Advertisement
ಮಂಗಳೂರು: ಕೊಲೆ ಯತ್ನ, ದರೋಡೆ ಪ್ರಕರಣಗಳ ಆರೋಪಿ, ರೌಡಿಶೀಟರ್ ವಾಮಂಜೂರಿನ ಕುಟ್ಟಿಪಲ್ಕೆ ನಿವಾಸಿ ಪವನ್‌ರಾಜ್ ಶೆಟ್ಟಿ (21)ಯನ್ನು ದುಷ್ಕರ್ಮಿಗಳ ತಂಡವೊಂದು ಮಚ್ಚಿನಿಂದ ಕಡಿದು ಕೊಲೆ ಮಾಡಿದೆ. ಸೋಮವಾರ ಘಟನೆ ನಡೆದಿದ್ದು ಮಂಗಳವಾರ ಬೆಳಗ್ಗೆ ಬೆಳಕಿಗೆ ಬಂದಿದೆ. ಈತ 2009ರ ಜು. 4ರಂದು ಕೊಲೆಯಾದ ರೌಡಿಶೀಟರ್ ವಾಮಂಜೂರು ರೋಹಿ ಯಾನೆ ರೋಹಿದಾಸ್ ಶೆಟ್ಟಿಯ ಪುತ್ರ.
ಕೊಲೆಯಾದ ಪವನ್‌ರಾಜ್ ಮೇಲೆ ಕೊಲೆ ಯತ್ನ, ದರೋಡೆ ಸಹಿತ ನಗರದ ವಿವಿಧ ಠಾಣೆಗಳಲ್ಲಿ ಒಟ್ಟು 4 ಪ್ರಕರಣಗಳು ದಾಖಲಾಗಿವೆ. ಆತನ ಮೇಲೆ ಪೊಲೀಸರು ರೌಡಿಶೀಟರ್ ಪ್ರಕರಣ ದಾಖಲಿಸಿದ್ದರು. 2014ರಲ್ಲಿ ವಾಮಂಜೂರು ಚೆಕ್‌ಪೋಸ್ಟ್ ಬಳಿ ಹೊಟೇಲ್‌ಗೆ ಊಟ ತರಲೆಂದು ಹೋದ ಸಂತೋಷ್ ಕೊಟ್ಟಾರಿ ಮೇಲೆ ಕೋಳಿ ಬಾಳು ಬಳಸಿ ಕೊಲೆಗೆ ಯತ್ನಿಸಿದ ಪ್ರಕರಣದಲ್ಲಿ ಪವನ್‌ರಾಜ್ ಪ್ರಮುಖ ಆರೋಪಿಯಾಗಿದ್ದ. ಗಂಭೀರ ಗಾಯಗೊಂಡ ಕೊಟ್ಟಾರಿ ಪ್ರಾಣಾಪಾಯದಿಂದ ಪಾರಾಗಿದ್ದು ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತಂದೆ ರೋಹಿದಾಸ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ಹಣಕಾಸಿನ ನೆರವು ನೀಡಿದರೆಂಬ ಕಾರಣಕ್ಕೆ ವಾಮಂಜೂರಿನ ಉದ್ಯಮಿ ಹಾಗೂ ರಾಜಕೀಯ ವ್ಯಕ್ತಿಯೊಬ್ಬರ ಕೊಲೆಗೆ ಸಂಚು ರೂಪಿಸಿದ ಆರೋಪದಲ್ಲಿ 2015ರ ಜೂ. 24ರಂದು ಸಿಸಿಬಿ ಪೊಲೀಸರು ಬಂಧಿಸಿದ್ದು ಈ ಪ್ರಕರಣ ಕೂಡ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ದಾಖಲಾಗಿತ್ತು. ನಗರದ ಮಂಗಳಾದೇವಿ ಸಮೀಪ 2016ರಲ್ಲಿ ನಡೆದ ದರೋಡೆ ಯತ್ನ ಪ್ರಕರಣದಲ್ಲೂ ಆರೋಪಿಯಾಗಿರುವ ಈತನ ಮೇಲೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣವಿದೆ. 2017ರಲ್ಲಿ ಗುರುಪುರ ಪರಾರಿಯಲ್ಲಿ ಶ್ರೀಮಂತ ವ್ಯಕ್ತಿಗಳ ದರೋಡೆಗೆ ಯತ್ನಿಸುತ್ತಿದ್ದ ಪ್ರಕರಣದಲ್ಲಿ ಆತನನ್ನು ಮಂಗಳೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದರು.
Related Articles
ಗುರುಪುರ ಪರಾರಿ ಬಳಿ ದರೋಡೆ ಪ್ರಕರಣದಲ್ಲಿ ಬಂಧಿತನಾಗಿದ್ದ ಈತ 2 ತಿಂಗಳ ಹಿಂದೆ ಜಾಮೀನು ಪಡೆದಿದ್ದ. ಬಳಿಕ ಮನೆಯಲ್ಲೇ ಇರುತ್ತಿದ್ದ.
