Advertisement

ರಫ್ ಅಂಡ್‌ ಟಫ್

06:00 AM Nov 30, 2018 | |

ರಫ್ – ಇದು ಹೊಸಬರ ಚಿತ್ರದ ಹೆಸರು. ಈ ಶೀರ್ಷಿಕೆ ಓದಿದಾಕ್ಷಣ, ಹಾಗೊಮ್ಮೆ ಖದರ್‌ ಲುಕ್‌, ಖಡಕ್‌ ಮಾತು, ಸಖತ್‌ ಫೈಟು, ಒರಟು ವ್ಯಕ್ತಿತ್ವ ಹೀಗೆ ಒಂದಷ್ಟು ಅಂಶಗಳು ಹಾದು ಹೋಗುತ್ತವೆ. ಆದರೆ, ಹೊಸಬರ ಈ “ರಫ್’ ಚಿತ್ರದಲ್ಲಿ ಅಣ್ಣ ತಂಗಿಯ ಬಾಂದವ್ಯ ಇದೆ. ಸೆಂಟಿಮೆಂಟ್‌ ತುಂಬಿದೆ. ಸಂಬಂಧದ ಮೌಲ್ಯಗಳು ರಾರಾಜಿಸುತ್ತವೆ. ತಾಳ್ಮೆಯ ಪಾಠವೂ ಇದೆ. ಇಂತಹ ವಿಷಯಗಳನ್ನು ತುಂಬಿಕೊಂಡಿರುವ “ರಫ್’ ಚಿತ್ರದ ಟೀಸರ್‌ ಇತ್ತೀಚೆಗೆ ಬಿಡುಗಡೆಯಾಗಿದೆ.

Advertisement

ಈ ಚಿತ್ರದ ಮೂಲಕ ರಾಮ್‌ ಸಂತೋಷ್‌ ನಿರ್ದೇಶಕರಾದರೆ, ರಾಜ್‌ ನಾಯಕರಾಗಿದ್ದಾರೆ. ಇನ್ನು, ಡಾ.ಕಬೀರ್‌ ಕೂಡ ನಿರ್ಮಾಪಕರಾಗಿದ್ದಾರೆ. ಇವರೆಲ್ಲರಿಗೂ ಇದು ಮೊದಲ ಚಿತ್ರ. ಇವರಷ್ಟೇ ಅಲ್ಲ, ಚಿತ್ರದಲ್ಲಿ ನಟಿಸಿರುವ ಸುಶ್ಮಿತಾ, ಹರೀಶ್‌, ಮಂಜು, ಭಾಸ್ಕರ್‌ ಇತರರಿಗೂ ಹೊಸ ಅನುಭವ. ಅಲ್ಲಿಗೆ ಇದೊಂದು ಹೊಸಬರ ಚಿತ್ರಗಳ ಸಾಲಿಗೆ ಸೇರ್ಪಡೆಯಾಗಿದೆ. ಟೀಸರ್‌ ತೋರಿಸಿದ ಚಿತ್ರತಂಡ ಅನುಭವ ಹಂಚಿಕೊಳ್ಳಲು ಮಾಧ್ಯಮ ಮುಂದೆ ಬಂದಿತ್ತು. ಮೊದಲು ಮಾತಿಗಿಳಿದದ್ದು ನಿರ್ದೇಶಕ ರಾಮ್‌ ಸಂತೋಷ್‌. “ನಾನೊಬ್ಬ ಎಂಜಿನಿಯರ್‌. ಯುಎಸ್‌ನಲ್ಲಿ ಕೆಲಸ ಮಾಡಿ, ಅಲ್ಲಿದ ಜರ್ಮನಿಗೂ ಜಂಪ್‌ ಮಾಡಿ ಕೆಲಸ ಮಾಡಿದ ಅನುಭವ ಇದೆ. ಎಲ್ಲೋ ಒಂದು ಕಡೆ ಸಿನಿಮಾ ಸೆಳೆತ ಹೆಚ್ಚಾಗಿತ್ತು. ಅಲ್ಲಿಂದ ನೇರ ರಂಗಭೂಮಿಗೆ ಕಾಲಿಟ್ಟೆ. ಒಂದಷ್ಟು ನಾಟಕದಲ್ಲಿ ನಟಿಸಿದೆ. ಕಳೆದ ಒಂಭತ್ತು ವರ್ಷಗಳಿಂದಲೂ ಚಿತ್ರರಂಗದಲ್ಲಿದ್ದೇನೆ. “ಶೌರ್ಯ’, “ಆನೆಪಟಾಕಿ’,”ತಾರಕಾಸುರ’ ಸೇರಿದಂತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದೇನೆ. ಈಗ “ರಫ್’ ಚಿತ್ರ ನಿರ್ದೇಶಿಸಿದ್ದೇನೆ. ರೌಡಿಸಂ ಹಿನ್ನೆಲೆಯಲ್ಲಿ ಸಾಗುವ ಅನೇಕ ಚಿತ್ರಗಳು ಬಂದಿವೆಯಾದರೂ, ಇಲ್ಲಿ ದೃಶ್ಯರೂಪವನ್ನು ಹೊಸದಾಗಿ ಕಟ್ಟಿಕೊಡಲಾಗಿದೆ. ಪ್ರತಿ ಪಾತ್ರ ಕೂಡ ಇಲ್ಲಿ ರಫ್ ಆಗಿರುತ್ತವೆ. ಇಲ್ಲಿ ನಾಯಕ ವ್ಯಕ್ತಿಯೊಬ್ಬನ ವಿರುದ್ಧ ತಿರುಗಿ ಬೀಳುತ್ತಾನೆ. ಸೂಕ್ಷ್ಮ ಸ್ವಭಾವದ ಹುಡುಗ ರಫ್ ಆಗೋಕೆ ಕಾರಣ ಏನೆಂಬುದೇ ಕಥೆ. ಇದೊಂದು ಕ್ರೈಂ ಥ್ರಿಲ್ಲರ್‌ ಜಾನರ್‌ ಹೊಂದಿದ್ದು, ಬಹುತೇಕ ಬೆಂಗಳೂರಲ್ಲಿ ಚಿತ್ರೀಕರಣಗೊಂಡಿದೆ’ ಎಂದು ವಿವರ ಕೊಟ್ಟರು ನಿರ್ದೇಶಕರು.

