Advertisement
ಅದು 70ರ ದಶಕದ ಆಸುಪಾಸು. ಯಾವುದಾದರೂ ಹಳ್ಳಿಯಲ್ಲಿ ಜಾತ್ರೆಗಳಿದ್ದರೆ, ಒಂದು ವಾರ ಮುಂಚಿತವಾಗಿಯೇ ಸುತ್ತಲಿನ ಯುವತಿಯರ ಗುಂಪು ಹೇಗಾದರೂ ಮಾಡಿ ಪೋಷಕರನ್ನು ಪುಸಲಾಯಿಸಿ, ತಪ್ಪದೆ ಆ ಜಾತ್ರೆಯಲ್ಲಿ ಟೆಂಟ್ ಹಾಕುತ್ತಿತ್ತು. ಯಾಕೆಂದರೆ ಅಲ್ಲಿ ಬಣ್ಣದ “ಬಾಬಿ ರಿಬನ್’ ಸಿಗುತ್ತಿದ್ದವು. ಹೀಗೆ ತಂದ ಬಾಬಿ ರಿಬನ್‌ಗಳನ್ನು ಅಪರೂಪದ ಸಂದರ್ಭಗಳಲ್ಲಿ ಹೊರತೆಗೆದು, ತಾಮ್ರದ ಚೊಂಬಿನಲ್ಲಿ ಕೆಂಡ ಹಾಕಿ, ನೀಟಾಗಿ ಇಸ್ತ್ರಿ ಮಾಡಿ ಹಾಕಿಕೊಳ್ಳುತ್ತಿದ್ದರು. ಅದು ರಿಷಿ ಕಪೂರ್ ಅವರ ಮೊದಲ ಚಿತ್ರ “ಬಾಬಿ’ಯ ಪ್ರಭಾವ! ಅಷ್ಟೇ ಯಾಕೆ, ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ, ತಮ್ಮ ಮಕ್ಕಳಿಗೆ “ರಿಷಿ’ ಎಂದು ಹೆಸರಿಟ್ಟಿದ್ದೂ ಇದೆ!
Related Articles
ಪ್ರಯೋಗದ ವಿಚಾರಕ್ಕೆ ಬಂದರೆ ರಿಷಿ ಕಪೂರ್ ಅವರು ಕನ್ನಡದ ಹಿರಿಯ ನಟರಾದ ಡಾ. ವಿಷ್ಣುವರ್ಧನ್, ವಿ. ರವಿಚಂದ್ರನ್‌ರನ್ನು ಹೋಲುತ್ತಾರೆ. ಹೆಚ್ಚು ಶ್ರಮಹಾಕಿ ಮಾಡಿದ ವಿಭಿನ್ನ ಪ್ರಯೋಗಗಳಿಂದ ಮಾಡಿದ ದೂಸ್ರಾ ಆದ್ಮಿ, ಪ್ರೇಮ್ ರೋಗ್‌ನಂತಹ ಚಿತ್ರಗಳು ನೆಲಕಚ್ಚಿವೆ. ಬಣ್ಣದ ಸ್ವೆಟರ್, ಬಿಳಿ ಪ್ಯಾಂಟ್, ಬೆಟ್ಟ ಅಥವಾ ಸರೋವರದ ಬ್ಯಾಕ್‌ಗ್ರೌಂಡ್ ಇರುವ ಸಾಂಪ್ರದಾಯಿಕ ಶೈಲಿಯ ಚಿತ್ರಗಳು ಸೂಪರ್ ಹಿಟ್ ಆಗಿವೆ. ಹಾಗಾಗಿ, ಪ್ರೇಕ್ಷಕರ ಅಭಿರುಚಿಗೆ ಒಗ್ಗಿಕೊಳ್ಳಬೇಕಾದ ಅನಿವಾರ್ಯತೆ ಅವರಿಗಿತ್ತು. ಜಯಪ್ರದ, ಶ್ರೀದೇವಿ, ಮಾಧುರಿ, ದಿವ್ಯಾಭಾರತಿ ಸೇರಿದಂತೆ ಅತಿ ಹೆಚ್ಚು ನಟಿಯರೊಂದಿಗೆ ನಟಿಸಿದ ಹೆಗ್ಗಳಿಕೆ ಮಾತ್ರವಲ್ಲ; ಅಮಿತಾಭ್, ಶಾರೂಖ್‌ರಂತಹ ದಿಗ್ಗಜರು ಉಚ್ಛಾಯ ಸ್ಥಿತಿ ತಲುಪುವಲ್ಲಿಯೂ ರಿಷಿ ಕಪೂರ್ ಕೊಡುಗೆ ಇದೆ.
