ಬೆಂಗಳೂರು: ಕಳೆದ ವರ್ಷದ ರನ್ನರ್ ಅಪ್ ಖ್ಯಾತಿಯ ರಾಯಲ್ ಚಾಲೆಂಜರ್ ಬೆಂಗಳೂರು ತಂಡ 10ನೇ ಐಪಿಎಲ್‌ನಲ್ಲಿ “ಚಾಲೆಂಜ್’ ಹಾಕಲು ಮರೆಯುವುದರೊಂದಿಗೆ ಪಾತಾಳ ಸೇರಿಕೊಂಡಿದೆ. ಕೊಹ್ಲಿ ಪಡೆಗೆ ಅಂತಿಮ ಸ್ಥಾನ ಬಿಟ್ಟು ಮೇಲೇಳಲು ಸಾಧ್ಯವೇ ಇಲ್ಲವೇನೋ ಎಂಬ ಆತಂಕವೂ ಕಾಡುತ್ತಿದೆ. ಆರ್‌ಸಿಬಿ ಇನ್ನೇನಿದ್ದರೂ ಉಳಿದ ತಂಡಗಳಿಗಾಗಿ ಆಡಿ ಲೀಗ್ ಔಪಚಾರಿಕತೆಯನ್ನು ಪೂರ್ತಿಗೊಳಿಸಬೇಕಿದೆ, ಅಷ್ಟೇ.
ಆರ್‌ಸಿಬಿ 11 ಪಂದ್ಯಗಳನ್ನು ಮುಗಿಸಿದ್ದು, ಎರಡನ್ನಷ್ಟೇ ಗೆದ್ದಿದೆ. ಎಂಟರಲ್ಲಿ ಸೋಲಿನ ನೆಂಟಸ್ತಿಕೆ ಮಾಡಿಕೊಂಡಿದೆ. ಒಂದು ಪಂದ್ಯ ಮಳೆಯಿಂದ ರದ್ದುಗೊಂಡಿದೆ. ಕೈಲಿರುವ ಅಂಕ ಕೇವಲ 5 ಮಾತ್ರ. ಇನ್ನು 3 ಪಂದ್ಯಗಳನ್ನಷ್ಟೇ ಆಡಬೇಕಿರುವ ಬೆಂಗಳೂರು ತಂಡ ಇವುಗಳನ್ನಾದರೂ ಗೆದ್ದು ಕೊನೆಯ ಸ್ಥಾನದಿಂದ ಮೇಲೇರಬಹುದೇ ಎಂಬುದಷ್ಟೇ ಉಳಿದಿರುವ ನಿರೀಕ್ಷೆ. ಆದರೆ ಅಭಿಮಾನಿಗಳು ಮಾತ್ರ ಈಗಾಗಲೇ ಆರ್‌ಸಿಬಿಗೆ ಬೆನ್ನು ತೋರಿಸಿ ನಡೆದಾಗಿದೆ!
ಹೀಗಿರುವಾಗಲೇ ಆರ್‌ಸಿಬಿ ಶುಕ್ರವಾರ ರಾತ್ರಿ ಚಿನ್ನಸ್ವಾಮಿ ಅಂಗಳದಲ್ಲಿ ಕಿಂಗ್ಸ್ ಇಲವೆನ್ ಪಂಜಾಬ್ ವಿರುದ್ಧ ದ್ವಿತೀಯ ಸುತ್ತಿನ ಪಂದ್ಯವನ್ನು ಆಡಲಿದೆ. ಪ್ಲೇ-ಆಫ್ ಪ್ರವೇಶಿಸುವ ನಿಟ್ಟಿನಲ್ಲಿ ಪಂಜಾಬ್‌ಗ ಈ ಪಂದ್ಯ ಅತ್ಯಂತ ಮಹತ್ವದ್ದಾಗಿದೆ. 9 ಪಂದ್ಯಗಳಲ್ಲಿ ನಾಲ್ಕನ್ನು ಗೆದ್ದಿರುವ ಮ್ಯಾಕ್ಸ್‌ವೆಲ್ ಬಳಗ 8 ಅಂಕಗಳೊಂದಿಗೆ 5ನೇ ಸ್ಥಾನದಲ್ಲಿದೆ. ಇನ್ನೊಂದು ಸ್ಥಾನ ಮೇಲೇರುವುದು ಪಂಜಾಬ್ ಗುರಿ. ತನಗಿಂತ ಕೆಳಸ್ಥಾನದಲ್ಲಿರುವ ಉಳಿದೆರಡು ತಂಡಗಳಾದ ಡೆಲ್ಲಿ ಮತ್ತು ಗುಜರಾತ್‌ಗಿಂತ ಪಂಜಾಬ್ ಉತ್ತಮ ಸ್ಥಿತಿ ಯಲ್ಲಿದೆ. ಆದರೆ ಚುಟುಕು ಕ್ರಿಕೆಟ್‌ನಲ್ಲಿ ಏನೂ ಸಂಭವಿಸಬಹುದಾದ್ದರಿಂದ ಪಂಜಾಬ್‌ಗ ಗೆಲುವೊಂದೇ ಮೂಲಮಂತ್ರವಾಗಬೇಕಿದೆ.
