ಬೆಂಗಳೂರು: ಸಿಲಿಕಾನ್ ಸಿಟಿಯ ಪೊಲೀಸರು ಹಾಗು ಆರ್‌ಟಿಓ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ 10 ಐಷಾರಾಮಿ ಕಾರುಗಳನ್ನು ವಶಕ್ಕೆ ಪಡೆದಿದ್ದು, ಅವುಗಳ ಪೈಕಿ ಒಂದು ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ಅವರ ಹೆಸರಿನಲ್ಲಿದೆ.
ನಕಲಿ ನಂಬರ್ ಪ್ಲೇಟ್. ಬೇರೆ ರಾಜ್ಯಗಳಲ್ಲಿ ನೊಂದಣಿ , ರಸ್ತೆ ತೆರಿಗೆ ಬಾಕಿ, ವಿಮೆ ಮಾಡಿಸದೆ ಓಡಿಸುತ್ತಿರುವ ವಾಹನಗಳ ವಿರುದ್ಧ ದೂರು ಬಂದ ಹಿನ್ನೆಲೆ ಭಾನುವಾರ ಪ್ರತಿಷ್ಠಿತ ಯುಬಿ ಸಿಟಿ ಬಳಿ ಕಾರ್ಯಚಾರಣೆ ನಡೆಸಿದ ಅಧಿಕಾರಿಗಳು ಆಡಿ, ರೋಲ್ಸ್ ರಾಯ್ಸ್, ಲ್ಯಾಂಬೊರ್ಗಿನಿ, ಲ್ಯಾಂಡ್ ರೋವರ್, ಬೆಂಜ್ ಸೇರಿದಂತೆ 10 ದುಬಾರಿ ಬೆಲೆಯ ಕಾರುಗಳನ್ನು ಸೀಜ್ ಮಾಡಿದ್ದಾರೆ.
ಗಮನಾರ್ಹ ಸಂಗತಿ ಏನೆಂದರೆ ಪೊಲೀಸರು ವಶಕ್ಕೆ ಪಡೆದಿರುವ ಕಾರುಗಳ ಪೈಕೆ ರೋಲ್ಸ್ ರಾಯ್ಸ್ ಬಿಗ್ ಬಿ ಅಮಿತಾಬ್ ಅವರಿಗೆ ಸೇರಿದೆ. ಈ ಕಾರು 2019ರಲ್ಲಿ ಅಮಿತಾಬ್ ಬಚ್ಚನ್ ಎಂಬುವರ ಹೆಸರಿನಲ್ಲಿ ನೊಂದಣಿ ಆಗಿದೆ. ಆ ನಂತರ ಅದನ್ನು ಒಬ್ಬ ಬೆಂಗಳೂರಿನ ಉದ್ಯಮಿ ಖರೀದಿಸಿದ್ದಾರೆ. ನಾವು ಕಾರ್ಯಾಚರಣೆ ಮಾಡಿದಾಗ ಸಲ್ಮಾನ್ ಖಾನ್ ಹೆಸರಿನ ವ್ಯಕ್ತಿ ಕಾರು ಚಲಾಯಿಸುತ್ತಿದ್ದರು. ಕಾರಿನ ಯಾವುದೇ ದಾಖಲೆಯನ್ನು ಆ ವ್ಯಕ್ತಿ ನೀಡಲಿಲ್ಲ ಹಾಗಾಗಿ ಕಾರನ್ನು ವಶಕ್ಕೆ ಪಡೆದಿದ್ದೇವೆ. ಆ ಕಾರು ಮಹಾರಾಷ್ಟ್ರದ ನೊಂದಣಿ ಸಂಖ್ಯೆ ಹೊಂದಿದೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂದಹಾಗೆ ಈ ಕಾರು ಅಮಿತಾಬ್ ಅವರಿಗೆ ಸಿನಿಮಾ ನಿರ್ಮಾಪಕ ವಿಧು ವಿನೋಧ ಚೋಪ್ರಾ ಅವರು ಉಡುಗೊರೆಯಾಗಿ ನೀಡಿದ್ದರು. ಹಿಂದೆ 2019ರ ಫೆಬ್ರವರಿ 19ರಂದು 3 ಕೋಟಿ ರೂ.ಗಳಿಗೆ ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಯುಸೂಫ್ ಶರೀಪ್ ಎಂಬುವರಿಗೆ ಮಾರಾಟ ಮಾಡಿದ್ದರು.
ಇನ್ನು ಕಾರು ಸೀಜ್ ಮಾಡಿರುವ ಕುರಿತು ಮಾತನಾಡಿರುವ ಶರೀಫ್, ತಾವು 6 ಕೋಟಿ ಹಣ ಕೊಟ್ಟು ಕಾರು ಖರೀದಿಸಿದ್ದಾಗಿ ಹೇಳಿದ್ದರು. ಆರ್‌ಟಿಓ ನೀಡಿರುವ ಮಾಹಿತಿಯಂತೆ ಕಾರಿಗೆ 1.30 ಕೋಟಿ ಹಣವನ್ನಷ್ಟೆ ತೆರಲಾಗಿದೆ. ಕಾರು ಮಾರಾಟದ ಸಂದರ್ಭದಲ್ಲಿಯೇ ಕಾರಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಬಚ್ಚನ್ ನೀಡಿದ್ದಾರಂತೆ. ಆದರೆ ಕಾರು ಖರೀದಿಸಿರುವ ಷರೀಫ್ ಕಾರನ್ನು ತಮ್ಮ ಹೆಸರಿಗೆ ಮಾಡಿಕೊಳ್ಳದೆ ಬಚ್ಚನ್ ಹೆಸರಿನಲ್ಲಿಯೇ ಕಾರು ಚಲಾವಣೆ ಮಾಡುತ್ತಿದ್ದಾರೆ. ಇದೀಗ ನಟ ಅಮಿತಾಬ್ ಬಚ್ಚನ್‌ಗೆ ಬೆಂಗಳೂರು ಪೊಲೀಸರು ನೊಟೀಸ್ ಕಳಿಸಿದ್ದು, ಬಚ್ಚನ್ ಅವರ ಉತ್ತರಕ್ಕಾಗಿ ನಿರೀಕ್ಷಿಸುತ್ತಿದ್ದಾರೆ.