ಈ ರೋಟಾ ವೈರಸ್, ವೈರಸ್‌ಗಳಲ್ಲಿಯೇ ಅತೀ ಹೆಚ್ಚು ಅತಿಸಾರ- ಭೇದಿ ಹರಡಬಲ್ಲ ವೈರಾಣು. ಕಲುಷಿತಗೊಂಡ ಆಹಾರ, ನೀರು ಮತ್ತು ಈ ವೈರಾಣು ತುಂಬಾ ಸಮಯದ ವರೆಗೆ ಮಕ್ಕಳ ಕೈಯಲ್ಲಿ ಮತ್ತು ಇತರ ಗಟ್ಟಿಯಾದ ಮೇಲ್ಪದರಗಳಲ್ಲಿ ಜೀವಂತವಾಗಿರಬಹುದು. ಈ ವೈರಸ್‌ನಿಂದ ಆಗುವ ಭೇದಿ ಮತ್ತು ಇತರ ಭೇದಿಯ ಲಕ್ಷಣಗಳಲ್ಲಿ ಯಾವುದೇ ವಿಶೇಷ ವ್ಯತ್ಯಾಸವಿಲ್ಲ. ಮಗುವಿನ ಮಲ ಪರೀಕ್ಷೆಯನ್ನು ಪ್ರಯೋಗಾಲಯದಲ್ಲಿ ಮಾಡಿಸಿದಾಗಲೇ ರೋಟಾ ವೈರಸ್ ಭೇದಿಯನ್ನು ಪತ್ತೆ ಮಾಡಲು ಸಾಧ್ಯವಾಗುವುದು.
Advertisement
ರೋಟಾವೈರಸ್ ಸೋಂಕಿನ ಆರಂಭ ಕಡಿಮೆ ಪ್ರಮಾಣದ ಭೇದಿಯಿಂದ ಆಗುತ್ತದೆ. ಮುಂದೆ ಅದು ಗಂಭೀರ ಸ್ವರೂಪಕ್ಕೆ ತಿರುಗಬಹುದು. ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಶರೀರದಲ್ಲಿ ನೀರು ಮತ್ತು ಲವಣಾಂಶದ ಕೊರತೆ ಆಗಬಹುದು ಹಾಗೂ ಕೆಲವು ಸಂದರ್ಭಗಳಲ್ಲಿ ಮಕ್ಕಳು ಸಾವಿಗೀಡಾಗಬಹುದು. ಈ ವೈರಾಣು ದೇಹ ಸೇರಿದ ಅನಂತರ 1-3 ದಿನಗಳಲ್ಲಿ ರೋಗಲಕ್ಷಣಗಳು ಕಾಣಿಸುತ್ತವೆ. ಈ ಸೋಂಕಿನಿಂದ ತೀವ್ರ ಸ್ವರೂಪದ ಭೇದಿಯ ಜತೆ ಜ್ವರ ಮತ್ತು ವಾಂತಿಯೂ ಆಗುತ್ತದೆ. ಒಮ್ಮೊಮ್ಮೆ ಹೊಟ್ಟೆ ನೋವಾಗುತ್ತದೆ. ಭೇದಿ ಮತ್ತು ಇತರ ಲಕ್ಷಣಗಳು ಸುಮಾರು 3ರಿಂದ 7 ದಿನಗಳ ವರೆಗೆ ಇರುತ್ತವೆ.