ಇಂದೋರ್‌ನಲ್ಲಿ ನಡೆದ ಪ್ರಥಮ ಸುತ್ತಿನ ಮುಖಾಮುಖೀಯಲ್ಲಿ ಪಂಜಾಬ್ 8 ವಿಕೆಟ್‌ಗಳ ಭಾರೀ ಅಂತರದಿಂದ ಆರ್‌ಸಿಬಿಯನ್ನು ಮಣಿಸಿತ್ತು. ಮೊದಲು ಬ್ಯಾಟ್ ಮಾಡಿದ ರಾಯಲ್ ಚಾಲೆಂಜರ್ ಎಬಿಡಿ (89) ಸಾಹಸದ ಹೊರತಾಗಿಯೂ ಗಳಿಸಿದ್ದು 4ಕ್ಕೆ 148 ರನ್ ಮಾತ್ರ. ಜವಾಬಿತ್ತ ಪಂಜಾಬ್ 14.3 ಓವರ್‌ಗಳಲ್ಲಿ ಎರಡೇ ವಿಕೆಟಿಗೆ 150 ರನ್ ಬಾರಿಸಿ ವಿಜಯಿಯಾಯಿತು. ಆಮ್ಲ ಅಜೇಯ 58, ಮ್ಯಾಕ್ಸ್‌ವೆಲ್ ಅಜೇಯ 43 ಹಾಗೂ ವೋಹ್ರಾ 34 ರನ್ ಹೊಡೆದು ಪಂಜಾಬ್‌ಗ ಸುಲಭ ಜಯ ತಂದಿತ್ತರು. ಇದಕ್ಕೆ ಸೇಡು ತೀರಿಸುವಷ್ಟು ಸಾಮರ್ಥ್ಯ ಆರ್‌ಸಿಬಿ ಬಳಿ ಉಳಿದಿದೆಯೇ ಎಂಬುದು ದೊಡ್ಡ ಪ್ರಶ್ನೆ!
ಉಳಿದವರಿಗೆ ಅವಕಾಶ ಲಭಿಸಲಿ: ಆರ್‌ಸಿಬಿ ದುರಂತದಲ್ಲಿ ಬ್ಯಾಟ್ಸ್‌ಮನ್‌ಗಳ ಪಾತ್ರವೇ ದೊಡ್ಡದಾಗಿತ್ತು ಎಂಬುದರಲ್ಲಿ ಅನುಮಾನವೇ ಇಲ್ಲ. ಕ್ಯಾಪ್ಟನ್ ಕೊಹ್ಲಿ, ಗೇಲ್, ಡಿ ವಿಲಿಯರ್, ವಾಟ್ಸನ್, ಜಾಧವ್ ಅವರಂಥ ಘಟಾನುಘಟಿ ಬ್ಯಾಟ್ಸ್‌ಮನ್‌ಗಳ ಸಾಮೂಹಿಕ ವೈಫಲ್ಯ ನಿಜಕ್ಕೂ ಅಕ್ಷಮ್ಯ. ಅಷ್ಟೇನೂ ಬೌಲಿಂಗ್ ಬಲ ಹೊಂದಿರದ ತಂಡಕ್ಕೆ ಇಂಥ ವಿಶ್ವದರ್ಜೆಯ ಬ್ಯಾಟ್ಸ್‌ಮನ್‌ಗಳೇ ಆಧಾರಸ್ತಂಭವಾಗಬೇಕಿತ್ತು.