Advertisement

“ರೋಸ್‌ ಆನಿಯನ್‌’ರಫ್ತಿಗೆ ಅನುಮತಿ

11:04 PM Oct 28, 2019 | Lakshmi GovindaRaju |

ನವದೆಹಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಬೆಂಗಳೂರು ವಲಯದಲ್ಲಿ ಬೆಳೆಯಲಾಗುವ “ರೋಸ್‌ ಆನಿಯನ್‌’ ಜಾತಿಯ ಈರುಳ್ಳಿಗಳನ್ನು ವಿದೇಶಕ್ಕೆ ರಫ್ತು ಮಾಡಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಈ ರಫ್ತು ಪ್ರಕ್ರಿಯೆಗೆ ಕಾಲ ಹಾಗೂ ತೂಕದ ಮಿತಿಯನ್ನೂ ವಿಧಿಸಲಾಗಿದೆ. ನ. 30ರವರೆಗೂ ರಫ್ತಿಗೆ ಅವಕಾಶ ಕಲ್ಪಿಸಲಾಗಿದ್ದು, 9,000 ಟನ್‌ವರೆಗೆ ಮಾತ್ರ ರಫ್ತು ಮಾಡಬಹುದು ಎಂದು ವಿದೇಶಿ ವ್ಯಾಪಾರಗಳ ಮಹಾ ನಿರ್ದೇಶನಾಲಯ (ಡಿಜಿಎಫ್ಟಿ) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

Advertisement

ಈರುಳ್ಳಿ ಕೊರತೆಯ ಹಿನ್ನೆಲೆಯಲ್ಲಿ ಅವುಗಳ ಬೆಲೆಯೇರಿಕೆ ತಡೆಗಟ್ಟಲು ಸೆಪ್ಟೆಂಬರ್‌ನಲ್ಲಿ ಕೇಂದ್ರ ಸರ್ಕಾರ, ಎಲ್ಲಾ ಜಾತಿಯ ಈರುಳ್ಳಿಗಳ ರಫ್ತಿನ ಮೇಲೆ ನಿಷೇಧ ಹೇರಿತ್ತು. ಈಗ, ಬೆಂಗಳೂರಿನ ರೋಸ್‌ ಆನಿಯನ್‌ ಮಾದರಿ ಈರುಳ್ಳಿಯನ್ನು ಆ ನಿಷೇಧದಿಂದ ವಿನಾಯ್ತಿ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಇದರ ಜತೆಗೆ, ಕೆಲವಾರು ನಿಬಂಧನೆಗಳನ್ನೂ ವಿಧಿಸಲಾಗಿದ್ದು, ಅದರಂತೆ, ಕೇವಲ ರೋಸ್‌ ಆನಿಯನ್‌ ಜಾತಿಯ ಈರುಳ್ಳಿಯನ್ನು ಮಾತ್ರ ರಫ್ತು ಮಾಡಬೇಕು.

ಚೆನ್ನೈ ಬಂದರಿನ ಮೂಲಕವೇ ಅವು ವಿದೇಶಗಳಿಗೆ ರವಾನೆಯಾಗಬೇಕು. ರಫ್ತುದಾರನು ತಾನು ರವಾನಿಸುತ್ತಿರುವ ಈರುಳ್ಳಿ ಮತ್ತು ತೂಕದ ಬಗ್ಗೆ ಕರ್ನಾಟಕ ತೋಟಗಾರಿಕೆ ಆಯುಕ್ತರಿಂದ ಪ್ರಮಾಣ ಪತ್ರ ಪಡೆದ ನಂತರವಷ್ಟೇ ರಫ್ತು ಪ್ರಕ್ರಿಯೆ ಆರಂಭಿಸಬೇಕು ಎಂದು ಹೇಳಲಾಗಿದ್ದು, ಇಡೀ ರಫ್ತು ಪ್ರಕ್ರಿಯೆಯನ್ನು ಬೆಂಗಳೂರಿನಲ್ಲಿರುವ ಡಿಜಿಎಫ್ಟಿ ಕಚೇರಿಯು ಮೇಲ್ವಿಚಾರಣೆ ನಡೆಸುತ್ತದೆ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next