ಬೆಂಗಳೂರು: ಟಿಕೆಟ್ ಕೈ ತಪ್ಪಿದ್ದರಿಂದ ಮುನಿಸಿಕೊಂಡಿದ್ದ ಮಾಜಿ ಸಚಿವ ಆರ್.ರೋಷನ್ ಬೇಗ್ ಅವರನ್ನು ಸಮಾಧಾನ ಪಡಿಸುವಲ್ಲಿ ಪಕ್ಷದ ನಾಯಕರು ಯಶಸ್ವಿಯಾಗಿದ್ದಾರೆ.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ರೋಷನ್ ಬೇಗ್ ತಮಗೆ ಟಿಕೆಟ್ ಕೈ ತಪ್ಪಿದ್ದರಿಂದ ಮುನಿಸಿಕೊಂಡು ಪಕ್ಷದ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪ್ರರ ಪ್ರಚಾರದಲ್ಲಿ ತೊಡಗಿಕೊಳ್ಳದೇ ಅಂತರ ಕಾಯ್ದುಕೊಂಡಿದ್ದರು.
ತಮಗೆ ಟಿಕೆಟ್ ಸಿಗದಿದ್ದರೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಬೆದರಿಕೆ ಹಾಕಿ, ಹೈ ಕಮಾಂಡ್ ಮಟ್ಟದಲ್ಲಿಯೂ ಸಾಕಷ್ಟು ಲಾಬಿ ಮಾಡಿದ್ದರು. ಆದರೆ, ಕೊನೆ ಕ್ಷಣದಲ್ಲಿ ರಿಜ್ವಾನ್ ಅರ್ಷದ್‌ಗೆ ಟಿಕೆಟ್ ನೀಡಿದ್ದರಿಂದ ರೋಷನ್ ಬೇಗ್ ಬೇಸರಗೊಂಡು ಚುನಾವಣಾ ಚಟುವಟಿಕೆಗಳಿಂದ ಅಂತರ ಕಾಯ್ದುಕೊಂಡಿದ್ದರು.
ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿರುವ ಪ್ರಮುಖ ನಾಯಕರಾಗಿರುವುದರಿಂದ ಅವರ ಅನುಪಸ್ಥಿತಿಯಿಂದ ಆಗುವ ಸಮಸ್ಯೆಯನ್ನು ಅರಿತ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತ್ಯೇಕ ಮಾತುಕತೆ ನಡೆಸಿ, ಪಕ್ಷದ ಅಭ್ಯರ್ಥಿ ರಿಜ್ವಾನ್ ಅರ್ಷದ್ ಪರ ಪ್ರಚಾರದಲ್ಲಿ ತೊಡಗಿಸಿಕೊಳ್ಳುವಂತೆ ಸೂಚಿಸಿದ್ದರು.
ಪಕ್ಷದ ನಾಯಕರ ಮಾತಿಗೆ ಬೆಲೆ ಕೊಟ್ಟು ಸೋಮವಾರದಿಂದಲೇ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಪಕ್ಷದ ಮೂಲಗಳ ಪ್ರಕಾರ ರೋಷನ್ ಬೇಗ್ ಅವರಿಗೆ ಲೋಕಸಭೆ ಚುನಾವಣೆ ಮುಗಿದ ನಂತರ ಸೂಕ್ತ ಸ್ಥಾನ ಮಾನ ನೀಡುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.