ಬೆಂಗಳೂರು: ಸ್ವಪಕ್ಷೀಯರಾದ ರೋಷನ್ ಬೇಗ್ ಅವರ ‘ದುರಹಂಕಾರಿ’ ಹೇಳಿಕೆಗೆ ಪ್ರತಿಕ್ರಿಯೆ ನೀಡದೇ ಮಂಗಳವಾರವಿಡೀ ಮೌನಕ್ಕೆ ಶರಣಾಗಿದ್ದ ಮಾಜಿ ಸಿಎಂ ಸಿದ್ದರಾಮಯ್ಯ, ಬುಧವಾರ ತಿರುಗೇಟು ನೀಡಿದ್ದಾರೆ.
ಈ ಸಂಬಂಧ ಟ್ವೀಟ್ನಲ್ಲೇ ಉತ್ತರ ನೀಡಿರುವ ಸಿದ್ದರಾಮಯ್ಯ, ”ನನ್ನದು ಹಳ್ಳಿ ಭಾಷೆ ಮತ್ತು ನೇರ ನುಡಿ. ಸ್ವಾಭಿಮಾನಿಯಾದವರು ಮತ್ತು ಪ್ರಾಮಾಣಿಕರಾದವರು ಮಾತ್ರ ನೇರ ನಿಷ್ಠುರ ವ್ಯಕ್ತಿತ್ವ ಹೊಂದಿರುತ್ತಾರೆ. ಸೋಗಲಾಡಿಗಳಿಗೆ ಮಾತ್ರ ಅದು ಅಹಂಕಾರದಂತೆ ಕಾಣುತ್ತದೆ” ಎಂದು ತಿರುಗೇಟು ನೀಡಿದ್ದಾರೆ.
ನಾವು ಜನ ಪರ ಮತ್ತು ಬಡವರ ಪರವಾಗಿರುವುದರಿಂದ ಅಂಥವರ ಮಾತಿಗೆ ಹೆಚ್ಚು ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ. ರೋಷನ್ ಬೇಗ್ ಮಂತ್ರಿಯಾಗುವ ಬಯಕೆ ಹೊಂದಿದ್ದರು. ಜೊತೆಗೆ ಲೋಕಸಭಾ ಟಿಕೆಟ್ ಆಕಾಂಕ್ಷಿಯಾಗಿದ್ದರು. ಎರಡೂ ಕೈ ತಪ್ಪಿರುವುದರಿಂದ ಅವರು ಆ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಸಿದ್ದರಾಮಯ್ಯ ಟ್ವೀಟ್ ಮೂಲಕ ತಿರುಗೇಟು ನೀಡಿದ್ದಾರೆ.
ಆದರೆ, ಸಮನ್ವಯ ಸಮಿತಿ ಅಧ್ಯಕ್ಷರಾಗಿ ಸಿದ್ದರಾಮಯ್ಯ ವಿಫಲರಾಗಿದ್ದಾರೆ ಎಂಬ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, ವಿಶ್ವನಾಥ್ ನಮ್ಮ ಪಕ್ಷದವರಲ್ಲ, ಹೀಗಾಗಿ ಅವರ ಹೇಳಿಕೆ ಬಗ್ಗೆ ಬಹಿರಂಗವಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ಸಮನ್ವಯ ಸಮಿತಿ ಸಭೆಯಲ್ಲೇ ಈ ಬಗ್ಗೆ ಮಾತನಾಡುತ್ತೇನೆ ಎಂದು ತಿಳಿಸಿದರು.
