ನೋಡಿದ ತಕ್ಷಣ ಮೈನಾ ಹಕ್ಕಿಯಂತೆಯೇ ಕಾಣಿಸುವುದು ಗುಲಾಬಿ ಸಾರಿಕಾ ಪಕ್ಷಿಯ ವೈಶಿಷ್ಟé.Rosy Starling (Sturnus roseus ) M Myna+,- ಬಯಲು ಪ್ರದೇಶ, ರಾಗಿ, ಭತ್ತ, ಜೋಳ ಬೆಳೆಯುವ ಕೃಷಿ ಪ್ರದೇಶದಲ್ಲಿ ಇದು ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಗುಲಾಬಿ ಗೊರವಂಕ ಎಂಬ ಇನ್ನೊಂದು ಹೆಸರೂ ಈ ಪಕ್ಷಿಗಿದೆ.
ಈ ಹಕ್ಕಿಯ ಇನ್ನೊಂದು ಹೆಸರು ಗುಲಾಬಿ ಗೊರವಂಕ. ಇದು ಸ್ಟುರ್ನಿಡಿ ಕುಟುಂಬಕ್ಕೆ ಸೇರಿದ ಹಕ್ಕಿ. ಸ್ಟರ್ನಿಸ್ ರೋಸಿಯಸ್ ಎನ್ನುವುದು ಇದಕ್ಕಿರುವ ವೈಜ್ಞಾನಿಕ ಹೆಸರು. ಗುಲಾಬಿ ಸಾರಿಕಾ ಮೈನಾ ಹಕ್ಕಿಯ ಗತ್ತು, ನಡಿಗೆ, ಹಾರುವ ಲಕ್ಷಣವನ್ನು ಹೋಲುವುದರಿಂದ ಇದನ್ನು ಮೈನಾ ಸಾರಿಕಾ ಅಂತಲೂ ಕರೆಯುವ ವಾಡಿಕೆ ಇದೆ.
ಈ ಹಕ್ಕಿ 23 ಸೆಂ.ಮೀ. ದೊಡ್ಡದು. ಬೆನ್ನು, ಹೊಟ್ಟೆ, ರೆಕ್ಕೆಯ ಬುಡ, ಎದೆಯ ಮೇಲಾºಗ ತಿಳಿ ಗುಲಾಬಿ ಬಣ್ಣದಿಂದ ಕೂಡಿದೆ. ತಲೆ, ಕುತ್ತಿಗೆ ,ರೆಕ್ಕೆಯ ಕೆಳಭಾಗ, ಬಾಲದ ಮೇಲ್ಭಾಗದಲ್ಲೆಲ್ಲಾ ಹೊಳೆವ ಕಪ್ಪು ಬಣ್ಣವಿದೆ. ತಲೆಯಿಂದ ಕುತ್ತಿಗೆಯವರೆಗೆ ಉದ್ದದ ಗರಿ ಇರುವ ಜುಟ್ಟು ಇರುತ್ತದೆ. ಈ ಹಕ್ಕಿಗೆ ಉದ್ದ, ಸದೃಢ ಕಾಲಿದೆ. ಅದರ ಮುಂದೆ ಎರಡು, ಹಿಂದೆ ಒಂದು ಬೆರಳಿರುತ್ತದೆ. ಬೆರಳಿನ ತುದಿಯಲ್ಲಿ ಚೂಪಾದ ಉಗುರು ಎದ್ದು ಕಾಣುವುದೇ ಸಾರಿಕಾ ಹಕ್ಕಿಯ ಮುಖ್ಯ ಲಕ್ಷಣ. ಹಕ್ಕಿಯ ದೇಹ ಹಾಗೂ ಚುಂಚು ಗುಲಾಬಿ ಬಣ್ಣದಿಂದ ಕೂಡಿದ್ದರೂ, ಕಾಲು ಮಾತ್ರ ತಿಳಿ-ಕಿತ್ತಳೆ ಬಣ್ಣದಿಂದ ಕೂಡಿರುತ್ತದೆ. ವಿಶೇಷ ಅಂದರೆ, ಹೆಣ್ಣು ಹಕ್ಕಿ ಮರಿಯಲ್ಲಿ ಕಂದು ಬಣ್ಣದಿಂದ ಕೂಡಿರುತ್ತದೆ. ಇದು ಪೂರ್ಣವಾಗಿ ಗುಲಾಬಿ ಬಣ್ಣ ತಳೆಯಲು ಎರಡು ವರ್ಷಬೇಕು. ಬಯಲು ಪ್ರದೇಶ, ಕೃಷಿ ಭೂಮಿ- ಅದರಲ್ಲೂ ಜೋಳ, ರಾಗಿ, ನವಣೆಯಂಥ ಧಾನ್ಯ ಬೆಳೆವ ಪ್ರದೇಶದಲ್ಲಿ ಈ ಹಕ್ಕಿ ದೊಡ್ಡ ಗುಂಪಿನಲ್ಲಿ ಕಾಣಿಸಿಕೊಳ್ಳುತ್ತದೆ. ತಲೆಯ ಮೇಲಿರುವ ಕಪ್ಪು ಜುಟ್ಟು ಕುತ್ತಿಗೆಯವರೆಗೆ ಚಾಚಿಕೊಂಡಿರುತ್ತದೆ. ನೋಡಲು ಗಂಡು ಮತ್ತು ಹೆಣ್ಣು ಒಂದೇ ರೀತಿ ಕಾಣುತ್ತವೆ.
