ರೋಮ್: ರೋಮ್ ರ್‍ಯಾಂಕಿಂಗ್ ಸೀರಿಸ್ ಕುಸ್ತಿ ಸ್ಪರ್ಧೆಯಲ್ಲಿ ಭಾರತದ ವಿನೇಶ್ ಪೋಗಟ್ ಚಿನ್ನದ ಪದಕ ಜಯಿಸಿದ್ದಾರೆ. ಇಬ್ಬರು ಚೀನೀ ಎದುರಾಳಿಗಳನ್ನು ಬಗ್ಗುಬಡಿದ ಬಳಿಕ ಈಕ್ವಡಾರ್‌ನ ಲೂಯಿಸಾ ಎಲಿಜಬೆತ್ ವಾಲ್ವೆರ್ಡ್ ಅವರನ್ನು ಫೈನಲ್‌ನಲ್ಲಿ 4-0 ಅಂತರದಿಂದ ಉರುಳಿಸುವ ಮೂಲಕ ವಿನೇಶ್ ಈ ಸಾಧನೆಗೈದರು.
53 ಕೆಜಿ ವಿಭಾಗದ ಫೈನಲ್‌ನಲ್ಲಿ ಎದುರಾಳಿಯನ್ನು “ಶೋಲ್ಡರ್ ಪುಲ್ಸ್’ ಪಟ್ಟುಗಳ ಮೂಲಕ ನಿತ್ರಾಣಗೊಳಿಸಿದ ವಿನೇಶ್ ಭರ್ಜರಿ ಮೇಲುಗೈ ಸಾಧಿಸಿದರು. ವಾಲ್ವೆರ್ಡ್‌ಗೆ ಪ್ರತಿರೋಧ ತೋರಲು ಯಾವ ಹಂತದಲ್ಲೂ ಸಾಧ್ಯವಾಗಲಿಲ್ಲ.
ಈ ಸಾಧನೆ ಟೋಕಿಯೊ ಒಲಿಂಪಿಕ್ಸ್‌ಗೆ ಪ್ರೇರಣೆ ಎಂಬುದಾಗಿ ವಿನೇಶ್ ಪ್ರತಿಕ್ರಿಯಿಸಿದ್ದಾರೆ. “ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮ ನೈಜ ಸಾಮರ್ಥ್ಯ ಅರಿವಿಗೆ ಬರುತ್ತದೆ. ಇದು ಒಲಿಂಪಿಕ್ಸ್ ವರ್ಷ. ಟೋಕಿಯೊ ಸಾಧನೆಗೆ ಇದು ಸ್ಫೂರ್ತಿಯಾಗಲಿದೆ’ ಎಂದರು. ಸದ್ಯ ವೋಲರ್ ಅಕೋಸ್ ಮಾರ್ಗದರ್ಶನದಲ್ಲಿ ವಿನೇಶ್ ತರಬೇತಿ ಪಡೆಯುತ್ತಿದ್ದಾರೆ.
ಫೈನಲಿಗೆ ಭಜರಂಗ್
ಇದೇ ಕೂಟದ ಪುರುಷರ 65 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಭಜರಂಗ್ ಪೂನಿಯ ಫೈನಲ್‌ಗೆ ಲಗ್ಗೆಯಿರಿಸಿದ್ದು, ಬಂಗಾರದ ನಿರೀಕ್ಷೆ ಮೂಡಿಸಿದ್ದಾರೆ. ಶನಿವಾರ ತಡರಾತ್ರಿಯ ಫೈನಲ್‌ನಲ್ಲಿ ಅವರು ಅಮೆರಿಕದ ಜೋರ್ಡನ್ ಮೈಕಲ್ ಒಲಿವರ್ ವಿರುದ್ಧ ಸೆಣಸುವರು. ಆದರೆ ಜೀತೆಂದರ್ (74 ಕೆಜಿ) ಮತ್ತು ದೀಪಕ್ ಪೂನಿಯ (86 ಕೆಜಿ) ಪದಕ ರೇಸ್‌ನಿಂದ ಹೊರಬಿದ್ದಿದ್ದಾರೆ.