ಮುಂಬೈ: ಜನಪ್ರಿಯ ಓಟಿಟಿ ಫ್ಲ್ಯಾಟ್ ಪಾರ್ಮ್ ನೆಟ್ ಫ್ಲಿಕ್ಸ್ ನಲ್ಲಿ ಪ್ರಸಾರವಾಗುತ್ತಿರುವ “ಏ ಸೂಟೆಬಲ್ ಬಾಯ್” ವೆಬ್ ಸೀರೀಸ್ ಇದೀಗ ವಿವಾದದ ಕೇಂದ್ರಬಿಂದುವಾಗಿದೆ. ಈ ವೆಬ್ ಸರಣಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದೆ ಎಂದು ಬಿಜೆಪಿ ನಾಯಕರು ಸೇರಿದಂತೆ ಹಲವು ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಮಧ್ಯಪ್ರದೇಶ ಗೃಹ ಸಚಿವ ನರೋತ್ತಮ್ ಮಿಶ್ರಾ, ಈ ಕೂಡಲೇ ಮೀರಾ ನಾಯರ್ ನಿರ್ದೇಶನದ ವೆಬ್ ಸರಣಿಯನ್ನು ಪರಿಶೀಲನೆಗೆ ಒಳಪಡಿಸಬೇಕು. ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾದ ‘ಏ ಸೂಟೆಬಲ್ ಬಾಯ್’ ಎಂಬ ವೆಬ್ ಸರಣಿಯಲ್ಲಿ ಆಕ್ಷೇಪ ವ್ಯಕ್ತಪಡಿಸುವಂತಹ ದೃಶ್ಯಗಳಿದ್ದು, ನಿರ್ದಿಷ್ಟ ಧರ್ಮದ ಧಾರ್ಮಿಕ ಭಾವನೆಗೆಳಿಗೆ ಧಕ್ಕೆ ತರುತ್ತಿದೆ. ಈ ಕುರಿತು ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದಿದ್ದಾರೆ.
ಏತನ್ಮಧ್ಯೆ ಬಿಜೆಪಿ ಪಕ್ಷದ ಯುವನಾಯಕ ಗೌರವ್ ತಿವಾರಿ, ರೇವಾ ಎಸ್ ಪಿ ರಾಕೇಶ್ ಕುಮಾರ್ ಸಿಂಗ್ ಅವರಿಗೆ ವೆಬ್ ಸರಣಿಯ ಮೇಲೆ ಎಫ್ ಐಆರ್ ದಾಖಲಿಸುವಂತೆ ಅಗ್ರಹಿಸಿದ್ದಾರೆ. ಇದರ ಬೆನ್ನಲ್ಲೆ ಮಧ್ಯಪ್ರದೇಶ ಗೃಹಸಚಿವರೂ ವೆಬ್ ಸರಣಿಯನ್ನು ಪರಿಶೀಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶನ ನೀಡಿರುವುದು ಟ್ವೀಟ್ಟರ್ ಟ್ರೆಂಡಿಂಗ್ ಗೆ ಕಾರಣವಾಗಿದೆ.
ಘಟನೆಯ ಹಿನ್ನಲೆ: ವೆಬ್ ಸರಣಿಯಲ್ಲಿ ಹಿಂದೂ ಯುವತಿ ಮತ್ತು ಮುಸ್ಲಿಂ ಯುವಕ ದೇವಸ್ಥಾನವೊಂದರಲ್ಲಿ ಚುಂಬಿಸುವ ದೃಶ್ಯವನ್ನು ತೋರ್ಪಡಿಸಲಾಗಿತ್ತು. ಇದು ಧಾರ್ಮಿಕ ಭಾವನೆಗೆ ಧಕ್ಕೆ ತರುವ ದೃಶ್ಯ, ನೆಟ್ ಫ್ಲಿಕ್ಸ್ ಲವ್ ಜಿಹಾದ್ ಗೆ ಪ್ರಚೋದನೆ ನೀಡುತ್ತಿದೆ ಎಂದು ಗೌರವ್ ತಿವಾರಿ ಸಾಮಾಜಿಕ ಜಾಲತಾಣದಲ್ಲಿ, ನೆಟ್ ಫ್ಲಿಕ್ಸ್ ಅನ್ನು ಅನ್ ಇನ್ ಸ್ಟಾಲ್ ಮಾಡುವಂತೆ ಕರೆ ನೀಡಿದ್ದರು.