ಒಂದು ಗುಂಪಿನಲ್ಲಿ ಸುಮಾರು 500 ರಿಂದ 1,000 ಹಕ್ಕಿಗಳು ಇರುತ್ತವೆ. ಒಟ್ಟಾಗಿ ಬಂದು ಹೊಲಗಳಿಗೆ ದಾಳಿ ಇಡುವುದು ಇವುಗಳ ರೂಢಿ. ಆದರೆ, ಬೆಳೆಗಳಿಗೆ ಮಾರಕವಾದ ಚಿಟ್ಟೆ, ಅವುಗಳ ಮೊಟ್ಟೆ ಮರಿಗಳನ್ನು ಅಗಾಧ ಸಂಖ್ಯೆಯಲ್ಲಿ ತಿಂದು ಧಾನ್ಯ ರಕ್ಷಿಸಿ- ಉಪಕಾರ ಮಾಡುವುದರಿಂದ ರೈತರು ಸಹಿಸಿಕೊಳ್ಳುವುದು ಉಂಟು. ಇದಲ್ಲದೇ, ಈ ಹಕ್ಕಿಗಳು ಪರಾಗಸ್ಪರ್ಶದಲ್ಲಿ ಬಹುಮುಖ್ಯ ಪಾತ್ರ ವಹಿಸುವುದರಿಂದ ರೈತರಪಾಲಿಗೆ ಇದು ಪ್ರಿಯವಾದ ಹಕ್ಕಿ.
ವೈರಿ ಹಕ್ಕಿಗಳಿಗೆ ಎಚ್ಚರಿಕೆ ನೀಡಲು ಈ ಹಕ್ಕಿ ಬಹುಶ ಭಿನ್ನ ರೀತಿಯಲ್ಲಿ ಹಾರಿ, ರೆಕ್ಕೆಗಳ ಮೂಲಕ ಬಹುದೊಡ್ಡ ಆಕಾರ ಸೃಷ್ಟಿಸುತ್ತದೆ. ದೂರದಿಂದ ನೋಡಿದವರಿಗೆ ಇದು ಗಿಡುಗನೇ ಇರಬೇಕು ಅನ್ನುವ ಭಯ ಹುಟ್ಟಿಸುತ್ತದೆ.
ಗುಲಾಬಿ ಸಾರಿಕಾ ಏಷಿಯಾದ ಪರ್ವತ ಪ್ರದೇಶದಲ್ಲೂ ಕೂಡ ಆಹಾರದ -ಲಭ್ಯತೆ ಇದ್ದಾಗ ಗೂಡು ಮಾಡಿ ಮೊಟ್ಟೆ ಇಟ್ಟು ಮರಿಮಾಡುತ್ತವೆ. ಈ ಹಕ್ಕಿಗೆ ದೊಡ್ಡ ಹಿನ್ನೆಲೆ ಇದೆ. 16ನೇ ಶತಮಾನದಲ್ಲೇ ಬಾಬರನ ಪುಸ್ತಕದಲ್ಲಿ ಈ ಹಕ್ಕಿಯ ಬಗ್ಗೆ ಚಿತ್ರ ಸಹಿತ ಉಲ್ಲೇಖ ಮಾಡಿರುವುದೇ ಇದಕ್ಕೆ ಉದಾಹರಣೆ. ಹಕ್ಕಿ ಮೈನಾ ಹಕ್ಕಿಗಳ ಒಡನಾಟದಲ್ಲಿರುವುದರಿಂದ ಅದರ ಜೊತೆಗೇ ಸೇರಿಕೊಂಡು ಹಣ್ಣು, ಕಾಳು ತಿನ್ನುತ್ತದೆ. ಹೂವಿನ ಮಕರಂದ ಹೀರುತ್ತದೆ. ಬಿಳಿ ಬಣ್ಣದ ಮೊಟ್ಟೆ ಇಡುತ್ತದೆ. ಗಂಡು ಹೆಣ್ಣು ಸೇರಿ ಮರಿಗಳಿಗೆ ಗುಟುಕು ನೀಡಿ, ಆರೈಕೆ ಮಾಡುತ್ತವೆ.
ಪಿ.ವಿ.ಭಟ್ ಮೂರೂರು