ಬೆಂಗಳೂರು: ಸ್ನೇಹಿತರೊಂದಿಗೆ ಶ್ರೀರಂಗಪಟ್ಟಣದ ದೇವಸ್ಥಾನಕ್ಕೆ ಹೋಗಿ ಮನೆಗೆ ಮರಳುತ್ತಿದ್ದ ರೌಡಿಶೀಟರ್‌ನನ್ನು ಹಳೇ ದ್ವೇಷದ ಹಿನ್ನೆಲೆಯಲ್ಲಿ ನಾಲ್ಕೈದು ಮಂದಿ ದುಷ್ಕರ್ಮಿಗಳು ನಡು ರಸ್ತೆಯಲ್ಲೇ ಮಾರಕಾಸ್ತ್ರಗಳಿಂದ ದಾರುಣವಾಗಿ ಹತ್ಯೆಗೈದಿರುವ ಘಟನೆ ತಲಘಟ್ಟಪುರದ 100 ಅಡಿ ರಸ್ತೆಯಲ್ಲಿ ಸೋಮವಾರ ತಡರಾತ್ರಿ ನಡೆದಿದೆ. ರಘು ಅಲಿಯಾಸ್ ಟ್ಯಾಬ್ಲೆಟ್ ರಘು(30) ಕೊಲೆಯಾದವ. ಈತನ ವಿರುದ್ಧ ಕುಮಾರಸ್ವಾಮಿ ಲೇಔಟ್ ಠಾಣೆಯಲ್ಲಿ ಕೊಲೆ, ದರೋಡೆ ಸೇರಿದಂತೆ 10 ಪ್ರಕರಣಗಳು ದಾಖಲಾಗಿದ್ದು ರೌಡಿಪಟ್ಟಿ ತೆರೆಯಲಾಗಿದೆ.
ರಘು ತನ್ನ ಸ್ನೇಹಿತ ಮಧು ಹಾಗೂ ಇತರೆ ಮೂವರು ಸ್ನೇಹಿತರೊಂದಿಗೆ ಸೋಮವಾರ ಶ್ರೀರಂಗಪಟ್ಟಣದ ದೇವಾಲಯಕ್ಕೆ ಕಾರಿನಲ್ಲಿ ಹೋಗಿದ್ದ. ದೇವರ ದರ್ಶನ ಮುಗಿಸಿಕೊಂಡು ತಡರಾತ್ರಿ 12.30ರ ಸುಮಾರಿಗೆ ನಗರಕ್ಕೆ ವಾಪಸ್ ಬರುವಾಗ ತಲಘಟ್ಟಪುರದ 100 ಅಡಿ ರಸ್ತೆಯಲ್ಲಿರುವ ರೇಷ್ಮೆ ನಗರದ ಬಳಿ ಸ್ನೇಹಿತ ಮಧುನನ್ನು ಡ್ರಾಪ್ ಮಾಡಲು ಕಾರು ನಿಲ್ಲಿಸಿದ್ದಾರೆ.
ಇದೇ ವೇಳೆ ಇನ್ನೊಂದು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದ ನಾಲ್ಕೈದು ಮಂದಿ ದುಷ್ಕರ್ಮಿಗಳು, ಏಕಾಏಕಿ ರಘು, ಮಧು ಹಾಗೂ ಇತರರ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ರಘು ತಲೆ, ಬೆನ್ನು ಮತ್ತು ತೊಡೆ ಭಾಗಕ್ಕೆ ಮಾರಕಾಸ್ತ್ರಗಳಿಂದ ಮನಸೋಇಚ್ಚೆ ದಾಳಿ ನಡೆಸಿದ್ದಾರೆ. ತೀವ್ರ ರಕ್ತಸ್ರಾವದಿಂದ ರಘು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಮಧು ಹಾಗೂ ಇತರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರೌಡಿಶೀಟರ್ ವಜ್ರೆಶ್ ತಂಡದ ಕೃತ್ಯ
ಈ ಹಿಂದೆ ರಘು ಮತ್ತು ರೌಡಿಶೀಟರ್ ವಜ್ರೆಶ್ ಆತ್ಮೀಯರಾಗಿದ್ದರು. ಅಪರಾಧ ಕೃತ್ಯಗಳನ್ನು ಒಟ್ಟಿಗೆ ಮಾಡುತ್ತಿದ್ದರು. ಹಲವು ಪ್ರಕರಣಗಳಲ್ಲಿ ಜೈಲಿಗೆ ಹೋಗಿ ಹೊರಬಂದಿದ್ದ ಇಬ್ಬರು ಕೆಲ ವರ್ಷಗಳ ಹಿಂದೆ ರಿಯಲ್ ಎಸ್ಟೇಟ್, ಬಡ್ಡಿ ವ್ಯವಹಾರ ನಡೆಸುತ್ತಿದ್ದರು. ಒಂದು ವರ್ಷದ ಹಿಂದೆ ಇಬ್ಬರ ನಡುವೆ ಹಣಕಾಸಿನ ವಿಚಾರವಾಗಿ ಗಲಾಟೆಯಾಗಿದ್ದು, ಮಾರಾಮಾರಿ ನಡೆದಿತ್ತು. ಇದೇ ವಿಚಾರವಾಗಿ ಪರಸ್ಪರ ದ್ವೇಷ ಕಾರುತ್ತಿದ್ದರು.
ಈ ಹಿನ್ನೆಲೆಯಲ್ಲಿ ವಜ್ರೆಶ್‌ನ ಕೆಲ ಶಿಷ್ಯಂದಿರು ರಘು ಮೇಲೆ ಎರಡು ಬಾರಿ ದಾಳಿಗೆ ಮುಂದಾಗಿದ್ದರು. ಆದರೆ, ಅದೃಷ್ಟವಶಾತ್ ರಘು ತಪ್ಪಿಸಿಕೊಂಡಿದ್ದ. ಆದರೆ, ಈ ಬಾರಿ ವ್ಯವಸ್ಥಿತವಾಗಿ ಸಂಚು ರೂಪಿಸಿದ್ದ ದುಷ್ಕರ್ಮಿಗಳು, ಆತ ದೇವಸ್ಥಾನಕ್ಕೆ ಹೋಗುವುದನ್ನು ಖಚಿತ ಪಡಿಸಿಕೊಂಡು, ಅಲ್ಲಿಂದಲೇ ಹಿಂಬಾಲಿಸಿಕೊಂಡು ಬಂದು ಕೃತ್ಯವೆಸಗಿದ್ದಾರೆ ಎಂದು ರಘು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ಈ ಮೊದಲು ರಘು ಅಲಿಯಾಸ್ ಟ್ಯಾಬ್ಲೆಟ್ ರಘುನ ತಂಡದಲ್ಲಿದ್ದ ವಜ್ರೆàಶ್ ಎಂಬಾತನ ವಿರುದ್ಧ ರಘು ಸಂಬಂಧಿಕರು ಮತ್ತು ಸ್ನೇಹಿತರು ದೂರು ನೀಡಿದ್ದಾರೆ. ಆರೋಪಿಗಳ ಬಗ್ಗೆ ಮಾಹಿತಿಯಿದ್ದು, ಸದ್ಯದಲ್ಲೇ ಬಂಧಿಸುತ್ತೇವೆ.
-ಡಾ ಶರಣಪ್ಪ, ದಕ್ಷಿಣ ವಿಭಾಗ ಡಿಸಿಪಿ