ಒಂದು ಊಟಕ್ಕೆ ನೂರು ರೂಪಾಯಿ ಅನ್ನುವುದು ಇಂದಿನ ದುಬಾರಿ ದುನಿಯಾದ ವರಸೆ. ಹೀಗಿರುವಾಗ, ಒಂದು ರೂಪಾಯಿಗೆ ಹೊಟ್ಟೆ ತುಂಬ ಊಟ ಸಿಗುತ್ತದೆ ಎಂದರೆ ನಂಬಲಸಾಧ್ಯ. ಅಂಥದೊಂದು ದೃಶ್ಯ ನೋಡಬೇಕು ಅನ್ನುವವರು ಹುಬ್ಬಳ್ಳಿಗೆ ಬರಬೇಕು. ಇಲ್ಲಿಯ ಸಮಾನ ಮನಸ್ಕ ಯುವಕರು ಕೂಡಿಕೊಂಡು ಕಾರ್ಮಿಕರು, ನಿರ್ಗತಿಕರು, ಬಡವರ ಸೇವಾರ್ಥವಾಗಿ 1 ರೂಪಾಯಿಗೆ ಒಪ್ಪೊತ್ತಿನ ಊಟ ಕೊಡುತ್ತಿದ್ದಾರೆ!
ವ್ಯಾಪಾರಿ ಕೇಂದ್ರವಾಗಿರುವ ಹುಬ್ಬಳ್ಳಿಗೆ ಸುತ್ತಲಿನ ಹಳ್ಳಿಗಳಿಂದ ನಿತ್ಯ ಸಾವಿರಾರು ಜನ ಕೆಲಸಕ್ಕೆ, ದುಡಿಮೆ ಅರಸಿಕೊಂಡು ಬರುತ್ತಾರೆ. ಹೀಗೆ ಬರುವವರ ಬಳಿ ಹಣ ಇರುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಕಿಸೆಯಲ್ಲಿ ಒಂದು ರೂಪಾಯಿ ಇಟ್ಟುಕೊಂಡು ಘಂಟಿಕೇರಿ ಪೊಲೀಸ್ ಠಾಣೆ ಬಳಿಯ ಹಿರೇಪೇಟ್ ವೃತ್ತದಲ್ಲಿರುವ “ರೋಟಿ ಘರ್’ ಬಳಿ ಬಂದರೆ, ಮಧ್ಯಾಹ್ನದ ಊಟ ಮುಗಿಸಬಹುದು. ಒಂದು ರುಪಾಯಿಗೆ ಹೊಟ್ಟೆ ತುಂಬಾ ಊಟ ಹಾಕುವ ಮಹತ್ಕಾರ್ಯವನ್ನು “ಮಹಾವೀರ ಯೂತ್ ಫೆಡರೇಶನ್’ ಮೂಲಕ ನಡೆಸಿಕೊಂಡು ಬರಲಾಗುತ್ತಿದೆ.
ರೈತರು, ಕಾರ್ಮಿಕರು, ತರಕಾರಿ ಮಾರುವವರು, ಹೂವಿನ ವ್ಯಾಪಾರಿಗಳು, ಹಮಾಲರು, ಕೂಲಿ ಕಾರ್ಮಿಕರು, ಆಟೋ ಚಾಲಕರು ಹೆಚ್ಚಿನ ಪ್ರಮಾಣದಲ್ಲಿ ಸೇರುವ ಜಾಗವಿದು. ಅವರಿಗೆ ಕಡಿಮೆ ದರದಲ್ಲಿ ಒಳ್ಳೆಯ ಊಟ ಸಿಗಲಿ ಎಂಬ ಸದಾಶಯದಿಂದ ಮಧ್ಯಾಹ್ನ 12.15 ರಿಂದ 2.15 ರವರೆಗೆ ಊಟ ನೀಡಲಾಗುತ್ತಿದೆ. ನಿತ್ಯ ಏನಿಲ್ಲವೆಂದರೂ 220-250 ಜನ ಊಟ ಮಾಡುತ್ತಾರೆ. ಒಂದು ರೂಪಾಯಿಯಲ್ಲಿ ಯಾವುದೇ ಸಂಕೋಚವಿಲ್ಲದೆ ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಬುಧವಾರ ಈ ಕೇಂದ್ರದ ಸೇವೆ ಇರುವುದಿಲ್ಲ.