ನಂತರದಲ್ಲಿ ಈ ಘಟನೆ ಟ್ವೀಟಿಗರ ಆಕ್ರೋಶಕ್ಕೂ ಕಾರಣವಾಗಿತ್ತು ಮಾತ್ರವಲ್ಲದೆ #boycottnetflix ಎಂಬ ಹ್ಯಾಷ್ ಟ್ಯಾಗ್ ಟ್ರೆಂಡ್ ಸೃಷ್ಟಿಸಿತ್ತು.
ಕೆಲ ಟ್ವೀಟಿಗರು ನೆಟ್ ಫ್ಲಿಕ್ಸ್ ಪರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ತಮ್ಮದೇ ರೀತಿಯಲ್ಲಿ ವೆಬ್ ಸರಣಿಯನ್ನು ಸಮರ್ಥಿಸಿಕೊಂಡಿದ್ದಾರೆ.
1947ರಲ್ಲಿ ಹಿಂದೂ ಮುಸ್ಲಿಂ ಸಮುದಾಯಗಳು ಅನುಭವಿಸಿದ ತಲ್ಲಣದ ಸುತ್ತ ‘ ಏ ಸೂಟೆಬಲ್ ಬಾಯ್’ ಕಥೆಯನ್ನು ಹಣೆಯಲಾಗಿದೆ. ಇದು ವಿಕ್ರಮ್ ಸೇಠ್ ಅವರ ಜನಪ್ರಿಯ ಕಾದಂಬರಿಯಾಗಿದ್ದು ಮೀರಾ ನಾಯರ್ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ಇಶಾನ್ ‘ಸೂಟೆಬಲ್ ಬಾಯ್’ ಆಗಿ ಕಾಣಿಸಿಕೊಂಡರೇ, ಇವರ ಜೊತೆಗೆ ಟಬು, ರಸಿಕಾ ದುಗ್ಗಲ್, ತಾನ್ಯ, ರಾಮ್ ಕಪೂರ್ ಮೊದಲಾದವರು ನಟಿಸಿದ್ದಾರೆ.
ಬಿಜೆಪಿ ವಕ್ತಾರರಾಗಿರುವ ಗೌರವ್ ಗೋಯಲ್, ಸೂಟೇಬಲ್ ಬಾಯ್ ಚಿತ್ರವನ್ನು ಹೆಸರಿಸದೆ, ಓಟಿಟಿ ವೇದಿಕೆ ಇತ್ತೀಚಿಗೆ ನಿರಂತರವಾಗಿ ಹಿಂದೂ ದೇವ-ದೇವತೆಯರನ್ನು ಅಪಮಾನಕ್ಕೆ ಒಳಪಡಿಸುತ್ತಿದೆ. ಯಾರಾದರೂ ಪೊಲೀಸ್ ಠಾಣೆಯಲ್ಲಿ ಈ ಕುರಿತು ಐಪಿಸಿ ಸೆಕ್ಷನ್ 295 ಅಡಿಯಲ್ಲಿ ಪ್ರಕರಣ ದಾಖಲಿಸಬೇಕು. ಕಾನೂನು ಈ ಕುರಿತು ನ್ಯಾಯಯುತ ನಿರ್ಧಾರ ಕೈಗೊಳ್ಳುತ್ತದೆ ಎಂದು ತಿಳಿಸಿದ್ದಾರೆ.