Advertisement

ಸಾಲು ಮರದ ವೀರಾಚಾರಿ

09:17 AM Mar 01, 2020 | Lakshmi GovindaRaj |

ಕುಲುಮೆಯ ಬೆಂಕಿ ಮುಂದೆ, ದುಡಿದು ದಣಿವ ಜೀವ. ಪ್ರಾಯ 65 ದಾಟಿದೆ. ಕಮ್ಮಾರಿಕೆಯಿಂದ ಬಂದ ನಾಲ್ಕಾರು ಕಾಸನ್ನು ವೀರಾಚಾರಿ ಅವರು ಬ್ಯಾಂಕಿನಲ್ಲಿ ಕೂಡಿಡದೆ, ನಮ್ಮೆಲ್ಲರ ನಾಳೆಗೆ ಸಮರ್ಪಿಸುತ್ತಾರೆ. 30 ವರ್ಷದಿಂದ ಸಹಸ್ರಾರು ಹಸಿರು ಗಿಡಗಳನ್ನು ನೆಟ್ಟು, ಮರಗಳನ್ನಾಗಿ ಬೆಳೆಸಿದ್ದಾರೆ…

Advertisement

“ಸಾಲುಮರ’ ಎಂದಾಕ್ಷಣ ನೆನಪಾಗುವುದು ತಿಮ್ಮಕ್ಕನ ತುಂಬು ನಗುವಿನ ಚಿತ್ರ. ಊರು ತುಂಬಾ ಹಾಸಿದ ಹಸಿರಿನ ನೆರಳು. ಹಾಗೆಯೇ ತಿಮ್ಮಕ್ಕನಂತೆ ವೃಕ್ಷತಪಸ್ವಿಯಾಗಿ, ನಾಡಿನ ಕಣ್ಣಿಗೆ ಕಾಣದಂತೆ, ಹಸಿರು ಬಿತ್ತುತ್ತಿರುವ ಹಣ್ಣು ಜೀವವೇ, “ಸಾಲುಮರದ ವೀರಾಚಾರಿ’. ಊರೂರು ಅಲೆಯುತ್ತಾ “ಗಿಡ ತಗೊಳ್ಳಿ, ಗಿಡನೆಡಿ, ಪರಿಸರ ಕಾಪಾಡಿ’ ಎಂದು ಜನರನ್ನು ಕೂಗಿ ಕರೆದು, ಸಸಿಗಳನ್ನು ಪುಕ್ಕಟೆ ವಿತರಿಸುತ್ತಾ, ಹಸಿರಿನ ತೋರಣ ಕಟ್ಟಿದ ವೃಕ್ಷ ಸೇವಕ.

ಪುಟ್ಟ ದೇಹ. ಕಡುಕಪ್ಪು ಬಣ್ಣದ 65ರ ಸುಮಾರಿನ ವೀರಾಚಾರಿ ಅವರು, ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮಿಟ್ಲಕಟ್ಟೆ ವಾಸಿ. ಮೂಲ ವೃತ್ತಿ ಕಮ್ಮಾರಿಕೆ. ಕುಲುಮೆಯ ಬೆಂಕಿಯ ಮುಂದೆ, ದುಡಿದು ದಣಿಯುವ ಜೀವ. ಕಮ್ಮಾರಿಕೆಯಿಂದ ಬಂದ ನಾಲ್ಕಾರು ಕಾಸನ್ನು, ಬ್ಯಾಂಕಿನಲ್ಲಿ ಇವರು ಕೂಡಿಡುವುದಿಲ್ಲ. ಆ ದುಡಿಮೆ ಸೇರುವುದು ಮಣ್ಣಿಗೆ. 30 ವರ್ಷದಿಂದ ಸಹಸ್ರಾರು ಹಸಿರು ಗಿಡಗಳನ್ನು ನೆಟ್ಟು, ಮರಗಳನ್ನಾಗಿ ಬೆಳೆಸಿದ “ಸಾಲುಮರದ ವೀರಾಚಾರಿ’ ಅವರ ಬದುಕು ನಮ್ಮೆಲ್ಲರಿಗಿಂತಲೂ ಭಿನ್ನ.

