Advertisement

ಉತ್ತಮ ಶಿಕ್ಷಕರ ನೆನಪಲ್ಲಿ: ಬಡತನದ ಬವಣೆಯಲ್ಲಿ ಗೆದ್ದು ಗುರುವಾದ ಭೀಮಣ್ಣ ಸಜ್ಜನ್

11:40 AM Sep 05, 2020 | keerthan |

ಶಿಕ್ಷಕರ ದಿನಾಚರಣೆ ಬಂದರೆ ಸಾಕು ಆ ದಿನವೆಲ್ಲ ಗುರುಭ್ಯೋ ನಮಃ ಎಂಬ ಉಕ್ತಿಯನ್ನು ನೆನೆಯುತ್ತಲೆ ನಮಗೆ ಪಾಠವನ್ನು ಹೇಳಿಕೊಟ್ಟ ಬಹುತೇಕ ಶಿಕ್ಷಕರಿಗೆ ಶುಭಾಶಯಗಳನ್ನು ತಿಳಿಸಿ ಸಂತಸವನ್ನು, ಅಭಿನಂದನೆಯನ್ನು, ಧನ್ಯವಾದವನ್ನು ತಿಳಿಸುತ್ತೇವೆ. ಆದರೆ ಯಾವ ವಿದ್ಯಾರ್ಥಿಯೂ ಸಹ ಅವರ ಹಿಂದಿನ ಮತ್ತು ಇಂದಿನ ದಿನಗಳ ಬದುಕಿನ ಭಾಗವನ್ನು ಆಸ್ವಾದಿಸುವುದಿಲ್ಲ. ಅಲ್ಲಿ ಪ್ರತಿಯೊಬ್ಬ ಶಿಕ್ಷಕರ ಹಿಂದೆ ಮತ್ತೊಬ್ಬ ಶಿಕ್ಷಕರ ಪ್ರೇರಣೆಯೇ ಇರುತ್ತದೆ. ಅವರಂತೆ ಆಗಬೇಕೆಂಬ ಅಚಲವಾದ ಆದರ್ಶಗಳ ನೆರಳಿರುತ್ತದೆ. ಜಟಿಲವಾದ ಬದುಕಿನ ಬವಣೆಯಿರುತ್ತದೆ. ಕೊನೆಯಲ್ಲಿ ಇವೆಲ್ಲವನ್ನು ಮೆಟ್ಟಿನಿಂತ ಸಾಧನೆಯ ಸಂತಸ ತುಂಬಿರುತ್ತದೆ. ಇದಕ್ಕೊಂದು ನೈಜ ನಿದರ್ಶನವೊಂದನ್ನು ನೀಡುವ ಸಲುವಾಗಿ ನಾ ಕಂಡ ಶಿಕ್ಷಕರೊಬ್ಬರ ಬದುಕಿನ ಚಿತ್ರಣವನ್ನು ಇಲ್ಲಿ ಚಿತ್ರಿಸುವ ಪ್ರಾಮಾಣಿಕ ಪ್ರಯತ್ನ ನನ್ನದು.

