ಬೆಂಗಳೂರು: ಕೊಲೆ, ಕೊಲೆಯತ್ನ ದರೋಡೆ ಮತ್ತು ಅಪಹರಣ ಸೇರಿ 15 ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿಶೀಟರ್ನನ್ನು ಗೋವಿಂದಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಸರ್ವಜ್ಞನಗರದ ನಿವಾಸಿ ರೌಡಿ ಮೊಹಮ್ಮದ್ ಶಾಬಾಜ್ ಅಲಿಯಾಸ್ ಮೊಹಮ್ಮದ್ ಫರ್ಹಾನ್(27) ಬಂಧಿತ ರೌಡಿಶೀಟರ್.
ಗೋವಿಂದಪುರ ಠಾಣೆಯ ರೌಡಿಶೀಟರ್ ಆಗಿರುವ ಆರೋಪಿ, 2017 ರಿಂದಲೂ ಹಲವು ಗಂಭೀರ ಸ್ವರೂಪದ ಪ್ರಕರಣಗಳಲ್ಲಿ ಭಾಗಿ ಯಾಗಿದ್ದು, ಈತನು 6 ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ಹೀಗಾಗಿ ಕೋರ್ಟ್ ಆರೋಪಿಯ ವಿರುದ್ಧ ಜಾಮೀನು ರಹಿತ ವಾರೆಂಟ್ ಆದೇಶ ಹೊರಡಿಸಿತ್ತು. ಜತೆಗೆ ಈತನ ಸಮಾಜಘಾತುಕ ಕಾನೂನು ಬಾಹಿರ ಕೃತ್ಯಗಳನ್ನು ನಿಯಂತ್ರಿಸುವುದು ಕಷ್ಟಸಾಧ್ಯವಾಗಿದ್ದರಿಂದ ಈತನನ್ನು ಪ್ರತಿಬಂಧಕ ಕಾಯ್ದೆಯಡಿ ಬಂಧನದಲ್ಲಿಡಲು ಗೋವಿಂದ ಪುರ ಪೊಲೀಸ್ ಠಾಣೆ ಅಧಿಕಾರಿಗಳು, ಪೂರ್ವ ವಿಭಾಗದ ಉಪ ಪೊಲೀಸ್ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಪ್ರಸ್ತಾವ ನೆಯನ್ನು ಹೆಚ್ಚುವರಿ ಪೊಲೀಸ್ ಆಯುಕ್ತ (ಅಪರಾಧ) ವಿಭಾಗ ಶಿಫಾರಸ್ಸಿನ ಮೇರೆಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಬಂಧನದ ಆಜ್ಞೆಯನ್ನು ಜಾರಿಗೊಳಿಸಿದ್ದಾರೆ.
ಆರೋಪಿಯನ್ನು ಬಂಧಿಸಿ ಬಳ್ಳಾರಿ ಕಾರಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು.