ಬಾಗಲಕೋಟೆ : ಹೆಚ್ಚುವರಿ ಕಾರ್ಯ ನಿಯೋಜನೆ ಮಾಡಿದ್ದನ್ನು ವಿರೋಧಿಸಿ ಗುಲಾಬಿ ಗ್ಯಾಂಗ್ ಎಂದೇ ಕರೆಸಿಕೊಳ್ಳುವ ಜಿಲ್ಲೆಯ ಆಶಾ ಕಾರ್ಯಕರ್ತೆಯರು ಬುಧವಾರ ಸಹಸ್ರಾರು ಸಂಖ್ಯೆಯಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಜಿಲ್ಲೆಯಲ್ಲಿ 14 ಸಾವಿರಕ್ಕೂ ಹೆಚ್ಚು ಆಶಾ ಕಾರ್ಯಕರ್ತೆಯರಿದ್ದು, ಸಹಸ್ರಾರು ಸಂಖ್ಯೆಯ ಆಶಾಗಳು ನವನಗರದ ಎಲ್ ಐಸಿ ವೃತ್ತದಿಂದ ಜಿಲ್ಲಾಡಳಿತ ಭವನದ ವರೆಗೆ ಪ್ರತಿಭಟನೆ ಮೆರವಣಿಗೆ ನಡೆಸಿದರು. ಬಳಿಕ ಡಿಸಿ ಕಚೇರಿಗೆ ಮುತ್ತಿಗೆ ಹಾಕಿ, ಮೂಲ ಕಾರ್ಯಗಳಿಗಿಂತ ಹೆಚ್ಚುವರಿ ಕೆಲಸ ಹಾಕುತ್ತಿದ್ದು, ಇದರಿಂದ ಆಶಾಗಳಿಗೆ ತೀವ್ರ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಡಿಸಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಅಧ್ಯಕ್ಷ ಎಚ್.ಟಿ. ಮಲ್ಲಿಕಾರ್ಜುನ ಮಾತನಾಡಿ, ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಆರೋಗ್ಯ ಇಲಾಖೆಗೆ ಸಂಬಂಧಿಸಿದ ಕೆಲಸಗಳಿಗಿಂತ ಬೇರೆ ಇಲಾಖೆಯ ಕೆಲಸಗಳನ್ನೇ ಹೆಚ್ಚಾಗಿ ಹಾಕಲಾಗುತ್ತಿದೆ. ಸಧ್ಯ ಮೊಬೈಲ್ ಮೂಲಕ ಇ-ಸಮೀಕ್ಷೆ ಮಾಡಲು ಸೂಚಿಸಿದ್ದರು.
ಹಲವಾರು ಆಶಾಗಳು 10ರಿಂದ 15 ಸಾವಿರ ಕೊಟ್ಟು ಮೊಬೈಲ್ ಖರೀದಿ ಮಾಡುವ ಪರಿಸ್ಥಿತಿ ಬಂದಿದೆ. ಇದರಿಂದ ಆಶಾಗಳ ಕುಟುಂಬ ನಿರ್ವಹಣೆ ತೊಂದರೆಯಾಗಿದೆ. ಆಶಾಗಳಿಗೆ ಮಾಸಿಕ ಕೇವಲ 4 ಸಾವಿರ ಪ್ರೋತ್ಸಾಹಧನವಿದ್ದು, ಇದರಲ್ಲಿ ಕುಟುಂಬವನ್ನೇ ನಡೆಸಲು ಆಗುತ್ತಿಲ್ಲ. ಇನ್ನು ಸಾವಿರಾರು ರೂ. ಕೊಟ್ಟು ಮೊಬೈಲ್ ಖರೀದಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಆಶಾಗಳಿಗೆ ಮೊಬೈಲ್ ಅಥವಾ ಟ್ಯಾಬ್ ನೀಡದೇ ಇ-ಸಮೀಕ್ಷೆ ಮಾಡಿ ಎಂದರೆ ಹೇಗೆ ಸಾಧ್ಯ. ಸಮೀಕ್ಷೆ ಮಾಡಲು ಆಗದಿದ್ದರೆ ಕೆಲಸ ಬಿಡಿ ಎಂದು ಬೆದರಿಕೆ ಹಾಕುತ್ತಿದ್ದಾರೆ. ಕೊರೊನಾ ಪರಿಸ್ಥಿತಿಯಲ್ಲಿ ಹಲವಾರು ಕುಟುಂಬ ಸಂಕಷ್ಟ ಎದುರಿಸುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಮೊಬೈಲ್ ಖರೀದಿ ಹೇಗೆ ಸಾಧ್ಯ. ಮೊಬೈಲ್, ಟ್ಯಾಬ್, ಡಾಟಾ ನೀಡಿ, ಹೆಚ್ಚುವರಿ ಪ್ರೋತ್ಸಾಹಧನ ನೀಡಬೇಕು. ಆಗ ಇ-ಸಮೀಕ್ಷೆ ಮಾಡಲು ಸಾಧ್ಯ ಎಂದು ಹೇಳಿದರು.
ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಡಾಟಾ ಎಂಟ್ರಿ ಆಪರೇಟರ್ ನೀಡಬೇಕು. ಆಶಾಗಳಿಗೆ ಮೊಬೈಲ್ ನೀಡಬೇಕು. ಆಗ ಆಶಾಗಳು ಇ ಸಮೀಕ್ಷೆ ಮಾಡಲು ಸಾಧ್ಯವಿದೆ. ಅದರನ್ನು ಪಿಎಚ್‌ಸಿ ವ್ಯಾಪ್ತಿಯಲ್ಲಿ ದಾಖಲಿಸಲು ಅನುಕೂಲವಾಗಲಿದೆ. ಈ ಕುರಿತು ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕರೊಂದಿಗೆ ಚರ್ಚಿಸಲಾಗಿದೆ. ಅವರು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅಲ್ಲಿಯ ವರೆಗೆ ಇ-ಸಮೀಕ್ಷೆ ಕಾರ್ಯಕ್ಕೆ ಆಶಾಗಳಿಗೆ ಒತ್ತಡ ಹಾಕಬಾರದು ಎಂದು ಒತ್ತಾಯಿಸಿದರು. ಆಶಾ ಕಾರ್ಯಕರ್ತೆಯರಿಗೆ ಸಮೀಕ್ಷೆ ಮಾಡಲು ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸಬೇಕು, ಮೊಬೈಲ್ ಬಳಸಲು ಆಗುವುದಿಲ್ಲವೋ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಬೇಕು, ಇದಕ್ಕಾಗಿ ಪ್ರತ್ಯೇಕ ಸಂಭಾವನೆ ನೀಡಬೇಕು, ಒತ್ತಡ ಮಾಡದೇ ಅಗತ್ಯವಿರುವಷ್ಟು ಸಮಯ ನೀಡಬೇಕು, ಆರ್ಥಿಕ ಮಾಹಿತಿಯನ್ನು ಸಮೀಕ್ಷೆಯಿಂದ ಕೈಬಿಡಬೇಕು ಎಂದು ಆಗ್ರಹಿಸಿದರು.
ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಕಾರ್ಯದರ್ಶಿ ಅಂಜನಾ ಕುಂಬಾರ ನೇತೃತ್ವ ವಹಿಸಿದ್ದರು. ಪ್ರತಿಭಟನೆಯಲ್ಲಿ ಸಹಸ್ರಾರು ಆಶಾ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.