Advertisement

ಅದೊಂದು ಬಿಜಾಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಬೇಕಿನಾಳ ಎಂಬ ಪುಟ್ಟ ಹಳ್ಳಿಯಲ್ಲಿ ಜನಿಸಿ ಶಿಕ್ಷಣದ ಒಂದೊಂದೇ ಮೆಟ್ಟಿಲನ್ನು ಹತ್ತುತ್ತ ಕೊನೆಗೆ ಶಿಕ್ಷಕರಾಗಿ ಸಿರುಗುಪ್ಪ ತಾಲೂಕಿಗೆ ಬಂದು 2020-21 ಸಾಲಿನ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಗಳಿಸಿಯೂ ಸರಳರಲ್ಲಿ ಸರಳರಾಗಿ ಬಾಳುತ್ತಿದ್ದಾರೆ. ಅವರೇ ಭೀಮಣ್ಣ ಸಜ್ಜನ್ .ಇವರು  ಸೋಮಪ್ಪ ಸಜ್ಜನ್ ಮತ್ತು ಶಿವಮ್ಮ ಎಂಬ ಬಡ ಕೃಷಿಕ ದಂಪತಿಗಳ ಕಿರಿಯ ಮಗನಾಗಿ ಜನಿಸಿ ಓದಲು ಅನೇಕ ಕಷ್ಟಗಳನ್ನು ಅನುಭವಿಸಿದರು. ಸಿಂದಿಗಿಯಲ್ಲಿ ಓದುವಾಗ ಹಾಸ್ಟೆಲ್ ಸಿಗದೇ ತಮ್ಮ ಗೆಳೆಯನ ಕೋಣೆಯಲ್ಲಿ ಉಳಿದುಕೊಂಡು ಪ್ರತಿನಿತ್ಯ ಊಟಕ್ಕಾಗಿ ತಮ್ಮ ಊರಿನಿಂದ ಬರುವ ಬಸ್ಸಿಗಾಗಿ ಮತ್ತು ತಮ್ಮ ಪೋಷಕರು ಕಳಿಸುವ ಬುತ್ತಿಗಾಗಿ ಕಾಯಬೇಕಿತ್ತು. ಆದರೆ ಆ ದಿನ ಬುತ್ತಿ ಬರಲೇ ಇಲ್ಲ ಅಂತೆಯೇ ಯಾರನ್ನೂ ಏನೂ ಕೇಳದೆ ಇದ್ದ ಒಣ ರೊಟ್ಟಿ ಚೂರನ್ನು ತಿಂದು ಆ ದಿನ ಕಳೆದರು. ಮರುದಿನ ಬಂದ ಬಸ್ಸಿನ ಸಿಬ್ಬಂದಿಯನ್ನು ವಿಚಾರಿಸಿದಾಗ ಮನೆಯಲ್ಲಿ ಏನು ಇಲ್ಲದಾಗಿ ಪರರ ಸಹಾಯದಿಂದ ಬುತ್ತಿ ತಂದ ಸುದ್ದಿ ತಿಳಿದು ದುಃಖ ಪಟ್ಟಿದ್ದರು.

ಅಂದಿನಿಂದಲೇ ಶ್ರಮ ಪಟ್ಟು ಓದಿ 2000ನೇ ಇಸವಿಯಲ್ಲಿ ಶಿಕ್ಷಕ ವೃತ್ತಿಗೆ ಆಯ್ಕೆಯಾಗಿ ಸಿರುಗುಪ್ಪ ತಾಲೂಕಿನ ಸಿದ್ದರಾಂಪುರಕ್ಕೆ ಬಂದರು. ಕೆಲ ವರ್ಷಗಳ ನಂತರ ಸಿರಿಗೇರಿಯ ಮಾಳಾಪುರಕ್ಕೆ ವರ್ಗಾವಣೆಯಾಗಿ ಎನ್ ಪಿಜಿಎಲ್ ಯೋಜನೆ ಅಡಿಯಲ್ಲಿ ಶಾಲೆಬಿಟ್ಟ ಮಕ್ಕಳನ್ನು, ಬಾಲಕಾರ್ಮಿಕರನ್ನು ಮನವೊಲಿಸಿ ಶಾಲೆಯತ್ತ ಕರೆತಂದರು. ಅಲ್ಲದೆ ಸುಮಾರು 40-50 ಗಿಡಗಳನ್ನು ಶಾಲೆಯ ಆವರಣದಲ್ಲಿ ಮಕ್ಕಳಿಂದಲೇ ನೆಟ್ಟು ಶಾಲೆ ಪರಿಸರವನ್ನು ಅತ್ಯುತ್ತಮ ಗೊಳಿಸಿದರು. ಇದಾದ ನಂತರ ಊರಿನ ಜನರಿಂದ ಶಾಲೆಯ ಅಗತ್ಯ ವಸ್ತುಗಳನ್ನು ದಾನ ಪಡೆದು ಸಮುದಾಯ ಕೇಂದ್ರಿತ ಶಾಲೆಯನ್ನಾಗಿಸಿದರು. ಅಲ್ಲದೆ ವೈಯಕ್ತಿಕವಾಗಿ ಪ್ರತಿವರ್ಷ ಜನವರಿ 26ರಂದು 5ನೇ ತರಗತಿಯ ವಿದ್ಯಾರ್ಥಿಗಳಿಗೆ ಹಾಗೂ ವರ್ಷದ ವಿದ್ಯಾರ್ಥಿ ಪುರಸ್ಕೃತರಿಗೆ ವಿಶೇಷ ಬಹುಮಾನಗಳನ್ನು ನೀಡಿ ಹುರಿದುಂಬಿಸುತ್ತಾರೆ.