ರೋಟಾ ವೈರಸ್ ಅತಿಸಾರವು ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಸಾಮಾನ್ಯವಾಗಿದೆ. ಈ ಲಸಿಕೆ ಜಗತ್ತಿನ 96 ದೇಶಗಳ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಬಳಕೆಯಾಗುತ್ತಿದೆ. ಅವುಗಳಲ್ಲಿ ಭಾರತವೂ ಒಂದು. 2016ರಿಂದ ದೇಶದ 10 ರಾಜ್ಯಗಳಲ್ಲಿ ಈಗಾ ಗಲೇ ನೀಡಲಾಗುತ್ತಿದೆ ಮತ್ತು ಖಾಸಗಿ ವೈದ್ಯರು ಈಗಾಗಲೇ ದೇಶದಾದ್ಯಂತ ಈ ಲಸಿಕೆಯನ್ನು ಮಕ್ಕಳಿಗೆ ನೀಡುತ್ತಿದ್ದಾರೆ. ಪ್ರಧಾನ ಮಂತ್ರಿಗಳ ನಿರ್ದೇಶನದಂತೆ 2019-20ರಲ್ಲಿ ದೇಶದ ಎಲ್ಲ ರಾಜ್ಯಗಳಲ್ಲಿ ಪೋಷಣ್ ಅಭಿಯಾನ್ ಅಡಿಯಲ್ಲಿ ರೋಟಾ ವೈರಸ್ ಲಸಿಕೆ ವಿಸ್ತರಣೆ ಮಾಡಲಾಗುತ್ತಿದೆ. ಅದರಂತೆ ಕರ್ನಾಟಕದಲ್ಲಿ ಆಗಸ್ಟ್ 29ರಿಂದ ಈ ಲಸಿಕೆಯನ್ನು ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಡಿಯಲ್ಲಿ ಬಿಡುಗಡೆ ಮಾಡಲಾಗಿದೆ. ಬರುವ ತಿಂಗಳಿನಿಂದ ಲಸಿಕಾ ದಿನಗಳಂದು ಈ ಲಸಿಕೆ ಎಲ್ಲ ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ, ಆಸ್ಪತ್ರೆ, ವೈದ್ಯಕೀಯ ಮಹಾವಿದ್ಯಾಲಯ, ಪ್ರಾಥಮಿಕ ಆರೋಗ್ಯ ಕೇಂದ್ರ, ನಗರ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಉಪಕೇಂದ್ರ ಹಾಗೂ ಔಟ್‌ರೀಚ್ ಸತ್ರಗಳ ಮೂಲಕ ಉಚಿತವಾಗಿ ಲಭ್ಯವಿರುತ್ತದೆ.
Related Articles
Advertisement
ಸುರಕ್ಷಿತ ಲಸಿಕೆರೋಟಾವೈರಸ್ ಲಸಿಕೆ ಒಂದು ಸುರಕ್ಷಿತ ಲಸಿಕೆ. ಹಾಗಿದ್ದರೂ ರೊಟಾವೈರಸ್ ಲಸಿಕೆ ನೀಡಿದ ಬಳಿಕ ಕೆಲವು ಮಕ್ಕಳಲ್ಲಿ ತಾತ್ಕಾಲಿಕವಾಗಿ ವಾಂತಿ, ಭೇದಿ, ಕೆಮ್ಮು, ನೆಗಡಿ, ಕಿರಿಕಿರಿ ಮತ್ತು ದದ್ದು ಇತ್ಯಾದಿ ಆಗಬಹುದು. ರೋಟಾವೈರಸ್ ಲಸಿಕೆ ನೀಡಿದ ಅನಂತರ ಆಗಬಹುದಾದ ಅತ್ಯಂತ ಅಪರೂಪದ ಅಡ್ಡ ಪರಿಣಾಮ ಇಂಟಸ್‌ಸಸೆಪ್ಷನ್ (ಕರುಳು ಬಾಗುವುದು) ಆಗಿರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಸ್ಥಿತಿಗತಿ ವರದಿ (2013)ಯ ಪ್ರಕಾರ ರೋಟಾವೈರಸ್ ಲಸಿಕೆಯ ಮೊದಲ ವರಸೆ ಕುಡಿಸಿದ ಕೆಲವು ಸಮಯದ ಬಳಿಕ ಆಗಬಹುದಾದ ಈ ಅಪರೂಪದ ಅಡ್ಡ ಪರಿಣಾಮ ಒಂದು ಲಕ್ಷ ಮಕ್ಕಳಲ್ಲಿ 1-2 ಮಕ್ಕಳಿಗೆ ಆಗಬಹುದಾಗಿದೆ. ರೋಟಾ ವೈರಸ್ ಲಸಿಕೆ
ರೋಟಾವೈರಸ್ ಲಸಿಕೆ ಹಾಕಿಸುವುದು ರೋಟಾವೈರಸ್‌ನಿಂದ ಉಂಟಾಗುವ ಭೇದಿಯ ನಿವಾರಣೆಗೆ ಉಪಯುಕ್ತವಾಗಿದೆ. ರೋಟಾವೈರಸ್‌ನಿಂದಾಗುವ ಭೇದಿಯಿಂದ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆಯನ್ನು ಕಡಿಮೆ ಮಾಡಲು ಮತ್ತು ಅದರಿಂದ ಸಾವನ್ನಪ್ಪುವ ಸಂಖ್ಯೆಯಲ್ಲಿ ಇಳಿಕೆ ತರಲು ಕೂಡ ಈ ಲಸಿಕೆ ಅತ್ಯಂತ ಪರಿಣಾಮಕಾರಿಯಾಗಿದೆ. ಅದಲ್ಲದೆ ನೈರ್ಮಲ್ಯ ಕಾಪಾಡಿಕೊಳ್ಳುವುದು, ಆಗಾಗ ಕೈ ತೊಳೆದುಕೊಳ್ಳುವುದು, ಸ್ವತ್ಛ-ಸುರಕ್ಷಿತ ನೀರು ಕುಡಿಯುವುದು, ಸುರಕ್ಷಿತ ಊಟ-ತಿಂಡಿ ಸೇವನೆ, ಮಗು ಹುಟ್ಟಿದ ಮೊದಲ ಆರು ತಿಂಗಳು ಕೇವಲ ಮೊಲೆ ಹಾಲುಣಿಸುವುದು ಹಾಗೂ ವಿಟಮಿನ್ ಎ ಇರುವ ಪೂರಕ ಆಹಾರ ಸೇವನೆಗಳಂತಹ ಸಾಮಾನ್ಯ ಸುರಕ್ಷಾ ಕ್ರಮಗಳನ್ನು ಪಾಲಿಸುವ ಮೂಲಕ ರೋಟಾವೈರಸ್ ಸೋಂಕಿನಿಂದ ಪಾರಾಗಬಹುದು. ಆದರೆ ಈ ಎಲ್ಲ ಕ್ರಮಗಳು ರೋಟಾವೈರಸ್‌ನ ಹರಡುವಿಕೆಯನ್ನು ಸಂಪೂರ್ಣವಾಗಿ ತಡೆಗಟ್ಟಲಾರವು. ಯಾವಾಗ ಕೊಡಿಸಬಾರದು, ಯಾವಾಗ ಕೊಡಿಸಬಹುದು?
ಒಂದು ವೇಳೆ ಮಗುವಿಗೆ ಸಾಮಾನ್ಯ ರೋಗಗಳಾದ ಸ್ವಲ್ಪ ಮಟ್ಟಿನ ಜ್ವರ, ನೆಗಡಿ, ಕೆಮ್ಮು ಇತ್ಯಾದಿಗಳಾದಾಗ ರೋಟಾವೈರಸ್ ಲಸಿಕೆ ಕೊಡಬಹುದು. ಮಗುವಿಗೆ ಇತರ ಲಸಿಕೆ/ಚುಚ್ಚುಮದ್ದುಗಳನ್ನು ಹಾಕಿಸುವಂತಿದ್ದರೆ, ರೋಟಾವೈರಸ್ ಲಸಿಕೆಯನ್ನು ಕೊಡಿಸಬಹುದು. ಲಸಿಕೆ ಹಾಕಿಸುವುದನ್ನು ಮುಂದೂಡಲು ಯಾವುದೇ ಕಾರಣ ಬೇಕಾಗಿಲ್ಲ. ಮಗುವಿಗೆ ಗಂಭೀರವಾದ ರೋಗವಿದ್ದರೆ, ತೀವ್ರ ಜ್ವರವಿದ್ದರೆ, ಅತಿಯಾದ ವಾಂತಿ- ಭೇದಿಗಳಿದ್ದರೆ ಅಂಥ ಪರಿಸ್ಥಿತಿಗಳಲ್ಲಿ ಲಸಿಕೆ ನೀಡುವುದನ್ನು