ಉಡುಪಿ: ಹಿರಿಯಡ್ಕ ಪೇಟೆಯಲ್ಲಿ ಗುರುವಾರ ಮಧ್ಯಾಹ್ನ ನಡೆದ ರೌಡಿಶೀಟರ್ ಕಿಶನ್ ಹೆಗ್ಡೆ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ಆರೋಪಿಗಳನ್ನು ಬಂಧಿಸಲಾಗಿದ್ದು, ಈ ಕುರಿತು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಅವರು ಸ್ಪಷ್ಟಪಡಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮನೋಜ್ ಕುಲಾಲ್(37) , ಚಿತ್ತರಂಜನ್ ಪೂಜಾರಿ(27), ಚೇತನ್(32), ರಮೇಶ್ ಪೂಜಾರಿ(38), ದೀಕ್ಷಿತ್ ಶೆಟ್ಟಿ(29) ಎನ್ನಲಾಗಿದೆ.
ಬಂಧಿತ ಆರೋಪಿಗಳಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಈಗಾಗಲೇ ಹಲವು ಠಾಣೆಗಳಲ್ಲಿ ಕೊಲೆ, ದರೋಡೆ, ಹಲ್ಲೆಗೆ ಸಂಬಂಧಿಸಿದಂತೆ ಪ್ರಕರಣಗಳು ದಾಖಲಾಗಿವೆ. ಅದಲ್ಲದೆ ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಒಟ್ಟು ಮೂರು ಕಾರುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ : ಹಿರಿಯಡ್ಕದ ನಡುರಸ್ತೆಯಲ್ಲಿ ಹಾಡುಹಗಲೇ ರೌಡಿಶೀಟರ್ ನ ಕೊಚ್ಚಿಕೊಲೆ
ಘಟನೆ ಹಿನ್ನೆಲೆ :
ಸೆಪ್ಟೆಂಬರ್ 24ರಂದು ಮಂಗಳೂರಿನ ದಿವ್ಯರಾಜ್ ಶೆಟ್ಟಿ ಹಾಗೂ ಹರಿಪ್ರಸಾದ್ ಶೆಟ್ಟಿ ಅವರೊಂದಿಗೆ ಕಿಶನ್ ಹೆಗ್ಡೆ ಹಿರಿಯಡ್ಕ ವೀರಭದ್ರ ದೇವಸ್ಥಾನಕ್ಕೆಂದು ತೆರಳಲು ಕಾರಿನಿಂದ ಇಳಿಯುವ ವೇಳೆ ಗುರುವಾರ ಕೊಲೆ ನಡೆದಿತ್ತು.
ಸುತ್ತಿಗೆ, ಮಾರಕಾಯುಧಗಳನ್ನು ಹಿಡಿದುಕೊಂಡು ಕಾರಿನ ಮುಂಭಾಗದಿಂದ ಆಗಮಿಸಿದ 4-5 ಮಂದಿಯ ತಂಡ ಏಕಾಏಕಿಯಾಗಿ ಕಾರಿನ ಗಾಜಿಗೆ ಸುತ್ತಿಗೆಯಿಂದ ಹೊಡೆದು ಜಖಂ ಗೊಳಿಸಿತ್ತು. ಅನಂತರ ಕಿಶನ್ ಹೆಗ್ಡೆ ಮೇಲೆ ಮನೋಜ್ ತಲವಾರಿನಿಂದ ಕಡಿದು ಗಾಯಗೊಳಿಸಿದ್ದ. ತಪ್ಪಿಸಿಕೊಳ್ಳಲು ಯತ್ನಿಸಿದ ಕಿಶನ್‌ನನ್ನು ಹಿಂಬಾಲಿಸಿದ ತಂಡ ತಲೆಗೆ ಬಲವಾಗಿ ಹೊಡೆದು ಕೊಲೆ ನಡೆಸಿದೆ. ಕಿಶನ್ ಹೆಗ್ಡೆ ಜತೆಯಲ್ಲಿದ್ದರ ಪೈಕಿ ಹರಿಪ್ರಸಾದ್ ಶೆಟ್ಟಿಯವರ ತಲೆಗೂ ಏಟು ಬಿದ್ದಿದೆ.
ಕೋಡಿಕೆರೆ ತಂಡದ ಕೃತ್ಯ ರೌಡಿಶೀಟರ್‌ಗಳಾದ ಕಿಶನ್ ಹೆಗ್ಡೆ ಹಾಗೂ ಮನೋಜ್ ಕೋಡಿಕೆರೆ ಅವರ ನಡುವೆ ಹಣಕಾಸಿನ ವಿಚಾರದಲ್ಲಿ ವೈಮನಸ್ಸು ಉಂಟಾಗಿ ಮನೋಜ್ ಕೋಡಿಕೆರೆ ಇತರರೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾನೆ ಎನ್ನುವುದು ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಕೊಲೆಯ ಬಳಿಕ ಆರೋಪಿಗಳು ರಿಡ್ಜ್ ಹಾಗೂ ಇನೋವಾ ಕಾರಿನಲ್ಲಿ ತೆರಳಿದ್ದರು. ರಿಡ್ಜ್ ಕಾರು ಗುರುವಾರವೇ ಕಣಂಜಾರು ಬಳಿಯ ಬ್ರಹ್ಮಲಿಂಗೇಶ್ವರ ಮೇಲಂಟೆ ದೇವಸ್ಥಾನದ ಬಳಿ ಪತ್ತೆ ಯಾಗಿತ್ತು. ಇನೋವಾ ಕಾರು ಶುಕ್ರವಾರ ಕಾರ್ಕಳ ಸಮೀಪದ ಇರ್ವತ್ತೂರುವಿನಲ್ಲಿ ಪತ್ತೆಯಾಗಿತ್ತು.