Advertisement
ಚಾಕೋಲೇಟ್ ಆಸೆಗೆ ನಟನೆ!“ಪ್ಯಾರ್ ಹುವಾ ಇಕರಾರ್ ಹುವಾ…’ ಜನರ ಮನಸ್ಸಿನಲ್ಲಿ ಈಗಲೂ ಅಚ್ಚಹಸಿರಾಗಿರುವ ಈ ಹಾಡು ಶ್ರೀ 420 ಚಿತ್ರದ್ದು. ಹಾಡಿನಲ್ಲಿ ಮಳೆಯಲ್ಲಿ ರೈನ್ ಕೋಟ್ ಧರಿಸಿಕೊಂಡು ಮೂವರು ಹುಡುಗರು ನಡುವೆ ಹಾದುಹೋಗುತ್ತಾರೆ. ಅವರಲ್ಲಿ ಅತ್ಯಂತ ಚಿಕ್ಕ ಬಾಲಕ ರಿಷಿ ಕಪೂರ್. ಆಗ ರಿಷಿಗೆ ಐದು ವರ್ಷ. ಚಿತ್ರೀಕರಣದ ವೇಳೆ ನೀರು ಮುಖಕ್ಕೆ ಬೀಳುತ್ತಿದ್ದಂತೆ ಅಳಲು ಆರಂಭಿಸುತ್ತಿದ್ದರು. ಇದರಿಂದ ಹಲವು ರಿಟೇಕ್ ತೆಗೆದುಕೊಳ್ಳಬೇಕಾಯಿತು. ಆಗ ನಟಿ ನರ್ಗಿಸ್, ರಿಷಿ ಕಪೂರ್ ಬಳಿ ಬಂದು, ಅಳದೆ ಚೆನ್ನಾಗಿ ನಟಿಸಿದರೆ ಚಾಕೋಲೇಟ್ ಕೊಡುವುದಾಗಿ ಆಸೆ ತೋರಿಸಿದರು. ಚಾಕೋಲೇಟ್ ಆಸೆಗೆ ಮುಂದಿನ ಶಾಟ್‌ನಲ್ಲಿ ಅಳಲಿಲ್ಲ. ಶಾಟ್ ಕೂಡ ಓಕೆ ಆಯಿತು. ಇದನ್ನು ಸ್ವತಃ ರಿಷಿ ಕಪೂರ್ ಸಂದರ್ಶನ ವೊಂದರಲ್ಲಿ ಮೆಲುಕು ಹಾಕಿದ್ದರು. ಕರ್ನಾಟಕದ ನಂಟು
ರಿಷಿ ಕಪೂರ್ ಅವರ ಎರಡನೇ ಚಿತ್ರ ಹಾಗೂ ಅವರ ನೀತು ಸಿಂಗ್ ಜತೆ(ಆಗ ಇನ್ನೂ ಮದುವೆ ಆಗಿರಲಿಲ್ಲ)ಗಿನ ಮೊದಲ ಚಿತ್ರ ಚಿತ್ರೀಕರಣ ಮಾಡಿದ್ದು ಪುಟ್ಟಣ್ಣ ಕಣಗಾಲ್ ಹಾಗೂ ಅದು ಚಿತ್ರೀಕರಣಗೊಂಡಿದ್ದು ಚಿತ್ರದುರ್ಗದಲ್ಲಿ. ಆ ಚಿತ್ರ ಕನ್ನಡದ ನಾಗರಹಾವು ರಿಮೇಕ್ “ಜೆಹರೀಲಾ ಇನ್ಸಾನ್’. ಅಂದಹಾಗೆ ಈ ಚಿತ್ರದಲ್ಲಿ ಜಲೀಲನ ಪಾತ್ರ ನಿರ್ವಹಿಸಿದವರೂ ರೆಬೆಲ್ ಸ್ಟಾರ್ ಅಂಬರೀಷ್ ಎನ್ನುವುದು ವಿಶೇಷ. ರಿಷಿ ಕಪೂರ್ ಅವರ ಮೊದಲ ಚಿತ್ರ ಬಾಬಿ ಸೂಪರ್ ಹಿಟ್ ಆಗಿತ್ತು. ಬೆನ್ನಲ್ಲೇ ಅವರು ಮತ್ತೂಂದು ಹಳೆಯ ಪ್ರೇಮಕತೆಯ ಹುಡುಕಾಟದಲ್ಲಿದ್ದರು. ಆಗ ಸಿಕ್ಕಿದ್ದು “ನಾಗರಹಾವು’. -ವಿಜಯಕುಮಾರ್ ಚಂದರಗಿ