ನಿತ್ಯವೂ ವಿಭಿನ್ನ ಮೆನು!
“ರೋಟಿ ಘರ್’ನಲ್ಲಿ ನಿತ್ಯವೂ ವಿಭಿನ್ನ ಮೆನು ಇರುತ್ತದೆ. ಒಂದು ದಿನ ಅನ್ನ ಸಾಂಬರ್, ಮತ್ತೂಂದು ದಿನ ಪಲಾವ್-ಮೊಸರು, ಇನ್ನೊಂದು ದಿನ ಅನ್ನ-ಮಜ್ಜಿಗೆ ಸಾರು, ರವಿವಾರ ಊಟದ ಜೊತೆಗೆ ಒಂದು ಸಿಹಿ ಇರುತ್ತದೆ. ಚಿತ್ರಾನ್ನ, ವಾರದಲ್ಲಿ ಎರಡು ದಿನ ಚಪಾತಿ-ಪಲ್ಲೆ ಇರುತ್ತದೆ. ಶುಚಿ-ರುಚಿಯ ಜೊತೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ
ಗುರುಗಳ ಪ್ರೇರಣೆ
ಹಸಿದವರ ಹೊಟ್ಟೆ ತುಂಬಿಸುವ ಈ ಸೇವೆಯ ಹಿಂದೆ ಸಮಾಜದ ಆಧ್ಯಾತ್ಮಕ ಗುರುಗಳಾದ ರವಿಶೇಖರ ವಿಜಯ ಜೀ ಮಹಾರಾಜರ ಪ್ರೇರಣೆ ಹಾಗೂ ಆಜ್ಞೆಯಿದೆ. ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಅವರು ಅನ್ನ ದಾಸೋಹದ ಬಗ್ಗೆ ಪ್ರಸ್ತಾಪಿಸಿದ್ದರು. ಅನ್ನದಾನದ ಮುಂದೆ ಮತ್ತೂಂದು ಪುಣ್ಯದ ಕಾರ್ಯವಿಲ್ಲ ಎಂದಿದ್ದರು. ಅವರ ಆಜ್ಞೆ ಪಾಲಿಸುವ ನಿಟ್ಟಿನಲ್ಲಿ 2010 ರಲ್ಲಿ ಕೆಲ ಯುವಕರು ಸೇರಿಕೊಂಡು “ರೋಟಿ ಘರ್’ ಹೆಸರಲ್ಲಿ ಈ ಸೇವಾ ಕೇಂದ್ರ ಆರಂಭಿಸಿದರು. ಅದೀಗ 14 ವರ್ಷಗಳನ್ನು ಪೂರೈಸುತ್ತಿದ್ದು, ಇದುವರೆಗೆ ಲಕ್ಷಾಂತರ ಜನರ ಹಸಿವು ತಣಿಸಿದ ಖ್ಯಾತಿಗೆ ಪಾತ್ರವಾಗಿದೆ.
ವಿಶೇಷವೆಂದರೆ, ತಮಿಳುನಾಡಿನಲ್ಲಿ ಅಮ್ಮ ಕ್ಯಾಂಟಿನ್, ರಾಜ್ಯದಲ್ಲಿ ಇಂದಿರಾ ಕ್ಯಾಂಟಿನ್ ಆರಂಭವಾಗುವ ಮೊದಲೇ ಈ “ರೋಟಿ ಘರ್’ ಆರಂಭವಾಗಿದೆ. ಉಚಿತವಾಗಿ ಕೊಡಬಾರದು ಇಲ್ಲಿ ಒಂದು ಊಟಕ್ಕೆ ಒಂದು ರೂಪಾಯಿ ನಿಗದಿ ಮಾಡಿರುವುದರ ಹಿಂದೆಯೂ ಒಂದು ಉದ್ದೇಶವಿದೆ. ಉಚಿತವಾಗಿ ನೀಡಿದರೆ ಅದಕ್ಕೆ ಗೌರವ ಹಾಗೂ ಬೆಲೆ ಇರುವುದಿಲ್ಲ. ಹಸಿದು ಬಂದವನಿಗೆ, ತಾನು ಹಣ ನೀಡಿ ಉಣ್ಣುತ್ತಿದ್ದೇನೆ ಎನ್ನುವ ಘನತೆಯಿರಬೇಕು ಎನ್ನುವ ಕಾರಣಕ್ಕೆ ಊಟಕ್ಕೆ ಒಂದು ರೂಪಾಯಿ ನಿಗದಿ ಪಡಿಸಲಾಗಿದೆ. ಈ ಕಾರ್ಯ ನಿರ್ವಹಿಸಲು ಓರ್ವ ವ್ಯವಸ್ಥಾಪಕ ಸೇರಿದಂತೆ ಮೂವರು ಸಿಬ್ಬಂದಿಯನ್ನು ನೇಮಿಸಿದ್ದು, ಅಡುಗೆ ತಯಾರಿಸಿ ಬಡಿಸುವ ಜವಾಬ್ದಾರಿಯೂ ಇವರದ್ದಾಗಿದೆ.