ವೀರಾಚಾರಿ ಅವರಿಗೆ ಮೂವರು ಹೆಣ್ಣು, ಒಬ್ಬ ಗಂಡು ಮಗನಿದ್ದು ಎಲ್ಲರ ಮದುವೆಯನ್ನೂ ಮಾಡಿಮುಗಿಸಿದ್ದಾರೆ. ಮಗ ತರಕಾರಿ ವ್ಯಾಪಾರಿ. ಕಮ್ಮಾರಿಕೆಯಿಂದ ಉಳಿದ ಹಣದಲ್ಲಿ ವೀರಾಚಾರಿ ಅವರು, ತಮ್ಮ ವ್ಯಾನಿನಲ್ಲಿ ಗಿಡಗಳನ್ನು ಇಟ್ಟುಕೊಂಡು, ದೂರ ಊರುಗಳಲ್ಲೂ ಹಸಿರನ್ನು ಹಂಚುತ್ತಿದ್ದಾರೆ.

ಬಿಸಿಲೂರಿನ ಹಸಿರ ಹಾದಿ: ಶಾಮನೂರುನಿಂದ ಮಲೇಬೆನ್ನೂರು ಕಡೆಗೆ ಪ್ರಯಾಣ ಬೆಳೆಸಿದರೆ ಮಲೆನಾಡಿನ ರಸ್ತೆಯಲ್ಲಿ ಸಾಗಿದ ಅನುಭವವಾಗುತ್ತದೆ. ದಟ್ಟ ಹಸಿರಿನಿಂದ ಕೂಡಿದ ರಸ್ತೆಯ ಅಕ್ಕಪಕ್ಕದಲ್ಲಿ ಬೃಹದಾಕಾರವಾಗಿ ಬೆಳೆದು ನಿಂತ ನೇರಳೆ, ಹುಣಸೆ, ಆಲ, ಅರಳಿ, ಹೊಳೆಮತ್ತಿ, ಬೇವಿನಮರಗಳನ್ನು ನೋಡಲೆರಡು ಕಣ್ಣು ಸಾಲದು. ಆ ಹಸಿರ ಸೌಂದರ್ಯದ ಹಿಂದಿರುವ ವ್ಯಕ್ತಿಯೇ ವೀರಾಚಾರಿ. ಹಿರೇಹಾಲಿವಾಣ, ಹೊಳೆಸಿರಿಗೆರಿ, ಜಿಗಳಿ, ಕುಂಬಳೂರು, ಜರೇಕಟ್ಟಿ, ಹರಳಹಳ್ಳಿ, ಕೊಮಾರನಹಳ್ಳಿ ಮಲೇಬೆನ್ನೂರು, ಮಿಟ್ಲಕಟ್ಟೆ ಇನ್ನೂ ಮುಂತಾದ ಊರುಗಳಲ್ಲಿ ಸುಮಾರು 35 ವರ್ಷದಿಂದ 2500ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟು ಪೋಷಿಸಿದ್ದಾರೆ.

Advertisement

ಪ್ರೇರಣೆ ಏನು?: ಮೂಲತಃ ಚಿತ್ರದುರ್ಗ ತಾಲೂಕಿನ ನಂದಿಹಳ್ಳಿಯವರಾದ ಇವರು ಕುಲುಮೆ ಕಾಯಕ ನೆಚ್ಚಿಕೊಂಡು ಮಿಟ್ಲಕಟ್ಟೆಗೆ ಬಂದರು. ಬಿರು ಬಿಸಿಲು ತಾಳಲಾರದೆ, “ಎರಡು ಗಿಡ ನೆಡಿ ಸ್ವಾಮಿ, ಭೂಮಿ ತಂಪಾಗುತ್ತೆ’ ಎಂದು ಗ್ರಾಮ ಪಂಚಾಯತಿಯವರನ್ನು ಕೇಳಿದರಂತೆ. ಆದರೆ, ಪ್ರಯೋಜನವಾಗಲಿಲ್ಲ. ಅಂದಿನಿಂದ ಇವರೇ ಗಿಡಗಳನ್ನು ನೆಡುವ ಪಣ ತೊಟ್ಟು, ನಾಡನ್ನು ಹಸಿರಾಗಿಸುವ ಕನಸಿಗೆ ಮುಂದಾದರು. ಇಂದು ಅರಣ್ಯ ಇಲಾಖೆಯವರೇ ಇವರನ್ನು ಕರೆದು ಉಚಿತವಾಗಿ ಗಿಡಗಳನ್ನು ನೀಡುತ್ತಿದ್ದಾರೆ.

ಬಸ್‌ಸ್ಟಾಂಡ್‌ ಗುಡಿಸುತಾರೆ…: ಯಾವುದೇ ಊರಿಗೆ ತೆರಳಿದರೆ ಮೊದಲು ಆ ಊರಿನ ಬಸ್‌ ನಿಲ್ದಾಣಗಳ ಕಸ ಕಡ್ಡಿಗಳನ್ನು ತೆಗೆದು, ಸ್ವತ್ಛ ಮಾಡುತ್ತಾರೆ. ಹೀಗೆ ಕಸ ಗುಡಿಸುವ ಇವರನ್ನು ನೋಡಿ ಜನ ಆಡಿಕೊಳ್ಳುತ್ತಾರಂತೆ. ಆದರೂ, ಆ ಬಗ್ಗೆ ಗಮನ ಹರಿಸದೆ, “ಪರಿಸರ ಸ್ವತ್ಛತೆಗಾಗಿ ದೇಶದ ಪ್ರಧಾನಿಯೇ ಪೊರಕೆ ಹಿಡಿದಿದ್ದಾರೆ. ಇಂದಲ್ಲ ನಾಳೆ ಪರಿಸರ ಕೆಲಸ, ಪ್ರತಿಯೊಬ್ಬರನ್ನೂ ವ್ಯಾಪಿಸುತ್ತದೆ’ ಎನ್ನುತ್ತಾರೆ, ವೀರಾಚಾರಿ. ಇವರ ಈ ಕಾರ್ಯಕ್ಕೆ ಪತ್ನಿ ಅನುಸೂಯಮ್ಮ ಕೈ ಜೋಡಿಸಿದ್ದಾರೆ.

ಗಿಡಗಳನ್ನು ನೆಟ್ಟು ಇವರು ಹಾಗೇ ಬರುವುದಿಲ್ಲ. ಗಿಡಗಳ ಸುತ್ತಲೂ ಮುಳ್ಳು ಬೇಲಿಯನ್ನು ಹಾಕಿ, ಪೋಷಿಸುತ್ತಾರೆ. ಬೇಸಿಗೆ ಕಾಲದಲ್ಲಿ ನೀರಿಗೆ ಕೊರತೆಯಾದರೆ, ತಮ್ಮ ಕೈಯಿಂದಲೇ ನೀರಿನ ಟ್ಯಾಂಕರ್‌ಗೆ 300- 400 ರೂ. ಕೊಟ್ಟು, ಗಿಡಗಳಿಗೆ ನೀರುಣಿಸುತ್ತಾರೆ. ಎಲ್ಲಿಯಾದರೂ ಮರ ಕಡಿಯುವ ಸುದ್ದಿ ಕಿವಿಗೆ ಬಿದ್ದರೆ, ಅಲ್ಲಿಗೆ ಧಾವಿಸಿ, ಒಂಟಿಯಾಗಿ ಧರಣಿ ಕೂರುತ್ತಾರೆ. ಇವರ ಈ ಹಸಿರುಪ್ರೀತಿಯನ್ನು ನೋಡಿ ಜನ, “ಸಾಲುಮರದ ವೀರಾಚಾರಿ’ ಎಂಬ ಹೆಸರಿಟ್ಟರು.

