Advertisement

ಆರೋಪಿ ರೌಡಿಶೀಟರ್‌ ಸಾದಿಕ್‌ ಬಂಧನ

03:00 AM Jun 29, 2017 | Karthik A |

ಪುತ್ತೂರು: ಅಕ್ರಮ ಗಣಿಗಾರಿಕೆಯ ವಿಚಾರಕ್ಕೆ ಸಂಬಂಧಿಸಿ ಪುತ್ತೂರಿನ ಕಬಕದಲ್ಲಿ ನಾಲ್ಕು ಮಂದಿಯ ತಂಡವೊಂದು ಟಿಪ್ಪರ್‌ ಮಾಲಕನಿಗೆ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಬುಧವಾರ ಸಂಭವಿಸಿದೆ. ಪ್ರಕರಣದ ಆರೋಪಿ ಬಂಟ್ವಾಳ ತಾಲೂಕಿನ ವಿಟ್ಲಮುಟ್ನೂರು ಗ್ರಾಮದ ಕೊಡಂಗೈ ನಿವಾಸಿ ಸಾದಿಕ್‌ ರೌಡಿಶೀಟರ್‌ ಸಾದಿಕ್‌ ಯಾನೆ ಬ್ಲೇಡ್‌ ಸಾದಿಕ್‌ನನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಗಾಯಗೊಂಡಿರುವ ಟಿಪ್ಪರ್‌ ಮಾಲಕ, ಕೊಡಿಪ್ಪಾಡಿ ಗ್ರಾಮದ ಕಲ್ಲಂದಡ್ಕ ನಿವಾಸಿ ಅಬ್ದುಲ್‌ ಖಾದರ್‌ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಅಕ್ರಮ ಗಣಿಗಾರಿಕೆಯ ವಿರುದ್ಧ ದೂರು ನೀಡಿದ್ದಕ್ಕಾಗಿ, ಅಕ್ರಮ ಗಣಿಯ ಮಾಲಕರು ಸುಪಾರಿ ಕೊಟ್ಟು ನನ್ನನ್ನು ಕೊಲೆ ಮಾಡಲು ಯತ್ನಿಸಿದ್ದಾರೆ ಎಂದು ಗಾಯಾಳು ಅಬ್ದುಲ್‌ ಖಾದರ್‌ ನಗರ ಪೊಲೀಸರು ಠಾಣೆ ಯಲ್ಲಿ ದೂರು ನೀಡಿದ್ದಾರೆ.

Advertisement

ಪ್ರಕರಣದ ವಿವರ
ಗಾಯಾಳು ಅಬ್ದುಲ್‌ ಖಾದರ್‌ ಅವರು ಬುಧವಾರ ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಕಬಕದ ಮೊಬೈಲ್‌ ಅಂಗಡಿಯೊಂದರಲ್ಲಿ ಕುಳಿತಿದ್ದ ಸಂದರ್ಭ ಈ ಘಟನೆ ಸಂಭವಿಸಿದೆ.. ಈ ಹಿಂದೆ ದೂರವಾಣಿ ಮೂಲಕ ಮಾಡಿ ಬೆದರಿಕೆ ಒಡ್ಡಿದ್ದ ವ್ಯಕ್ತಿ ಕರೆ ಮಾಡಿದ್ದ. ನಂಬರ್‌ ತಿಳಿದಿದ್ದ ಕಾರಣ ಫೋನ್‌ ರಿಸೀವ್‌ ಮಾಡಲಿಲ್ಲ. ಇನ್ನೇನು ಪೊಲೀಸ್‌ ಠಾಣೆಗೆ ತೆರಳಿ ದೂರು ನೀಡಲು ಯೋಚಿಸುತ್ತಿದ್ದಾಗ 4 ಮಂದಿಯ ತಂಡ ಕಾರಿನಲ್ಲಿ ಬಂದು ನನ್ನ ಮೇಲೆ ಏಕಾಏಕಿ ಹಲ್ಲೆ ನಡೆಸಿದೆ. ನಾನು ಅಂಗಡಿಯೊಳಗೆ ಓಡಿ ಹೋಗಿ ಕುಸಿದು ಬಿದ್ದೆ. ಅಂಗಡಿಯಲ್ಲಿದ್ದ ಕೆಲವು ಪರಿಕರಗಳನ್ನು ಎತ್ತಿಕೊಂಡು ಅದರಿಂದಲೂ ಹೊಡೆದಿದ್ದಾರೆ. ಅಂಗಡಿಯನ್ನು ಧ್ವಂಸ ಮಾಡಿ ದ್ದಾರೆ ಎಂದು ಖಾದರ್‌ ದೂರಿದ್ದಾರೆ.