ಸದಸ್ಯರು, ದಾನಿಗಳ ನೆರವು “ರೋಟಿ ಘರ್’ ಆರಂಭಿಸಿದಾಗ “ಮಹಾವೀರ ಯೂತ್ ಫೆಡರೇಶನ್’ ಯಾರ ಬಳಿಯೂ ದೇಣಿಗೆ ಸಂಗ್ರಹಿಸಲಿಲ್ಲ. ಬದಲಾಗಿ ಸಮಾನ ಮನಸ್ಕ ಯುವಕರು ಪ್ರತಿ ತಿಂಗಳು ಇಂತಿಷ್ಟು ಎಂದು ಖರ್ಚು ಮಾಡಿ ಸೇವಾಕಾರ್ಯಕ್ಕೆ ಮುಂದಾದರು. ನಂತರ ವ್ಯಾಪಾರಿಗಳು, ಜೈನ್ ಸಮಾಜದ ಪ್ರಮುಖರೂ ಕೈಜೋಡಿಸಿದರು. 14 ವರ್ಷದ ಸುದೀರ್ಘ ಸೇವೆ ರಾಜ್ಯ, ದೇಶದ ಜನರ ಮನ್ನಣೆ ಗಳಿಸಿದೆ. ಇದೀಗ 20 ಸದಸ್ಯರು ಈ ಕಾರ್ಯ ಮುಂದುವರೆಸಿ ಕೊಂಡು ಹೋಗುತ್ತಿದ್ದಾರೆ. ಬಾಡಿಗೆ, ಸಿಬ್ಬಂದಿಯ ವೇತನ, ಆಹಾರ ಪದಾರ್ಥಗಳ ಖರೀದಿ ಸೇರಿದಂತೆ ನಿತ್ಯ ಮೂರು ಸಾವಿರ ರೂ.ಗೂ ಹೆಚ್ಚು ಖರ್ಚಿದೆ. ಕೆಲವೊಮ್ಮೆ ಒಪ್ಪೊತ್ತಿನ ಊಟದ ಸಂಪೂರ್ಣ ಖರ್ಚನ್ನು ಭರಿಸುವ ದಾನಿಗಳು ಕೂಡ ಇದ್ದಾರೆ.
ದಾನಿಗಳ ನೆರವು ಇನ್ನಷ್ಟು ಹೆಚ್ಚಿದರೆ ನಗರದ ಇನ್ನೆರಡು ಸ್ಥಳಗಳಲ್ಲಿಯೂ ಇಂಥ ಸೇವಾ ಕೇಂದ್ರಗಳನ್ನು ಆರಂಭಿಸುವ ಚಿಂತನೆ ಫೆಡರೇಶನ್‌ಗೆ ಇದೆ. ಇಲ್ಲಿ ಯಾವುದೇ ಸಮಾಜ, ಧರ್ಮಕ್ಕೆ ಸೀಮಿತವಾಗದೆ ಸೇವೆ ನೀಡಲಾಗುತ್ತಿದೆ. ಈ ಕಾರ್ಯಕ್ಕೆ ಯಾರು ಬೇಕಾದರೂ ಕೈ ಜೋಡಿಸಬಹುದಾಗಿದೆ ಎನ್ನುತ್ತಾರೆ ಫೆಡರೇಶನ್‌ನ ಮಾಜಿ ಅಧ್ಯಕ್ಷ ಜಿತೇಂದ್ರ ಛಜೆಡ್.
ಹೇಮರಡ್ಡಿ ಸೈದಾಪುರ