Advertisement
ಕ್ರೀಡೆಯಲ್ಲಿ ಆಸಕ್ತಿಕುಟ್ಟಿಪಲ್ಕೆ ರೋಹಿದಾಸ್ ಮತ್ತು ಪುಷ್ಪಾ ದಂಪತಿಯ ಮೂವರು ಮಕ್ಕಳಲ್ಲಿ ಪವನ್‌ರಾಜ್ ಶೆಟ್ಟಿ ಮೊದಲನೆಯವನಾಗಿದ್ದು ಎಸ್‌ಎಸ್‌ಎಲ್‌ಸಿವರೆಗೆ ವ್ಯಾಸಂಗ ಮಾಡಿದ್ದ. ಇಬ್ಬರು ಅವಳಿ ತಮ್ಮಂದಿರಿದ್ದು ಕಾಲೇಜು ವ್ಯಾಸಂಗ ಮಾಡುತ್ತಿದ್ದಾರೆ. ಪವನ್‌ರಾಜ್ ಕ್ರೀಡಾಪಟುವಾಗಿದ್ದು ಉತ್ತಮ ಓಟಗಾರನಾಗಿದ್ದ. ಗಾಂಜಾ ಹಾವಳಿ
ಪಾಳುಬಿದ್ದ ಮನೆಯಲ್ಲಿ ಯುವಕರು ಗಾಂಜಾ ಸೇವನೆ ಮಾಡುತ್ತಿರುತ್ತಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಪವನ್‌ರಾಜ್ ಇದೇ ಮನೆಯಲ್ಲಿ ಹೆಚ್ಚಾಗಿ ಕಾಲಕಳೆಯುತ್ತಿದ್ದ. ಮೂಡುಶೆಡ್ಡೆ ಹಾಗೂ ಕುಟ್ಟಿಪಲ್ಕೆಯ ಕೆಲವು ಪ್ರದೇಶಗಳಲ್ಲಿ ಗಾಂಜಾ ಹಾವಳಿ ಹೆಚ್ಚುತ್ತಿರುವ ದೂರುಗಳು ವ್ಯಕ್ತವಾಗಿವೆ. ಆರೋಪಿಗಳ ಸುಳಿವು ಲಭ್ಯ: ಕಮಿಷನರ್
ರೌಡಿಶೀಟರ್ ಪವನ್‌ರಾಜ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮಾಹಿತಿ ಕಲೆ ಹಾಕಲಾಗುತ್ತಿದೆ. ನಾಲ್ವರು ಆರೋಪಿಗಳ ಬಗ್ಗೆ ಪ್ರಾಥಮಿಕ ಸುಳಿವು ಸಿಕ್ಕಿದ್ದು ಶೀಘ್ರದಲ್ಲಿ ಬಂಧಿಸುವ ವಿಶ್ವಾಸವಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಹೇಳಿದರು. ಪವನ್‌ರಾಜ್ ಮೇಲೆ ನಗರದ ವಿವಿಧ ಠಾಣೆಗಳಲ್ಲಿ 4 ಪ್ರಕರಣಗಳಿದ್ದು, ಮಚ್ಚಿನಿಂದ ಹಲ್ಲೆ ಮಾಡಿ ಹತ್ಯೆ ಮಾಡಲಾಗಿದೆ. ಮೇಲ್ನೋಟಕ್ಕೆ ಇದು ಪೂರ್ವದ್ವೇಷದ ಹಿನ್ನೆಲೆಯಲ್ಲಿ ನಡೆದ ಕೃತ್ಯದಂತೆ ಕಾಣುತ್ತದೆ. ಈತನಿಗೆ ಈ ಹಿಂದೆ ಹಲವರಿಂದ ಬೆದರಿಕೆಯಿದ್ದು, ತಂಡಗಳ ಮಧ್ಯೆ ಜಗಳವಾಗುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ. ಸಿಸಿಬಿ ಪೊಲೀಸರ ತಂಡ ಮತ್ತು ಗ್ರಾಮಾಂತರ ಪೊಲೀಸರ ತಂಡ ತನಿಖೆ ನಡೆಸುತ್ತಿದೆ ಎಂದರು. ತಲೆ, ಕುತ್ತಿಗೆಯ ಮೇಲೆ ಗಾಯ