ಮುಂದೂಡಬಹುದು. ಮಗುವಿನ ಆರೋಗ್ಯ ಸಂಪೂರ್ಣ ಸುಧಾರಿಸುವವರೆಗೂ ಅದಕ್ಕೆ ರೋಟಾವೈರಸ್ ಲಸಿಕೆ ಕೊಡಬೇಡಿ. ಅಲ್ಲದೇ ಮಗುವಿಗೆ ಈ ಮೊದಲು ಲಸಿಕೆಯಿಂದ ಯಾವುದಾದರೂ ಗಂಭೀರ ಅಲರ್ಜಿಕ್ ರಿಯಾಕ್ಷನ್ ಆಗಿದ್ದರೆ, ಮಗುವಿಗೆ ಮೊದಲಿನಿಂದಲೇ ಗಂಭೀರವಾದ ಕರುಳು ರೋಗವಿದ್ದರೆ ಅಥವಾ ಹೊಟ್ಟೆಯ ಶಸ್ತ್ರಚಿಕಿತ್ಸೆಯಾಗಿದ್ದರೆ ಅಥವಾ ಕರುಳಿನಲ್ಲಿ ಏನಾದರೂ ಸಮಸ್ಯೆಯಿದ್ದರೆ, ರೋಗನಿರೋಧಕ ಶಕ್ತಿಯ ಕೊರತೆ ಸ್ಥಿತಿ (Intussusception) ಗಳಿದ್ದರೆ ತಜ್ಞರ ಸಲಹೆ ಪಡೆಯಬೇಕು. ಇದರಿಂದಾಗಿ ಮಕ್ಕಳ ಹೊಟ್ಟೆಯಲ್ಲಿ ತೀವ್ರ ನೋವು (ಹೆಚ್ಚು ಅಳುವುದು), ಪದೇ ಪದೆ ವಾಂತಿ ಮತ್ತು ಮಲದಲ್ಲಿ ರಕ್ತದಂತಹ ತೊಂದರೆಗಳು ಉಂಟಾಗಬಹುದು. ಆದ್ದರಿಂದ ಈ ಕಾಯಿಲೆಗಳಿಂದ ಪೀಡಿತರಾದ ಮಕ್ಕಳನ್ನು ತತ್‌ಕ್ಷಣವೇ ಆಸ್ಪತ್ರೆಯಲ್ಲಿ ಭರ್ತಿಮಾಡಿ ಸೂಕ್ತ ಚಿಕಿತ್ಸೆ ಕೊಡಿಸಬೇಕು. ಇಂಟಸ್‌ಸಸೆಪ್ಷನ್‌ನ ಸಮಸ್ಯೆ ರೋಟಾವೈರಸ್ ಲಸಿಕೆ ಕುಡಿಸದೆ ಇರುವ ಮಕ್ಕಳಿಗೂ ಸಹ ಆಗಬಹುದಾಗಿದೆ. ರೋಟಾವೈರಸ್ ಲಸಿಕೆ ಮಕ್ಕಳಲ್ಲಿ ರೋಟಾವೈರಸ್ ಭೇದಿಯಿಂದ ಪಾರಾಗಲು ಅತ್ಯಂತ ಪ್ರಯೋಜನಕಾರಿಯಾಗಿದೆ. ರೋಟಾವೈರಸ್ ಲಸಿಕೆ ಪಡೆಯದ ಮಕ್ಕಳಲ್ಲಿ ತೀವ್ರ ರೋಟಾವೈರಸ್ ಕಾಯಿಲೆಯಿಂದಾಗುವ ಪ್ರಮಾದ ಪರಿಣಾಮಗಳಿಗೆ ಹೋಲಿಸಿದರೆ ರೋಟಾವೈರಸ್ ಲಸಿಕೆ ಹಾಕಿದ ಅನಂತರ ಪ್ರತಿಕೂಲ ಪರಿಣಾಮಗಳ ಸಾಧ್ಯತೆ ತುಂಬಾ ಕಡಿಮೆ. ಆದ್ದರಿಂದ ರೋಟಾವೈರಸ್ ಭೇದಿಯಿಂದ ಮಕ್ಕಳನ್ನು ಕಾಪಾಡಲು ರೋಟಾವೈರಸ್ ಲಸಿಕೆಯನ್ನು ಹಾಕಿಸಬೇಕು. ರೋಟಾವೈರಸ್ ಲಸಿಕೆಯು ಕೇವಲ ರೋಟಾ ವೈರಾಣುವಿನಿಂದ ಉಂಟಾಗಬಹುದಾದ ಭೇದಿಯನ್ನು ತಡೆಗಟ್ಟುವಲ್ಲಿ ಪರಿಣಾಮಕಾರಿಯಾಗಿದೆ. (ಮಾಹಿತಿ: ವಿಶ್ವ ಆರೋಗ್ಯ ಸಂಸ್ಥೆ, ಪ್ರಾದೇಶಿಕ ಕಚೇರಿ ಮಂಗಳೂರು) ಡಾ| ಅಶ್ವಿನಿ ಕುಮಾರ್ ಗೋಪಾಡಿ
ಅಡಿಶನಲ್ ಪ್ರೊಫೆಸರ್,
ಕಮ್ಯೂನಿಟಿ ಮೆಡಿಸಿನ್ ವಿಭಾಗ ,
ಕೆಎಂಸಿ, ಮಣಿಪಾಲ