ರೋಣ: ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗೆ ಹೋಗುವುದೆಂದರೆ ಮುಗು ಮುರಿಯುವುದೇ ಹೆಚ್ಚು. ಆದರೆ ರೋಣದಲ್ಲಿ ಮಾತ್ರ ಆ ಪರಿಸ್ಥಿತಿಯಿಲ್ಲ. ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ಕಠಿಣ ಪರಿಶ್ರಮ, ನಿಸ್ವಾರ್ಥ ಸೇವಾ ಮನೋಭಾವದಿಂದ ಇಲ್ಲಿನ ಸರ್ಕಾರಿ ಆಸ್ಪತ್ರೆ ಮಾದರಿಯಾಗಿ ನಿರ್ಮಾಣವಾಗಿದೆ.
ಪಟ್ಟಣದ ಡಾ| ಭೀಮಸೇನ ಜೋಶಿ ಸರ್ಕಾರಿ 100 ಹಾಸಿಗೆಯುಳ್ಳ ತಾಲೂಕು ಆಸ್ಪತ್ರೆ ಯಾವುದೇ ಹೈಟೆಕ್ ಆಸ್ಪತ್ರೆಗೆ ಕಮ್ಮಿಯಿಲ್ಲ. ಜನ ಸೇವೆಯೇ ಜನಾರ್ದನ ಸೇವೆ ಎಂದು ಡಾ| ಎಚ್.ಎಲ್. ಗಿರಡ್ಡಿ ಹಾಗೂ ಸಿಬ್ಬಂದಿ ಆಸ್ಪತ್ರೆ ಅಭಿವೃದ್ಧಿಗೆ ಹಗಲಿರುಳು ಶ್ರಮಿಸುತ್ತಿದ್ದಾರೆ. 2016 ಅ. 1ರಂದು ರೋಣ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಡಾ| ಎಚ್.ಎಲ್. ಗಿರಡ್ಡಿ ಮಾದರಿ ಸರ್ಕಾರಿ ಆಸ್ಪತ್ರೆಯಾಗಿ ಮಾರ್ಪಡಿಸುವ ಪಣ ತೊಟ್ಟರು. ಸೋರುವ ಆಸ್ಪತ್ರೆ, ಇದ್ದರೂ ಇಲ್ಲದಂತಿರುವ ಐಸಿಯು, ಸಿಬ್ಬಂದಿ ಕೊರತೆ, ಗಬ್ಬು ನಾರುತ್ತಿರುವ ಪರಿಸರ, ಮೆಡಿಸಿನ್ ಕೊರತೆ ಹೀಗೆ ನೂರಾರು ಸಮಸ್ಯೆಗಳನ್ನು ಸವಾಲಾಗಿಯೆ ಸ್ವೀಕರಿಸಿದರು. ಆರೋಗ್ಯ ಇಲಾಖೆಯಿಂದ ಹೆಚ್ಚಿನ ನೆರವು ಪಡೆದು ಈಗ ಆಸ್ಪತ್ರೆ ನಕ್ಷೆಯನ್ನೇ ಬದಲಾಯಿಸಿಬಿಟ್ಟಿದ್ದಾರೆ.
ಒಟ್ಟು ಸೇವೆ ಪಡೆಯುವ ರೋಗಿಗಳು: ಪ್ರತಿ ತಿಂಗಳು ನಾಲ್ಕುರಿಂದ ಐದು ಸಾವಿರ ರೋಗಿಗಳು ಈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 2019 ಜನೆವರಿ 1ರಿಂದ ಡಿಸೆಂಬರ್ 31ರ ವರೆಗೆ ಒಟ್ಟು ಒಂದು ವರ್ಷದ ಅವಧಿಯಲ್ಲಿ 64,633 ರೋಗಿಗಳು ಈ ಆಸ್ಪತ್ರೆ ಸೇವೆ ಪಡೆದಿದ್ದಾರೆ. ಅದರಲ್ಲಿ ಸಾಮಾನ್ಯ ಹಾಗೂ ಗಂಭೀರ ಶಸ್ತ್ರ ಚಿಕಿತ್ಸೆಯಲ್ಲಿ ಒಟ್ಟು 753 ಜನರು ಈ ಸೇವೆ ಪಡೆದಿದ್ದಾರೆ. ಜೊತೆಗೆ ಹೆರಿಗೆ ಸೇವೆಯಲ್ಲಿ 2019 ಜನೇವರಿಯಿಂದ ಡಿಸೆಂಬರ್ 31ರ ವರೆಗೆ ಒಟ್ಟು 574 ಮಹಿಳೆಯರು ಹೆರಿಗೆ ಮಾಡಿಸಿಕೊಂಡಿದ್ದಾರೆ.
ತಜ್ಞ ವೈದ್ಯರ ಕೊರತೆ: ಎಲ್ಲ ಸೇವೆಗಳನ್ನು ಜನರಿಗೆ ತಲುಪಿಸುವ ಈ ಆಸ್ಪತ್ರೆಯಲ್ಲಿ ಕೆಲವು ತಜ್ಞ ವೈದ್ಯರ ಕೊರತೆ ಎದ್ದು ಕಾಣುತ್ತಿದೆ.
ಜಿಲ್ಲಾಸ್ಪತ್ರೆ ಮೀರಿಸುವ ವೈದ್ಯಕೀಯ ಚಿಕಿತ್ಸೆ ರೋಣ ಸರ್ಕಾರಿ ಆಸ್ಪತ್ರೆಯಲ್ಲಿ ಕಲ್ಪಿಸುತ್ತಿದ್ದಾರೆ. ದಿನದ 24 ಗಂಟೆಯೂ ಆಸ್ಪತ್ರೆ ಕೆಲಸ ನಿರ್ವಹಿಸುತ್ತಿದ್ದು, ಸರ್ಕಾರಿ ಆಸ್ಪತ್ರೆ ಎನ್ನುವುದು ನಮ್ಮ ಆಸ್ಪತ್ರೆ ಎನ್ನವ ಮಟ್ಟಕ್ಕೆ ಬೆಳೆದು ನಿಂತಿದೆ. ಈಗ ಸದ್ಯ ಆಸ್ಪತ್ರೆಯಲ್ಲಿ ಅರವಳಿಕೆ ತಜ್ಞರು ಇರದ ಕಾರಣ ಶಸ್ತ್ರ ಚಿಕಿತ್ಸಾ ಸೇವೆ ಸ್ಥಗಿತಗೊಂಡಿದೆ. ಸರ್ಕಾರ ಕೂಡಲೇ ಅರವಳಿಕೆ ತಜ್ಞರನ್ನು ನೇಮಕ ಮಾಡುವಂತೆ ಆರೋಗ್ಯ ಇಲಾಖೆ ಸಚಿವರ ಗಮನಕ್ಕೆ ತಂದು ಅರವಳಿಕೆ ತಜ್ಞರ ನೇಮಕ ಮಾಡಿಸಲಾಗುವುದು
. –ಕಳಕಪ್ಪ ಬಂಡಿ, ಶಾಸಕ
ನಿತ್ಯವೂ ಆಸ್ಪತ್ರೆಗೆ ಬರುವ ರೋಗಿಗಳನ್ನು ನಮ್ಮವರಂತೆ ನೋಡಿಕೊಂಡು ಅವರಿಗೆ ಮಾನಸೀಕವಾಗಿ ಧೈರ್ಯವನ್ನು ತುಂಬುವುದರ ಜೊತೆಗೆ ಉತ್ತಮ ಆರೋಗ್ಯ ಸೇವೆ ನೀಡುವುದರಿಂದ ಜನರಿಗೆ ನಮ್ಮ ಆಸ್ಪತ್ರೆ ಮೇಲೆ ಭರವಸೆ ಬಂದಿದೆ. ಅಲ್ಲದೆ ಆಸ್ಪತ್ರೆಯೂ ಇಷ್ಟೊಂದು ಜನರಿಗೆ ಹತ್ತಿರವಾಗಲು ಕಾರಣ ನಮ್ಮ ಸಹೋದ್ಯೋಗಿಗಳ ನೆರವು, ಸಿಬ್ಬಂದಿ ಸಹಕಾರವೆ ಕಾರಣ. –
ಡಾ| ಎಚ್.ಎಲ್. ಗಿರಡ್ಡಿ, ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ
ಯಚ್ಚರಗೌಡ ಗೋವಿಂದಗೌಡ್ರ