ಸಿದ್ದು ವಿರುದ್ಧ ಮತ್ತೆ ವಿಶ್ವನಾಥ್ ಗುಡುಗು: ರೋಷನ್ ಬೇಗ್ ಅವರ ‘ಸಿದ್ದರಾಮಯ್ಯ ದುರಹಂಕಾರಿ’ ಹೇಳಿಕೆಯನ್ನು ಸಮರ್ಥಿಸಿದ್ದ ವಿಶ್ವನಾಥ್, ಬುಧವಾರವೂ ವಾಗ್ಧಾಳಿ ಮುಂದುವರಿಸಿದ್ದಾರೆ. ಕೋಲಾರದಲ್ಲಿ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದ ಸಾಧನೆಗಳನ್ನು ಜನರಿಗೆ ಮುಟ್ಟಿಸುವಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರಾದ ಸಿದ್ದರಾಮಯ್ಯ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ನನ್ನ ಮತ್ತು ಸಿದ್ದರಾಮಯ್ಯ ನಡುವೆ ವ್ಯಕ್ತಿಗತವಾಗಿ ಯಾವುದೇ ದ್ವೇಷವಿಲ್ಲ ನನಗೆ ಸಮ್ಮಿಶ್ರ ಸರಕಾರದ ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಿಲ್ಲದ ಬಗ್ಗೆ ಪ್ರತಿಯೊಬ್ಬರೂ ಪ್ರಶ್ನಿಸಬಹುದು ಎಂದು ವಿಶ್ವನಾಥ್ ಹೇಳಿದರು.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಆಡಳಿತ ನಡೆಸಲು ಬಿಡದೆ ಕಾಂಗ್ರೆಸ್ ಕಿರುಕುಳ ನೀಡುತ್ತಿದೆ. ಸಿದ್ದರಾಮಯ್ಯ ಒಬ್ಬರೇ ಈ ರೀತಿ ಕಿರುಕುಳ ನೀಡುತ್ತಿಲ್ಲ, ಇಡೀ ಕಾಂಗ್ರೆಸ್ ಪಕ್ಷದವರೇ ಹೀಗೆ ಮಾಡುತ್ತಿದ್ದಾರೆ ಎಂದು ಇತ್ತೀಚಿನ ಬೆಳವಣಿಗೆಗಳನ್ನು ಉಲ್ಲೇಖೀಸಿ ಹೇಳಿದರು.
ನನ್ನದು ನೇರ ನುಡಿಯಾಗಿರುವುದರಿಂದ ಸೋಗಲಾಡಿಗಳಿಗೆ ಅಹಂಕಾರದಂತೆ ಕಾಣಿಸುತ್ತೆ
ಕಾಂಗ್ರೆಸ್‌ನವರ ಕಿರುಕುಳ ಸಹಿಸುವಷ್ಟು ಶಕ್ತಿ ಮುಖ್ಯಮಂತ್ರಿ ಅವರಿಗೆ ಇದೆ. ಅವಧಿಗೆ ಮುನ್ನ ಚುನಾವಣೆ ನಡೆಸಲು ಜನ ಒಪ್ಪಲ್ಲ, ವಿಧಾನಸಭೆ ಚುನಾವಣೆ ನಡೆಸಲು ಕೋಟ್ಯಂತರ ರೂಪಾಯಿಬೇಕು.
– ಎಚ್.ವಿಶ್ವನಾಥ್, ಜೆಡಿಎಸ್ ರಾಜ್ಯಾಧ್ಯಕ್ಷ
ವಿಶ್ವನಾಥ್ ನಮ್ಮ ಪಕ್ಷದವರಲ್ಲ, ಹೀಗಾಗಿ ಅವರ ಹೇಳಿಕೆ ಬಗ್ಗೆ ಬಹಿರಂಗವಾಗಿ ಪ್ರತಿಕ್ರಿಯೆ ನೀಡುವುದಿಲ್ಲ. ಸಮನ್ವಯ ಸಮಿತಿ ಸಭೆಯಲ್ಲೇ ಈ ಬಗ್ಗೆ ಮಾತನಾಡುತ್ತೇನೆ.
– ಸಿದ್ದರಾಮಯ್ಯ, ಸಮನ್ವಯ ಸಮಿತಿ ಅಧ್ಯಕ್ಷ