 55 ರನ್ ಗಳಿಸಿದರೆ, ಗ್ಲೆನ್ ಮ್ಯಾಕ್ಸವೆಲ್ 33 ಎಸೆತದಲ್ಲಿ 54 ರನ್ ಮಾಡಿ ಮಿಂಚಿದರು. ಕೊನೆಯಲ್ಲಿ ಬ್ಯಾಟ್ ಬೀಸಿದ ಅನುಜ್ ರಾವತ್ 11 ಎಸೆತಗಳಲ್ಲಿ ಎರಡು ಸಿಕ್ಸರ್ ನೆರವಿನಿಂದ 29 ರನ್ ಮಾಡಿದರು. ರಾಜಸ್ಥಾನ ಪರ ಜಾಂಪಾ ಮತ್ತು ಆಸಿಫ್ ತಲಾ ಎರಡು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ರಾಜಸ್ಥಾನ ತಂಡವು ಮೊದಲ ಓವರ್ ನಿಂದಲೇ ವಿಕೆಟ್ ಕಳೆದುಕೊಳ್ಳಲು ಆರಂಭಿಸಿತು. ಭರ್ಜರಿ ಫಾರ್ಮ್ ನಲ್ಲಿದ್ದ ಆರಂಭಿಕರಾದ ಜೈಸ್ವಾಲ್ ಮತ್ತು ಬಟ್ಲರ್ ಶೂನ್ಯ ಸುತ್ತಿದರು. 34 ರನ್ ಸಿಡಿಸಿದ ಶಿಮ್ರನ್ ಹೆಟ್ಮೈರ್ ಅವರೊಬ್ಬರೇ ಎರಡಂಕಿ ದಾಟಿದವರು. ಐವರು ರಾಜಸ್ಥಾನ ಬ್ಯಾಟರ್ ಗಳು ಶೂನ್ಯ ಸುತ್ತಿದರು.
ಆರ್ ಸಿಬಿ ಪರ ವೇಯ್ನ್ ಪಾರ್ನೆಲ್ ಮೂರು ವಿಕೆಟ್, ಬ್ರೇಸವೆಲ್ ಮತ್ತು ಕರ್ಣ್ ಶರ್ಮಾ ತಲಾ ಎರಡು ವಿಕೆಟ್, ಸಿರಾಜ್ ಮತ್ತು ಮ್ಯಾಕ್ಸವೆಲ್ ತಲಾ ಒಂದು ವಿಕೆಟ್ ಕಿತ್ತರು.
ಈ ಪಂದ್ಯ ಗೆದ್ದು ಆರ್ ಸಿಬಿ 12 ಅಂಕಗಳೊಂದಿಗೆ ಐದನೇ ಸ್ಥಾನಕ್ಕೇರಿದರೆ, 13 ಪಂದ್ಯಗಳ ಬಳಿಕ ರಾಜಸ್ಥಾನ ಆರನೇ ಸ್ಥಾನದಲ್ಲಿದೆ.