Advertisement

ರೈತ ಆತ್ಮಹತ್ಯೆಯ ಪಾತ್ರ ಪ್ರಾಣವನ್ನೇ ಬಲಿತೆಗೆದುಕೊಂಡಿತು

05:16 PM Nov 07, 2017 | Team Udayavani |

ನಾಗಪುರ: ಜಿಲ್ಲೆಯಲ್ಲಿ ರೈತ ಆತ್ಮಹತ್ಯೆಯ ನಟನೆಯು ವ್ಯಕ್ತಿಯ ಜೀವವನ್ನು ನಿಜವಾಗಿಯೂ ಬಲಿತೆಗೆದುಕೊಂಡ ಘಟನೆ ನಡೆದಿದೆ. ಮೃತ ವ್ಯಕ್ತಿಯನ್ನು 27ರ ಹರೆಯದ ಕಲಾವಿದ ಮನೋಜ್‌ ಧುರ್ವೆ ಎಂದು ಗುರುತಿಸಲಾಗಿದೆ. ಧುರ್ವೆ ಇಲ್ಲಿ ಜರಗಿದ ಶೋಭಾ ಯಾತ್ರೆಯೊಂದರಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತನ ಪಾತ್ರವನ್ನು ನಿಭಾಯಿಸುತ್ತಿದ್ದ. ಈ ವೇಳೆ ಆಕಸ್ಮಿಕವಾಗಿ ಆತನ ಕುತ್ತಿಗೆಯಲ್ಲಿದ್ದ ನೇಣು ಬಿಗಿಯಾಗಿ, ಆತ ನರಳಿ ಸಾವನ್ನಪ್ಪಿದ. ಮನೋಜ್‌  ನೇಣಿಗೆ ಸಿಕ್ಕಿಕೊಂಡು ಒದ್ದಾಡುತ್ತಿದ್ದರೂ ಜನರು ಆತ ಪಾತ್ರ ನಿರ್ವಹಿಸುತ್ತಿದ್ದಾನೆ ಎಂದು ಭಾವಿಸಿದರು ಎಂದು ಪೊಲೀಸರು ತಿಳಿಸಿದರು.

Advertisement

ಟ್ಯಾಬ್ಲೊ ಮುಖಾಂತರ ಪ್ರಾತ್ಯಕ್ಷಿಕೆ 
ವಾಸ್ತವವಾಗಿ, ಶನಿವಾರ ರಾತ್ರಿ ನಾಗಪುರದ ರಾಮ್ಟೆಕ್‌ನಲ್ಲಿ ವೈಕುಂಠ ಚತುರ್ದಶಿಯ ಅಂಗವಾಗಿ ಶೋಭಾ ಯಾತ್ರೆಯೊಂದನ್ನು ಆಯೋಜಿಸಲಾಗಿತ್ತು. ಈ ಯಾತ್ರೆಯಲ್ಲಿ  ರೈತ ಆತ್ಮಹತ್ಯೆಯ ಬಗ್ಗೆ ಟ್ಯಾಬ್ಲೊದ ಮುಖಾಂತರ ಪ್ರಾತ್ಯಕ್ಷಿಕೆಯನ್ನು ನಡೆಸಲಾಯಿತು. ಅದರಲ್ಲಿ ಮನೋಜ್‌ ಧುರ್ವೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ರೈತನ ಪಾತ್ರವನ್ನು ನಿಭಾಯಿಸಿದ್ದ.

ನಟನೆ ಎಂದು ಭಾವಿಸಿ ಸುಮ್ಮನಾದರು
ರೈತ ಆತ್ಮಹತ್ಯೆಯ ಪ್ರಾತ್ಯಕ್ಷಿಕೆಯಲ್ಲಿ ಆತ ನಕಲಿ ಮರವೊಂದಕ್ಕೆ ಹಗ್ಗವನ್ನು ಕಟ್ಟಿ ಅದನ್ನು ತನ್ನ ಕುತ್ತಿಗೆಗೆ ಸಿಕ್ಕಿಸಿಕೊಂಡಿದ್ದ.  ಈ ಸಂದರ್ಭ ಟ್ಯಾಬ್ಲೊ ಎಳೆಯುತ್ತಿದ್ದ ಟ್ರಾÂಕ್ಟರ್‌ ದಾರಿ ಮಧ್ಯೆ  ಅಲ್ಲಾಡಿದಾಗ ಮನೋಜ್‌ ಕುತ್ತಿಗೆಯಲ್ಲಿದ್ದ ನೇಣು ಇದ್ದಕ್ಕಿದ್ದಂತೆ ಬಿಗಿಯಾಗಿತು ಮತ್ತು ಆತನಿಗೆ ಉಸಿರಾಡಲು ಕಷ್ಟವಾಯಿತು. ಆತ ತನ್ನ ಕೈ ಕಾಲುಗಳನ್ನು ಹೊರಳಾಡಿಸುತ್ತಿದ್ದರೂ ಜನರು ಅದನ್ನು ನಟನೆ ಎಂದು ಭಾವಿಸಿ ಸುಮ್ಮನೆ ನೋಡುತ್ತಿದ್ದರು. 

ಪ್ರಕರಣ ದಾಖಲು, ವೀಡಿಯೋ ವೈರಲ್‌ 
ಯಾರೂ ಆತನ ರಕ್ಷಣೆಗೆ ಬರಲಿಲ್ಲ.  ಶೋಭಾ ಯಾತ್ರೆ ಮುಗಿದ ಬಳಿಕ ಜನರು ಮನೋಜ್‌ ಬಳಿಗೆ ಹೋದಾಗ, ಆತ ಅಷ್ಟರಲ್ಲಿ ಕೊನೆಯುಸಿರೆಳೆದಿದ್ದ. ಘಟನೆಗೆ ಸಂಬಂಧಿಸಿದಂತೆ ರಾಮ್ಟೆಕ್‌ ಪೊಲೀಸರು ಆಕಸ್ಮಿಕ ಸಾವು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದ ವೀಡಿಯೊ ದೃಶ್ಯಾವಳಿಯು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next