ಪವನ್‌ರಾಜ್‌ನ ಕುತ್ತಿಗೆ ಹಾಗೂ ತಲೆಯ ಮೇಲೆ ಗಾಯಗಳಾಗಿವೆ. ಘಟನಾ ಸ್ಥಳದಲ್ಲಿ ಎರಡು ಮಚ್ಚು, ಮೊಬೈಲ್, ಚಪ್ಪಲಿ, ಗೋಡೆಯಲ್ಲಿ ರಕ್ತದ ಕಲೆಗಳು ಕಂಡುಬಂದಿವೆ. ಶ್ವಾನದಳದಿಂದ ತಪಾಸಣೆ ನಡೆಸ ಲಾಗಿದ್ದು ಕೊಲೆಯಾದ ಸ್ಥಳದಿಂದ 50 ಮೀಟರ್ ದೂರಕ್ಕೆ ಹೋಗಿ ಶ್ವಾನ ನಿಂತಿದೆ. ಮಳೆ ಬಂದ ಕಾರಣ ಕುರುಹು ನಾಶವಾಗಿರುವ ಸಾಧ್ಯತೆಗಳಿವೆ. ವಿಧಿವಿಜ್ಞಾನ ಸಿಬಂದಿ ಸ್ಥಳ ಪರಿಶೀಲನೆ ನಡೆಸಿದರು. ನಗರ ಪೊಲೀಸ್ ಆಯುಕ್ತ ಸುರೇಶ್, ದ.ಕ. ಜಿಲ್ಲಾ ಎಸ್ಪಿ ಸುಧೀರ್ ರೆಡ್ಡಿ, ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿ ಶಾಂತರಾಜು, ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಹನುಮಂತರಾಯ, ದಕ್ಷಿಣ ವಿಭಾಗದ ಎಸಿಪಿ ರಾಮರಾವ್, ಪೊಲೀಸ್ ಇನ್‌ಸ್ಪೆಕ್ಟರ್‌ಗಳಾದ ಶಿವಪ್ರಸಾದ್, ಟಿ.ಡಿ. ನಾಗರಾಜ್, ಎಸ್‌ಐ ಸುಧಾಕರ್ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ರೋಹಿಯ ಹತ್ಯೆಯೂ ಜುಲೈಯಲ್ಲೇ ನಡೆದಿತ್ತು
ಪವನ್‌ರಾಜ್ ತಂದೆ ವಾಮಂಜೂರು ರೋಹಿ ಯಾನೆ ರೋಹಿದಾಸ್ ಶೆಟ್ಟಿ ಕುಖ್ಯಾತ ರೌಡಿಯಾಗಿ ಗುರುತಿಸಿಕೊಂಡಿದ್ದ. ನಾಗೇಶ್ ಪೂಜಾರಿ, ಕ್ಯಾಂಡಲ್ ಸಂತು ಕೊಲೆ ಪ್ರಕರಣ ಹಾಗೂ ಕೊಲೆ ಯತ್ನ, ಹಲ್ಲೆ ಪ್ರಕರಣಗಳು ಈತನ ಮೇಲಿದ್ದವು. ಜೈಲಿನಿಂದ ಬಿಡುಗಡೆಯಾಗುತ್ತಿದ್ದಂತೆ ಜೀವ ಬೆದರಿಕೆ ಬರುತ್ತಿದ್ದವು. ಇದಕ್ಕಾಗಿ ಆತ ತನ್ನ ಮನೆಯಲ್ಲಿ ವಾಸ ಮಾಡುತ್ತಿರಲಿಲ್ಲ. ಸಂಬಂಧಿಕರ ಮನೆಯಲ್ಲಿ ವಾಸವಿದ್ದಾಗ 2009 ಜು. 4ರ ತಡರಾತ್ರಿ ತಂಡವೊಂದು ಏಕಾಏಕಿ ನುಗ್ಗಿ ತಲವಾರು ದಾಳಿ ನಡೆಸಿತ್ತು. ಪರಿಣಾಮ ರೋಹಿದಾಸ್ ಕೊನೆಯುಸಿರೆಳೆದಿದ್ದ. ಮಡುಗಟ್ಟಿದ ಶೋಕ
ಕುಟ್ಟಿಪಲ್ಕೆಯ ರಸ್ತೆಯ ಮೂಲೆಯಲ್ಲಿ ಪವನ್ ರಾಜ್‌ನ ಹೆಂಚಿನ ಮನೆ ಇದೆ. ಹೊರಗೆ ಸಂಬಂಧಿಕರು, ಪೊಲೀಸರು ಸೇರಿದ್ದರೆ ಮನೆಯೊಳಗೆ ಶೋಕ ಮಡುಗಟ್ಟಿತ್ತು. ಆತನ ಅಜ್ಜಿ ಮೊಮ್ಮಗನ ನೆನೆದು ಗಟ್ಟಿಯಾಗಿ ರೋದಿಸುತ್ತಿದ್ದರು. ತಾಯಿ ಮೌನವಾಗಿ ಕಣ್ಣೀರು ಸುರಿಸುತ್ತಿದ್ದರೆ ಇಬ್ಬರು ಸಹೋದರರು ಮೌನವಾಗಿ ಕುಳಿತಿದ್ದರು.