ಆರೋಪಿ ರೌಡಿ ಶೀಟರ್‌
ಕರ್ನಾಟಕ ಮತ್ತು ಕೇರಳ ಸೇರಿದಂತೆ ನಾನಾ ಪೊಲೀಸ್‌ ಠಾಣೆಗಳಲ್ಲಿ ಸಾದಿಕ್‌ ವಿರುದ್ಧ ಪ್ರಕರಣ ದಾಖಲಾಗಿವೆ ಎಂದು ತಿಳಿದು ಬಂದಿದೆ. ವಿಟ್ಲ ಠಾಣೆ ಪೊಲೀಸರು ಈತನನ್ನು ಬಂಧಿಸಿ ಗೂಂಡಾ ಕಾಯಿದೆ ದಾಖಲಿಸಿದ್ದರು. ಇತ್ತಿಚೇಗಷ್ಟೆ ಈತ ಹೈಕೋರ್ಟ್‌ನಿಂದ ಜಾಮೀನು ಪಡೆದುಕೊಂಡಿದ್ದ ಎನ್ನಲಾಗಿದೆ. ಉಮ್ಮರ್‌ ಮತ್ತು ಅಬ್ದುಲ್‌ ಖಾದರ್‌ ನಡುವೆ ಗಣಿಗಾರಿಕೆ ಸಂಬಂಧ ದ್ವೇಷವಿದ್ದು, ಇದೇ ಹಿನ್ನೆಲೆಯಿಂದ ಬ್ಲೇಡ್‌ ಸಾದಿಕ್‌ಗೆ ಸುಪಾರಿ ನೀಡಲಾಗಿದೆ ಎನ್ನಲಾಗಿದೆ. ಕಾಲಿಯಾ ರಫೀಕ್‌ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಾದಿಕ್‌ ಯಾನೆ ಬ್ಲೇಡ್‌ ಸಾದಿಕ್‌ ಬಳಿಕ ಜಾಮೀನು ಪಡೆದುಕೊಂಡಿದ್ದ.

ಬುಧವಾರ ದಾಳಿ ನಡೆಸಿದ ತಂಡದಲ್ಲಿ ಸಾದಿಕ್‌ ಯಾನ್‌ ಬ್ಲೇಡ್‌ ಸಾದಿಕ್‌, ಇನ್ನೊಬ್ಬ ಕುಖ್ಯಾತ ಆರೋಪಿ ಪದ್ಮನಾಭ ಆಲಿಯಾಸ್‌ ಪದ್ದ ಎಂದು ಗುರುತಿಸಲಾಗಿದೆ. ಇನ್ನಿಬ್ಬರನ್ನು ಪದ್ಮನಾಭ ಕರೆ ತಂದಿದ್ದ. ಅವರು ಯಾರು ಎನ್ನುವುದು ಗೊತ್ತಾಗಿಲ್ಲ. ಸಾದಿಕ್‌ನನ್ನು ಜನರೇ ಹಿಡಿದು ಕೊಟ್ಟಿದ್ದಾರೆ. ಉಳಿದ ಮೂವರು ಪರಾರಿಯಾಗಿದ್ದಾರೆ. ಸಾದಿಕ್‌ನನ್ನು ಬಂಧಿಸಿ ಕೊಲೆಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ಪುತ್ತೂರು ನಗರ ಇನ್ಸ್‌ಪೆಕ್ಟರ್‌ ಮಹೇಶ್‌ ಪ್ರಸಾದ್‌ ಅವರು ತಿಳಿಸಿದ್ದಾರೆ.

ಅಕ್ರಮ ಗಣಿಗಾರಿಕೆ ದ್ವೇಷ
ಕಲ್ಲಂದಡ್ಕದಲ್ಲಿ ಅಕ್ರಮ ಕಲ್ಲು ಗಣಿ ಗಾರಿಕೆ ನಡೆಯುತ್ತಿದ್ದು, ಅದರ ವಿರುದ್ಧ  2013ರಲ್ಲಿ ದೂರು ನೀಡಿದ್ದೇವು. ಗಣಿ ಮತ್ತು ಭೂವಿಜ್ಞಾನ ಇಲಾಖೆಯವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದರು. ಗಣಿ ಮಾಲಕ ಉಮ್ಮರ್‌ ವಿರುದ್ಧ  ಕ್ರಿಮಿನಲ್‌ ಪ್ರಕರಣ ದಾಖಲಿಸಲಾಗಿತ್ತು. ಈ ಪ್ರಕರಣ ನ್ಯಾಯಾಲಯದಲ್ಲಿ ವಿಚಾಣೆರಯಲ್ಲಿದೆ. ಇದೇ ವಿಚಾರಕ್ಕೆ ದ್ವೇಷ ಇಟ್ಟುಕೊಂಡಿದ್ದ ಗಣಿ ಮಾಲಕರು ರೌಡಿ ಶೀಟರ್‌ಗಳಿಗೆ ಸುಪಾರಿ ನೀಡಿ ಕೊಲೆಗೆ ಯತ್ನಿಸಿದ್ದಾರೆ. ಒಂದು ತಿಂಗಳ ಹಿಂದೆ ಧಮ್ಕಿ ಹಾಕಿದ್ದರು. ಬ್ಲೇಡ್‌ ಸಾದಿಕ್‌ ನಿನ್ನನ್ನು ಹುಡುಕುತ್ತಿದ್ದಾನೆ ಎಂದು ಅದೇ ದಿನ ಕಬಕದಲ್ಲಿ ಗೆಳೆಯರು ನನಗೆ ತಿಳಿಸಿದ್ದರು ಎಂದು ಖಾದರ್‌ ಆಪಾದಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next