ಅಲ್ಲದೆ ನಲಿಯುತ ಕಲಿಯೋಣ ಎಂಬ ತತ್ವದಡಿಯಲ್ಲಿ ಮಕ್ಕಳನ್ನೆಲ್ಲ ಹಾಡಿ ಕುಣಿಸುತ್ತಾ ಬದುಕು ಮತ್ತು ಶಿಕ್ಷಣ ಎರಡನ್ನು ಮಿಶ್ರಣಮಾಡಿ ಬೋಧಿಸುತ್ತಾರೆ. ಈ ಎಲ್ಲಾ ಚಟುವಟಿಕೆಗಳನ್ನು ಗಮನಿಸಿ ಅನೇಕ ಸಂಘ ಸಂಸ್ಥೆ ಗಳು ಇವರನ್ನು ಸನ್ಮಾನಿಸಿವೆ. ಉದಾಹರಣೆಗೆ ಎನ್ ಪಿಜಿಎಲ್ ಉತ್ತಮ ಶಿಕ್ಷಕ ಪ್ರಶಸ್ತಿ’ ‘ಪರಿಸರ ಮಿತ್ರ ಶಾಲಾ ಪ್ರಶಸ್ತಿ’ ‘ಕಿತ್ತಳೆ ಶಾಲಾ ಪ್ರಶಸ್ತಿ’ ‘ನಲಿಕಲಿ ಅಭಿನಂದನಾ ಶಿಕ್ಷಕ’ ಇದಲ್ಲದೆ ಮಕ್ಕಳಿಗೆ ಸ್ವಂತ ಹಣದಿಂದ ಆಧಾರ್ ಕಾರ್ಡ್ ಜಾತಿ ಪ್ರಮಾಣ ಪತ್ರ ಮತ್ತಿತರೆ ದಾಖಲೆಗಳನ್ನು ಮಾಡಿಸಿ ‘ಉತ್ತಮ ಪೋಷಕ ಶಿಕ್ಷಕ’ ಎಂಬ ಗೌರವಾದರಗಳನ್ನು ಇಂದಿಗೂ ಉಳಿಸಿಕೊಂಡಿದ್ದಾರೆ.

21 ವರ್ಷದ ನಿಸ್ವಾರ್ಥ ಸಾಧನೆಯನ್ನು ಗಮನಿಸಿದ ಶಿಕ್ಷಣ ಇಲಾಖೆ ಇದೀಗ ಭೀಮಣ್ಣ ಸಜ್ಜನರವರಿಗೆ ಸಿರುಗುಪ್ಪ ತಾಲೂಕು ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ವಿಭಾಗದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡುತ್ತಿದೆ. ಈ ಶಿಕ್ಷಕ ದಿನದ ಸುಸಂದರ್ಭದಲ್ಲಿ ಈ ಮಹನೀಯರನ್ನು ನಾವು ನೀವು ಅಭಿನಂದಿಸಿ ಶಿಕ್ಷಕ ದಿನಾಚರಣೆಯ ಶುಭಾಶಯಗಳನ್ನು ಅರ್ಪಿಸೋಣ

Advertisement

ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ.

ಬರಹಗಾರರು ಮತ್ತು ಸಾಹಿತಿಗಳು.

Advertisement

Udayavani is now on Telegram. Click here to join our channel and stay updated with the latest news.

Next