ಬೆಂಗಳೂರು: ಬಿಎಂಟಿಸಿ ಮಾದರಿಯಲ್ಲಿ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್)ದಲ್ಲೂ ರೊಟೇಷನ್ ಪದ್ಧತಿ ಅಳವಡಿಸಲಾಗಿದೆ. ಹಾಗಾಗಿ, ಒಟ್ಟಾರೆ ಸಿಬ್ಬಂದಿ ಪೈಕಿ ನಿತ್ಯ ಶೇ. 50ರಷ್ಟು ಮಾತ್ರ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ.
ಮಾನವ ಸಂಪನ್ಮೂಲ, ರೋಲಿಂಗ್ ಸ್ಟಾಕ್, ಸಿಗ್ನಲಿಂಗ್ ಸೇರಿದಂತೆ ನಿಗಮದ ಕಾರ್ಯಾಚರಣೆ ಮತ್ತು ನಿರ್ವಹಣೆಯಲ್ಲಿ ಬರುವ ವಿವಿಧ ವಿಭಾಗಗಳಲ್ಲಿನ ಸಿಬ್ಬಂದಿಗೆ ರೊಟೇಷನ್ ಪದ್ಧತಿ ಪರಿಚಯಿಸಲಾಗಿದೆ. ಈ ಪದ್ಧತಿಯಲ್ಲಿ ಒಟ್ಟಾರೆ ಸಿಬ್ಬಂದಿಯಲ್ಲಿ ಶೇ. 50 ನಿತ್ಯ ಕಾರ್ಯನಿರ್ವಹಣೆ ಮಾಡುವಂತೆ ಕ್ರಮ ಕೈಗೊಳ್ಳಲಾಗಿದೆ. ಅಂದರೆ, ಸಿಬ್ಬಂದಿಗೆ ವಾರದಲ್ಲಿ ಮೂರು ದಿನಗಳು ಮಾತ್ರ “ಡ್ಯೂಟಿ’ ಇರುತ್ತದೆ. ನಿಗಮದ ಕಾರ್ಯಾಚರಣೆ ಮತ್ತು ನಿರ್ವಹಣೆ ವಿಭಾಗದಲ್ಲಿ ಸುಮಾರು 1,200 ಕಾಯಂ ನೌಕರರಿದ್ದು, 300ಕ್ಕೂ ಅಧಿಕ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದಲ್ಲದೆ, ಹೌಸ್‌ಕೀಪಿಂಗ್, ಭದ್ರತೆ ಒಳಗೊಂಡಂತೆ ಹೊರಗುತ್ತಿಗೆಯಲ್ಲಿ ಅಂದಾಜು ನಾಲ್ಕು ಸಾವಿರ ಜನ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಸಿಬ್ಬಂದಿ ಮೊದಲ ಹಂತದಲ್ಲಿ ಬರುವ ಒಂದು ಇಂಟರ್‌ಚೇಂಜ್ ಸೇರಿ 40 ನಿಲ್ದಾಣಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಇವರೆಲ್ಲರೂ ಒಟ್ಟಿಗೆ ಕೆಲಸ ಮಾಡುವುದರಿಂದ ದಟ್ಟಣೆ ಉಂಟಾಗಿ, ಸೋಂಕು ತಗಲುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಪಾಳಿಯಲ್ಲಿ ವಾರದಲ್ಲಿ ಮೂರು ದಿನ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು. ಕಳೆದ ಮೂರು ತಿಂಗಳಿಂದ “ನಮ್ಮ ಮೆಟ್ರೋ’ ವಾಣಿಜ್ಯ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದು, ಜನದಟ್ಟಣೆ ಕೂಡ ಇಲ್ಲ. ಕೇವಲ ವಿದ್ಯುತ್ ನಿರ್ವಹಣೆ ಮತ್ತಿತರ ತಾಂತ್ರಿಕ ಕಾರಣಗಳಿಗಾಗಿ ನಿತ್ಯ ಬೆಳಗ್ಗೆ ಮತ್ತು ಸಂಜೆ ಮಾತ್ರ ರೈಲು ಕಾರ್ಯಾಚರಣೆ ಮಾಡುತ್ತಿದೆ. ಈ ಮಧ್ಯೆ ಕೋವಿಡ್ ಹಾವಳಿಯೂ ನಗರದಲ್ಲಿ ತೀವ್ರವಾಗಿದೆ. ಮತ್ತೂಂದೆಡೆ ವಿವಿಧೆಡೆಯಿಂದ ಆಗಮಿಸುವ ಸಿಬ್ಬಂದಿ ಒಂದೆಡೆ ಹೆಚ್ಚಿನ ಸಂಖ್ಯೆಯಲ್ಲಿ ಸೇರುವುದರಿಂದ ಸೋಂಕು ತಗುಲಬಹುದು. ಈ ಹಿನ್ನೆಲೆಯಲ್ಲಿ ರೊಟೇಷನ್ ವ್ಯವಸ್ಥೆ ಅಳವಡಿಸಲಾಗಿದೆ. ವೇತನ ಕಡಿತ, ಆರ್ಥಿಕ ಹೊರೆಯಂಥ ಕಾರಣಗಳೂ ಇದರ ಹಿಂದಿಲ್ಲ. ಯೋಜನಾ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಯಾವುದೇ ರೊಟೇಷನ್ ಪದ್ಧತಿ ಇಲ್ಲ. ಎಂದಿ ನಂತೆ ಎಲ್ಲ ಸಿಬ್ಬಂದಿ ನಿತ್ಯ ಕರ್ತವ್ಯಕ್ಕೆ ಹಾಜರಾಗುತ್ತಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಆಗಸ್ಟ್‌ಗೂ ಅನುಮಾನ: ಈ ಹಿಂದೆ ಕೇಂದ್ರ ಸರ್ಕಾರ ಹೊರಡಿಸಿದ್ದ ಮಾರ್ಗಸೂಚಿ ಪ್ರಕಾರ ಮೂರನೇ ಹಂತದಲ್ಲಿ ಅಂದರೆ ಜುಲೈ 3 ಅಥವಾ ನಾಲ್ಕನೇ ವಾರದಲ್ಲಿ ಮೆಟ್ರೋ ಸೇವೆ ಪುನರಾರಂಭಗೊಳ್ಳಲಿದೆ ಎಂದು ಹೇಳಲಾಗಿತ್ತು. ಪ್ರಸ್ತುತ ಪರಿಸ್ಥಿತಿ ಗಮನಿಸಿದರೆ ಆಗಸ್ಟ್ ನಲ್ಲೂ ಕಾರ್ಯಾಚರಣೆ ಅನುಮಾನ ಎಂದು ಕಾರ್ಯಾ ಚರಣೆ ವಿಭಾಗದ ಹಿರಿಯ ಅಧಿಕಾರಿ ಮಾಹಿತಿ ನೀಡಿದರು.
ಮೆಟ್ರೋ ಸಿಬ್ಬಂದಿ ಕೋವಿಡ್-19 ಡ್ಯೂಟಿಗೆ : ಕೋವಿಡ್-19 ಪ್ರಕರಣಗಳು ವ್ಯಾಪಕವಾಗುತ್ತಿದ್ದು, ಇದರ ಕಾರ್ಯಾಚರಣೆಗೆ “ನಮ್ಮ ಮೆಟ್ರೋ’ದ 340ಕ್ಕೂ ಅಧಿಕ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಬಿಬಿಎಂಪಿಯಿಂದ ನಡೆಯುತ್ತಿರುವ ಕಾರ್ಯಾ ಚರಣೆಯಲ್ಲಿ ಬಿಎಂಆರ್‌ಸಿಎಲ್‌ನ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 5 ಜನ ಅಧಿಕಾರಿಗಳು ಸೇರಿದಂತೆ 305 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅದೇ ರೀತಿ, 35 ಜನ ಸಿಬ್ಬಂದಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರು ಹೊರಗಿನಿಂದ ಬಂದಿಳಿಯುವವರ ಮೇಲೆ ನಿಗಾ ಇಡುವುದು, ಕ್ವಾರಂಟೈನ್ ಮಾಡುವುದು ಮತ್ತಿತರ ಕೆಲಸ ನಿರ್ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೋಗಿಗಳಿಗೆ ತ್ವರಿತವಾಗಿ ಸ್ಯಾನಿಟೈಸ್ ವ್ಯವಸ್ಥೆ : ಮೆಟ್ರೋ ಕಾರ್ಯಾಚರಣೆ ಪುನಾರಂಭಗೊಂಡಾಗ, ಬೋಗಿಗಳಿಗೆ ತ್ವರಿತವಾಗಿ ಸ್ಯಾನಿಟೈಸ್ ಮಾಡಲು ಹವಾನಿಯಂತ್ರಿತ ವ್ಯವಸ್ಥೆಯನ್ನು ಬಳಸಿಕೊಳ್ಳುವ ಆಲೋಚನೆಯೂ ಮೆಟ್ರೋ ಮಂಡಳಿ ಮುಂದಿದೆ. ಪ್ರತಿ ಟ್ರಿಪ್‌ಗೆ ಮ್ಯಾನ್ಯುವಲ್ ಆಗಿ ಸ್ಯಾನಿಟೈಸರ್ ಮಾಡಲು ಸಾಕಷ್ಟು ಸಮಯ ಹಿಡಿಯುತ್ತದೆ. ಕೊನೆಯ ನಿಲ್ದಾಣ ತಲುಪಿದಾಗೊಮ್ಮೆ ಸಿಂಪಡಣೆ ಮಾಡಲು ನಾಲ್ಕಾರು ನಿಮಿಷ ಬೇಕು. ಇದು ಕಾರ್ಯಾಚರಣೆ ಮೇಲೆ ಪ್ರಭಾವ ಬೀರಲಿದ್ದು, ಫ್ರೀಕ್ವೆನ್ಸಿ ಕಡಿತಗೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹವಾನಿಯಂತ್ರಿತ ಯಂತ್ರಗಳ ಮೂಲಕವೇ ಸ್ಯಾನಿಟೈಸ್ ಸಿಂಪಡಣೆ ಸಾಧ್ಯವೇ ಎಂಬುದರ ಬಗ್ಗೆ ಚಿಂತನೆ ನಡೆದಿದೆ ಎಂದು ಹೆಸರು ಹೇಳಲಿಚ್ಛಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.