“ದೂರದ ಊರುಗಳಾದ ಹೊಸಪೇಟೆ, ಕಂಪ್ಲಿ, ಯಾದಗಿರಿ, ರಾಯಚೂರುಗಳಿಗೆ ಹೋಗಿ ರೈತರ ಪರಿಕರಗಳನ್ನು ಮಾರಿ, ಅದರಿಂದ ಹೊಟ್ಟೆ ತುಂಬಿಸಿಕೊಳ್ಳುವ ವೀರಾಚಾರಿ, ಇದರಿಂದ ಬಂದ ಹಣದಿಂದ ಗಿಡಗಳ ಪೋಷಣೆ ಮಾಡುತ್ತಾರೆ’ ಎನ್ನುತ್ತಾರೆ, ಹಿರೇಹಾಲಿವಾಣದ ತಿಮ್ಮಜ್ಜಿ ಶೇಖರಪ್ಪ. ಮಕ್ಕಳಲ್ಲಿ ಪರಿಸರ ಜಾಗೃತಿ ಕಡಿಮೆಯಾಗಿದೆ ಎಂದು, ಪ್ರತಿಶಾಲೆಗೆ ಹೋಗಿ ಮಕ್ಕಳಿಗೆ ಪರಿಸರ ಪಾಠವನ್ನು ಮಾಡುತ್ತಾರೆ. ಮಕ್ಕಳು ಗಿಡ ನೆಟ್ಟರೆ ಅವರಿಗೆ ಊಡುಗೊರೆಯಾಗಿ ಪುಸ್ತಕ- ಪೆನ್ನು ನೀಡುತ್ತಾರೆ. ಯಾವುದೇ ಸಮಾರಂಭಕ್ಕೆ ಹೋದರೂ, ಅಲ್ಲಿ ಗಿಡವನ್ನು ಉಡುಗೊರೆಯಾಗಿ ನೀಡುತ್ತಾರೆ.

ಪರಿಸರದ ರಥ: ವೀರಾಚಾರಿ ಬಳಿ ಒಂದು ಪುಟ್ಟ ವ್ಯಾನ್‌ ಇದೆ. ಅದು ಬರೀ ವಾಹನವಲ್ಲ; ಪರಿಸರ ಜಾಗೃತಿ ರಥ. ಆ ರಥದ ತುಂಬಾ ಗಿಡಮರಗಳ ಚಿತ್ರ. “ಗಿಡ ನೆಡಿ, ನೀವೂ ಬದುಕಿ’ ಎನ್ನುವ ಅರ್ಥಪೂರ್ಣ ಸಾಲುಗಳು. ಈ ವ್ಯಾನ್‌ನ ತುಂಬಾ ಇರುವುದು ಹಸಿರು ಗಿಡಗಳೇ. ಎಲ್ಲಿ ಮರಗಳ ಅವಶ್ಯಕತೆ ಇದೆಯೋ, ಅಲ್ಲಿ ಗಿಡ ನೆಟ್ಟು, ಅದರ ಆರೈಕೆಯ ಬಗ್ಗೆ ಸಮೀಪದವರಿಗೆ ತಿಳಿಸಿ, ಮುಂದೆ ಯಾವತ್ತೋ ಅದೇ ದಾರಿಯಲ್ಲಿ ಬರುವಾಗ, ಆ ಗಿಡದ ಯೋಗಕ್ಷೇಮ ವಿಚಾರಿಸಿಕೊಂಡು ಬರುತ್ತಾರೆ.

ವೀರಾಚಾರಿಯವರು ನಮ್ಮ ಶಾಲೆಯ ಅವರಣದಲ್ಲಿಯೇ ಅನೇಕ ಗಿಡಗಳನ್ನು ನೆಟ್ಟು, ಇಡೀ ಬಯಲನ್ನು ನೆರಳಾಗಿಸಿದ್ದಾರೆ. ಇಲ್ಲಿ ಈಗ ಹಲವು ಪಕ್ಷಿಗಳು ಆಶ್ರಯ ಪಡೆದಿವೆ. ಬೇಸಿಗೆಯಲ್ಲಿ ನಮಗೆ ನೆರಳು ಸಿಗುತ್ತಿದೆ.
-ಎಸ್‌.ಎಚ್‌. ಹೂಗಾರ್‌, ಶಿಕ್ಷಕರು, ಸರ್ಕಾರಿ ಪ್ರೌಢಶಾಲೆ ಹಿರೇಹಾಲಿವಾಣ

ಚಿತ್ರ- ಲೇಖನ: ಟಿ. ಶಿವಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next