ನಾಯಕ ರಾಜು ಅವರಿಗೆ ಇದು ಮೊದಲ ಚಿತ್ರವಂತೆ. ಇಲ್ಲಿ ಆಯಿಲ್‌ ದಂಧೆ ಸೇರಿದಂತೆ ಒಂದು ಮಾಫಿಯಾ ಕುರಿತ ಚಿತ್ರಣವಿದೆ. ಇಲ್ಲಿ ಚಾಲೆಂಜಿಂಗ್‌ ಪಾತ್ರ ಮಾಡಿದ್ದು, ಈಗಿನ ಟ್ರೆಂಡ್‌ಗೆ ಏನೆಲ್ಲಾ ಬೇಕೋ ಅದೆಲ್ಲವನ್ನೂ ಚಿತ್ರದಲ್ಲಿ ಅಳವಡಿಸಲಾಗಿದೆ. ಮುಖ್ಯವಾಗಿ, ವಾಸ್ತವತೆಯ ಅಂಶಗಳು ಚಿತ್ರದಲ್ಲಿವೆ. ಈ ಚಿತ್ರದಲ್ಲಿ ಮೀಡಿಯಾವೊಂದರ ಕ್ಯಾಮೆರಾಮೆನ್‌ ಆಗಿ ಪಾತ್ರ ನಿರ್ವಹಿಸಿದ್ದಾಗಿ ಹೇಳಿಕೊಳ್ಳುತ್ತಾರೆ ನಾಯಕ ರಾಜು.

ನಿರ್ಮಾಪಕ ಡಾ.ಕಬೀರ್‌ ಅವರಿಗೆ ಇದು ಮೊದಲ ಚಿತ್ರ. ಉದ್ಯಮಿಯಾಗಿರುವ ಅವರಿಗೆ ಚಿಕ್ಕಂದಿನಿಂದಲೂ ಸಿನಿಮಾ ಮೇಲೆ ಪ್ರೀತಿ ಇತ್ತಂತೆ. ಮುಂದೊಂದು ದಿನ ಒಳ್ಳೆಯ ಕಥೆ ಇರುವ ಚಿತ್ರ ಮಾಡಬೇಕು ಎಂಬ ಆಸೆ ಅವರಲ್ಲಿ ಇದ್ದುದರಿಂದಲೇ “ರಫ್’ ಮಾಡಿದ್ದಾಗಿ ಹೇಳುತ್ತಾರೆ ಅವರು. ಈ ಚಿತ್ರ ಮಾಡೋಕೆ ಮೊದಲ ಕಾರಣ, ಕಥೆ, ಎರಡನೇ ಕಾರಣ, ನಾಯಕ ಪಕ್ಕದ್ಮನೆ ಹುಡುಗ, ಮೂರನೆಯ ಕಾರಣ ಒಳ್ಳೆಯ ತಂಡ ಸಿಕ್ಕಿರುವುದು. ಅವರೂ ಇಲ್ಲೊಂದು ಪಾತ್ರ ಮಾಡಿದ್ದಾಗಿ ಹೇಳಿಕೊಂಡರು.

ಉಳಿದಂತೆ ಚಿತ್ರದಲ್ಲಿ ನಟಿಸಿರುವ ಹರೀಶ್‌, ಭಾಸ್ಕರ್‌, ಮಂಜು ಇತರರು ಮಾತನಾಡಿದರು. ಛಾಯಾಗ್ರಾಹಕ ರಾಜಶೇಖರ್‌ ಇತರರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next