ಮುದ್ದೇಬಿಹಾಳ: ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುವಲ್ಲಿ ಶಿಕ್ಷಕರ ಪಾತ್ರ ಬಹು ಮುಖ್ಯವಾದುದು. ಅಂತಹ ಶಿಕ್ಷಕರ ಮಾರ್ಗದರ್ಶನದಲ್ಲಿ ಮಕ್ಕಳು ನಡೆದದ್ದೇ ಆದರೆ ಮಕ್ಕಳ ಭವಿಷ್ಯ ಉಜ್ವಲವಾಗುವುದರಲ್ಲಿ ಸಂದೇಹವೇ ಇಲ್ಲ ಎಂದು ಎಂಜಿಎಂಕೆ ಕಾಲೇಜಿನ ಪ್ರಾಚಾರ್ಯ ಎಸ್.ಕೆ. ಹರನಾಳ ಹೇಳಿದರು.
ಪಟ್ಟಣದ ಹೊರ ವಲಯದಲ್ಲಿರುವ ವಿದ್ಯಾಚೇತನ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಯಲ್ಲಿ ನಡೆದ ಕನ್ನಡ ಭಾಷಾ ಮೇಳ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ಪರ್ಧಾತ್ಮವಾಗುತ್ತಿರುವ ಬದುಕಿನಲ್ಲಿ ಸ್ವಾವಲಂಬಿಯಾಗಿ ಜೀವನ ನಡೆಸುವ ಶಕ್ತಿಯನ್ನು ಮಕ್ಕಳಲ್ಲಿ ತುಂಬಲು ಮಾಧ್ಯಮವಾಗಿ ಕಾರ್ಯನಿರ್ವಹಿಸುವ ಶಿಕ್ಷಣ ಎಲ್ಲರಿಗೂ ಮುಕ್ತವಾಗಿ ದೊರೆಯಬೇಕು ಎಂದು ಅವರು ಪ್ರತಿಪಾದಿಸಿದರು.
ಕೇಸಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಗುರು ಪಿ.ಸಿ. ಹಡಗಿನಾಳ ಮಾತನಾಡಿ, ಭೂಮಿಗೆ ಬಿದ್ದ ಬೀಜ ಮತ್ತು ಎದೆಗೆ ಬಿದ್ದ ಅಕ್ಷರ ಎಂದಿಗೂ ವ್ಯರ್ಥವಾಗುವುದಿಲ್ಲ ಎನ್ನುವ ಸರ್ವಕಾಲಿಕ ಸತ್ಯವನ್ನು ಅರಿತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿ ಮಕ್ಕಳ ಭವಿಷ್ಯ ರೂಪಿಸಬೇಕು ಎಂದರು.
ಉಪನ್ಯಾಸ ನೀಡಿದ ಆರ್‌ಎಂಎಸ್‌ಎ ಆದರ್ಶ ವಿದ್ಯಾಲಯದ ಕನ್ನಡ ಭಾಷಾ ಶಿಕ್ಷಕ ಐ.ಎಸ್. ಮಠರವರು ಮಕ್ಕಳು ಕಲಿಕೆಯಲ್ಲಿ ಕಾಯಾ-ವಾಚಾ-ಮಾನಸಾ ತೊಡಗಿಸಿಕೊಂಡಲ್ಲಿ ಅಸಾಧ್ಯವಾಗಿರುವುದನ್ನು ಸಾಧ್ಯವಾಗಿಸುವ ಶಕ್ತಿಯುಳ್ಳವರಾಗುತ್ತಾರೆ. ಶರೀರ ಮತ್ತು ಮನಸ್ಸಿನ ಆರೋಗ್ಯದ ಸಮತೋಲಿತ ಬೆಳವಣಿಗೆಗೆ ಆದ್ಯತೆ ನೀಡಿ ಕಲಿಕೆಯನ್ನು ಆನಂದಿಸುವ ಮಕ್ಕಳು ಮಾತ್ರ ಭವ್ಯ ಭಾರತದ ಅಮೂಲ್ಯ ಆಸ್ತಿಯಾಗುತ್ತಾರೆ ಎಂದರು.
ರವಿಕುಮಾರ ಬೆನಕಟಗಿ ಅಧ್ಯಕ್ಷತೆ ವಹಿಸಿದ್ದರು. ಯೋಜನಾ ಕಾರ್ಯದಲ್ಲಿ ಭಾಗವಹಿಸಿದ ವಿದ್ಯಾರ್ಥಿನಿಯರಾದ ಅನುಷಾ ಸಿದ್ದಾಪುರ, ದೀಪಾ ಬಿರಾದಾರ, ತಪ್ಸಿಯಾ ಮಕಾಂದಾರ ಮತ್ತು ವಿದ್ಯಾರ್ಥಿಗಳಾದ ವಿಶ್ವನಾಥ ಬಿಜ್ಜೂರ, ನಾಗರಾಜ ಕಟ್ಟಿಮನಿ, ಪ್ರಶಾಂತ ತೋಟದ ಪ್ರಶಸ್ತಿಗೆ ಭಾಜನರಾದರು. ಮುಖ್ಯಗುರು ಶಿವಕುಮಾರ ಹಿರೇಮಠ, ಸಹ ಶಿಕ್ಷಕರಾದ ಮಹೇಶ ಹಿರೇಮಠ, ಶಾಂತಯ್ಯ ಹಿರೇಮಠ, ಮಂಜುನಾಥ ಅಂಕೋಲಾ, ಎಂ.ಎಂ. ಮುಲ್ಲಾ ಹಾಗೂ ಸಹ ಶಿಕ್ಷಕಿಯರಾದ ದೀಪಾ ಪಾಟೀಲ, ಸುವರ್ಣ ಪಾಟೀಲ, ರಾಜೇಶ್ವರಿ ಬಿರಾದಾರ, ನಾಗರತ್ನಾ ಕುಂಟೋಜಿ ಇದ್ದರು. ಸಂತೋಷಕುಮಾರ ಧರ್ಮಪ್ಪಾ ಸ್ವಾಗತಿಸಿದರು. ಜ್ಯೋತಿ ಅಂಗಡಿ ನಿರೂಪಿಸಿದರು. ಜ್ಯೋತಿ ಹಾವೇರಿ ವಂದಿಸಿದರು.