ರೋಣ: ಸ್ವಂತ ಕಟ್ಟಡವಿಲ್ಲದೆ ದೇವಸ್ಥಾನದಲ್ಲಿ ಮಕ್ಕಳಿಗೆ ಪಾಠ ಮಾಡುವ ದುಸ್ಥಿತಿ ಇಲ್ಲಿನ ಅಂಗನವಾಡಿ ಕೇಂದ್ರಕ್ಕೆ ಬಂದೊದಗಿದ್ದು, ಅದೂ ಆಗೋ ಈಗೋ ಬೀಳುವ ಸ್ಥಿತಿಯಲ್ಲಿದೆ.
ಇದು ಪಟ್ಟಣದ ಅಂಗನವಾಡಿ ಕೇಂದ್ರ ಸಂಖ್ಯೆ-11 ರ ದುಸ್ಥಿತಿ. ಕಳೆದ ಹಲವು ವರ್ಷಗಳಿಂದ ಸ್ವಂತ ಕಟ್ಟಡವಿಲ್ಲದೆ ಚಿಕ್ಕ ಮಕ್ಕಳು ಪಟ್ಟಣದ ಗುಲಗಂಜಿ ಮಠದ ಎದುರುಗಡೆ ಇರುವ ಅಕ್ಕಮಹಾದೇವಿ ದೇವಸ್ಥಾನದಲ್ಲಿಯೇ ಪಾಠ ಕೇಳುತ್ತಿದ್ದಾರೆ. ದೇವಸ್ಥಾನದ ಮೇಲ್ಛಾವಣಿ ಸಂಪೂರ್ಣ ಕುಸಿಯುತ್ತಿದ್ದು, ಯಾವ ಸಮಯದಲ್ಲಿ ಬೇಕಾದರೂ ಬೀಳುವ ಸ್ಥಿತಿಯಲ್ಲಿದೆ. ಸದ್ಯಕ್ಕೆ ಅಂಗನವಾಡಿ ಕೇಂದ್ರದಲ್ಲಿ 25 ಮಕ್ಕಳು ಕಲಿಯುತ್ತಿದ್ದಾರೆ. ಅಂಗನವಾಡಿ ಕೇಂದ್ರದಿಂದ ಮರಳಿ ಮಕ್ಕಳು ಮನೆಗೆ ಹೋಗುವವರೆಗೂ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಗೆ ಒಂದು ರೀತಿಯ ಭಯವಿರುತ್ತದೆ. ಏಕೆಂದರೆ ಮೇಲ್ಛಾವಣಿ ಯಾವಾಗ ಬಿದ್ದು ಅನಾಹುತ ಸಂಭವಿಸುತ್ತದೆಯೋ ಎಂಬ ಭಯ.
ಕಳೆದ 10 ವರ್ಷಗಳಿಂದ ಈ ದೇವಸ್ಥಾನದಲ್ಲಿಯೇ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದ್ದು, ಇದುವರೆಗೂ ಸ್ವಂತ ಕಟ್ಟಡ ನಿರ್ಮಾಣ ಮಾಡಲು, ಬೇರೆ ಕಟ್ಟಡ ಬಾಡಿಗೆ ಪಡೆದುಕೊಳ್ಳುವ ಗೋಜಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹೋಗಿಲ್ಲ. ಈ ಹಿಂದೆ ಹಲವು ಬಾರಿ ಮೇಲ್ಛಾವಣಿಯ ಸಿಮೆಂಟ್ ಪಕಳೆಗಳು ಬಿದ್ದ ಉದಾಹರಣೆಗಳಿವೆ. ಸಂಪೂರ್ಣವಾಗಿ ಶಿಥಿಲಗೊಂಡಿರುವ ಈ ದೇವಸ್ಥಾನದಲ್ಲಿ ಅಂಗನವಾಡಿ ನಡೆಯುತ್ತಿದೆ. ಒಂದು ವೇಳೆ ಛಾವಣಿ ಕುಸಿದು ದುರಂತ ಸಂಭವಿಸಿದರೆ ಇದಕ್ಕೆ ಯಾರು ಹೊಣೆ ಯಾರು? ಇನ್ನಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಸೂಕ್ತ ಕ್ರಮಕ್ಕೆ ಮುಂದಾಗಬೇಕು ಎಂಬುದು ಇಲ್ಲಿನ ನಿವಾಸಿಗಳ ಆಶಯವಾಗಿದೆ.
ಕಳೆದ ಹಲವು ವರ್ಷಗಳಿಂದ ದೇವಸ್ಥಾನದಲ್ಲಿ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದ್ದು, ಮೇಲ್ಛಾವಣಿಯು ಸಂಪೂರ್ಣ ಕುಸಿದು ಬೀಳುವ ಹಂತ ತಲುಪಿದೆ. ಕುಸಿದು ಬಿದ್ದು ಮಕ್ಕಳಿಗೆ ಏನಾದರೂ ಆದರೆ ಅದಕ್ಕೆ ಯಾರು ಹೊಣೆಗಾರರು. ಕೂಡಲೇ ಈ ಕುರಿತು ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.
ಎ.ವಿ. ನಂದಿಕೋಲಮಠ,
ಸ್ಥಳೀಯ ಮುಖಂಡ