ಕಠ್ಮಂಡು: ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ಭಯೋತ್ಪಾದನೆಯು ಆತಂಕಕಾರಿ ಸಂಗತಿಯಾಗಿದ್ದು, ಉಗ್ರಗಾಮಿಗಳನ್ನು ಪ್ರೋತ್ಸಾಹಿಸುವ ದೇಶವನ್ನು ಹೊಣೆಗಾರರನ್ನಾಗಿಸಬೇಕು ಎಂದು ಭಾರತ ಸೇರಿದಂತೆ ಏಳು ದೇಶಗಳ ಒಕ್ಕೂಟ ಬಿಮ್‌ಸ್ಟೆಕ್ ಸಭೆಯಲ್ಲಿ ನಿಲುವಳಿ ಮಂಡಿಸಿದೆ. ಉಗ್ರ ಚಟುವಟಿಕೆಯನ್ನು ಪ್ರೋತ್ಸಾಹಿಸುತ್ತಿರುವ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸುವ ಉದ್ದೇಶದಿಂದ ಈ ನಿಲುವಳಿ ಮಂಡಿಸಲಾಗಿದೆ.
ನೇಪಾಳದ ಕಠ್ಮಂಡುವಿನಲ್ಲಿ ನಡೆದ 4ನೇ ಬಿಮ್‌ಸ್ಟೆಕ್ ಸಮ್ಮೇಳನದ ಕೊನೆಯ ದಿನದಂದು ಈ ನಿಲುವಳಿ ಕೈಗೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಾಂಗ್ಲಾದೇಶ, ಮ್ಯಾನ್ಮಾರ್, ಶ್ರೀಲಂಕಾ, ಥಾಯ್ಲೆಂಡ್, ಭೂತಾನ್ ಹಾಗೂ ನೇಪಾಳದ ಪ್ರಮುಖರು ಹಾಜರಿದ್ದರು.
ಉಗ್ರರನ್ನು ಹಾಗೂ ಉಗ್ರ ಸಂಘಟನೆಗಳನ್ನು ಸದೆಬಡಿಯುವುದಷ್ಟೇ ಅಲ್ಲ, ಉಗ್ರ ಕೃತ್ಯಕ್ಕೆ ಹೊಣೆಗಾರರನ್ನು ಗುರುತಿಸುವುದು, ಉಗ್ರರ ಆರ್ಥಿಕ ನೆರವನ್ನು ತಡೆಯುವುದೂ ಸೇರಿದಂತೆ ಉಗ್ರ ಚಟುವಟಿಕೆಯನ್ನು ಸಮಗ್ರವಾಗಿ ನಿರ್ಮೂಲನೆಗೊಳಿಸುವುದೂ ಅಗತ್ಯ ಎಂದು ಹೇಳಲಾಗಿದೆ. ಪಾಕಿಸ್ತಾನವನ್ನು ಈ ವೇಳೆ ಸ್ಪಷ್ಟವಾಗಿ ಉಲ್ಲೇಖೀಸಿಲ್ಲದಿದ್ದರೂ, ನಿಲುವಳಿ ಮಂಡಿಸಿರುವುದರ ಉದ್ದೇಶ ಪಾಕಿಸ್ತಾನಕ್ಕೆ ಬಿಸಿ ಮುಟ್ಟಿಸುವುದೇ ಆಗಿತ್ತು ಎಂಬುದು ಸ್ಪಷ್ಟ.
ರಕ್ಸಾಲ್-ಕಠ್ಮಂಡು ರೈಲು ಮಾರ್ಗಕ್ಕೆ ಒಪ್ಪಂದ: ನೇಪಾಳ ಪ್ರಧಾನಿ ಕೆ ಪಿ ಶರ್ಮಾ ಒಲಿಯವರನ್ನು ಭೇಟಿ ಮಾಡಿದ ಪ್ರಧಾನಿ ನರೇಂದ್ರ ಮೋದಿ ಬಿಹಾರದ ರಕ್ಸಾಲ್‌ನಿಂದ ಕಠ್ಮಂಡುಗೆ ಸಂಪರ್ಕಿಸುವ ರೈಲು ಮಾರ್ಗದ ಒಪ್ಪಂದಕ್ಕೆ ಅಂತಿಮ ರೂಪ ನೀಡಿದ್ದಾರೆ. ಒಪ್ಪಂದಕ್ಕೆ ಉಭಯ ದೇಶಗಳ ಅಧಿಕಾರಿಗಳು ಸಹಿ ಹಾಕಿದ್ದು, ವ್ಯಾಪಾರ ಹಾಗೂ ಸಾಂಸ್ಕೃತಿಕ ವಿನಿಮಯಗಳ ಬಗ್ಗೆಯೂ ಚರ್ಚೆ ನಡೆದಿದೆ. ಇದೇ ವೇಳೆ 400 ಜನರು ಉಳಿದುಕೊಳ್ಳಬಹುದಾದ ವಿಶ್ರಾಂತಿಧಾಮ ನೇಪಾಳ ಭಾರತ ಮೈತ್ರಿ ಪಶುಪತಿ ಧರ್ಮಶಾಲೆಯನ್ನು ಪ್ರಧಾನಿ ಮೋದಿ ಹಾಗೂ ಒಲಿ ಉದ್ಘಾಟನೆ ಮಾಡಿದ್ದಾರೆ.