Advertisement

ಮಕ್ಕಳಿಗೆ ರೋಟಾ ವೈರಸ್‌ ಲಸಿಕೆ ನೀಡಿ: ಜಿಲ್ಲಾಧಿಕಾರಿ

11:13 PM Aug 07, 2019 | Sriram |

ಉಡುಪಿ: ಮಕ್ಕಳಲ್ಲಿ ಅತಿಸಾರ ಬೇಧಿ ಉಂಟು ಮಾಡುವ ರೋಟಾ ವೈರಸ್‌ ನಿಯಂತ್ರಣಕ್ಕಾಗಿ ಮಕ್ಕಳಿಗೆ 6 ನೇ, 10 ನೇ ಮತ್ತು 14 ವಾರದಲ್ಲಿ ತಪ್ಪದೆ ರೋಟಾ ವೈರಸ್‌ ಲಸಿಕೆಯನ್ನು ನೀಡುವಂತೆ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

Advertisement

ಅವರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ರೋಟಾ ವೈರಸ್‌ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿಶ್ವ ಆರೋಗ್ಯ ಸಂಸ್ಥೆಯ ಸೂಚನೆಯಂತೆ ರೋಟಾ ವೈರಸ್‌ನಿಂದ ಮಕ್ಕಳಲ್ಲಿ ಕಂಡು ಬರುವ ಅತಿಸಾರ ಬೇಧಿ ನಿಯಂತ್ರಿಸಲು ರೋಟಾ ವೈರಸ್‌ ಲಸಿಕೆಯನ್ನು ನೀಡಬೇಕಿದೆ. ಸಾರ್ವತ್ರಿಕ ಲಸಿಕಾ ಕಾರ್ಯಕ್ರಮದಲ್ಲಿ ಈ ಲಸಿಕೆ ಸೇರ್ಪಡೆಯಾಗಿದ್ದು ಈ ವೈರಸ್‌ನಿಂದ ಉಂಟಾಗುವ ಪರಿಣಾಮಗಳ ಕುರಿತಂತೆ ಹಾಗೂ ಲಸಿಕೆ ನೀಡುವುದರ ಕುರಿತು ಆರೋಗ್ಯ ಇಲಾಖೆಯು ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ಆಶಾ ಕಾರ್ಯಕರ್ತೆಯರು ಸೇರಿದಂತೆ ಎಲ್ಲ ಸಿಬಂದಿಗೆ ಅಗತ್ಯ ತರಬೇತಿ ನೀಡುವಂತೆ ಡಿಎಚ್‌ಓ ಅವರಿಗೆ ಸೂಚಿಸಿದ ಡಿಸಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಮೂಲಕ ಅಂಗನವಾಡಿ ಕಾರ್ಯಕರ್ತೆಯರಿಗೆ ಮಾಹಿತಿ ನೀಡಿ, ಗರ್ಭಿಣಿ ಮಹಿಳೆಯರಿಗೆ ಈ ಬಗ್ಗೆ ಅರಿವು ಮೂಡಿಸಬೇಕು ಎಂದು ಹೇಳಿದರು.

ಸ್ಥಳಿಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾರ್ಯಪಡೆ ರಚಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ವಲಸೆ ಕಾರ್ಮಿಕರು ಹಾಗೂ ಕಟ್ಟಡ ಕಾರ್ಮಿಕರ ಮಕ್ಕಳು ಈ ಲಸಿಕೆಯಿಂದ ವಂಚಿತರಾಗದಂತೆ ವಿಶೇಷ ಕಾಳಜಿ ವಹಿಸುವಂತೆ ಹೆಪ್ಸಿಬಾ ರಾಣಿ ಸೂಚಿಸಿದರು.

ರಾಜ್ಯಾದ್ಯಂತ ಆಗಸ್ಟ್‌ 3 ನೇ ವಾರದಲ್ಲಿ ರೋಟಾ ಲಸಿಕೆ ನೀಡುವ ಕಾರ್ಯಕ್ರಮ ಆರಂಭವಾಗಲಿದೆ. ರೋಟಾ ಲಸಿಕೆಯ ಪ್ರಾಮುಖ್ಯತೆ ಬಗ್ಗೆ ಎÇÉ ಗ್ರಾ.ಪಂ.ಗಳ ಗ್ರಾಮ ಸಭೆಗಳಲ್ಲಿ ಅರಿವು ಮೂಡಿಸುವಂತೆ ಮತ್ತು ಸಮುದಾಯ ಸಭೆಗಳನ್ನು ನಡೆಸಿ ಮಾಹಿತಿ ನೀಡುವಂತೆ ಡಿಸಿ ತಿಳಿಸಿದರು.

Advertisement

ವಿಶ್ವ ಆರೋಗ್ಯ ಸಂಸ್ಥೆಯ ಪ್ರತಿನಿಧಿ ಸತೀಶ್ಚಂದ್ರ ರೋಟಾ ಲಸಿಕೆ ಕುರಿತು ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಅಶೋಕ್‌, ಜಿಲ್ಲಾ ಆರ್‌ಸಿಎಚ್‌ ಅಧಿಕಾರಿ ಎಂ.ಜಿ.ರಾಮ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ವಿವಿಧ ಸ್ವಯಂಸೇವಾ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next