Advertisement

ರೋಹಿತ್‌ ಆಗಮನ: ಸರಣಿ ಗೆಲುವಿನತ್ತ ಗಮನ- ಗೆದ್ದರೆ ಭಾರತಕ್ಕೆ ಏಕದಿನ ಸರಣಿ

08:46 AM Mar 19, 2023 | Team Udayavani |

ವಿಶಾಖಪಟ್ಟಣ: ವಾಂಖೇಡೆಯ ಬೌಲಿಂಗ್‌ ಟ್ರ್ಯಾಕ್‌ ಮೇಲೆ ಗೆಲುವಿನ ಹೆಜ್ಜೆ ಹಾಕಿದ ಭಾರತವೀಗ ವಿಶಾಖಪಟ್ಟಣದಲ್ಲಿ ಏಕದಿನ ಸರಣಿ ಗೆಲುವಿನತ್ತ ನೋಟ ಹರಿಸಿದೆ. ಭಾನು ವಾರ ನಿರ್ಣಾಯಕ ಪಂದ್ಯ ಏರ್ಪಡಲಿದ್ದು, ಆಸ್ಟ್ರೇಲಿಯದ ಮೇಲೆ ಸಹಜವಾಗಿಯೇ ಸರಣಿ ಸಮಬಲದ ಒತ್ತಡವಿದೆ.
ನಾಯಕ ರೋಹಿತ್‌ ಶರ್ಮ ಮರಳಿರುವುದು ಭಾರತಕ್ಕೆ ಹೆಚ್ಚಿನ ಬಲ ಮೂಡಿಸಿದೆ. ಇವರಿಗಾಗಿ ಇಶಾನ್‌ ಕಿಶನ್‌ ಜಾಗ ಬಿಡಬೇಕಾಗುತ್ತದೆ. ರೋಹಿತ್‌-ಗಿಲ್‌ ಇನ್ನಿಂಗ್ಸ್‌ ಆರಂಭಿಸಲಿದ್ದಾರೆ.

Advertisement

ಮುಂಬಯಿ ಮೇಲಾಟದಲ್ಲಿ ಬೌಲರ್‌ಗಳೇ ಮೇಲುಗೈ ಸಾಧಿಸಿದ್ದರು. ಅದರಲ್ಲೂ ಮುಖ್ಯವಾಗಿ ವೇಗಿಗಳ ಕೈ ಮೇಲಾಗಿತ್ತು. ಆಸ್ಟ್ರೇಲಿಯ 188ಕ್ಕೆ ಕುಸಿದ ಬಳಿಕ ಭಾರತದ 4 ವಿಕೆಟ್‌ 39 ರನ್ನಿಗೆ ಉದುರಿ ಹೋಗಿತ್ತು. ಅಗ್ರ ಕ್ರಮಾಂಕದ ವೈಫ‌ಲ್ಯ ಎದ್ದು ಕಂಡಿತ್ತು. ಇಶಾನ್‌ ಕಿಶನ್‌ (3), ವಿರಾಟ್‌ ಕೊಹ್ಲಿ (4), ಸೂರ್ಯಕುಮಾರ್‌ ಯಾದವ್‌ (0) ಹೀಗೆ ಬಂದು ಹಾಗೆ ಹೋದರು. ಶುಭಮನ್‌ ಗಿಲ್‌ (20) ಒಂದಿಷ್ಟು ಹೋರಾಟ ನಡೆಸಿದರೂ ಅವರಿಂದ ಕ್ರೀಸ್‌ ಆಕ್ರಮಿಸಿಕೊಳ್ಳಲಾಗಲಿಲ್ಲ. ಗಿಲ್‌ ಮತ್ತು ಕೊಹ್ಲಿ ಅಂತಿಮ ಟೆಸ್ಟ್‌ನಲ್ಲಿ ಶತಕ ಬಾರಿಸಿ ಬಂದವರೆಂಬುದನ್ನು ಮರೆಯುವಂತಿಲ್ಲ.

5ಕ್ಕೆ 83 ಎಂಬ ಸಂಕಟದ ಸ್ಥಿತಿಯಿಂದ ತಂಡವನ್ನು ಮೇಲೆತ್ತಿ ನಿಲ್ಲಿಸಿದ ಶ್ರೇಯಸ್ಸು ಕೆ.ಎಲ್‌. ರಾಹುಲ್‌ ಮತ್ತು ರವೀಂದ್ರ ಜಡೇಜ ಅವರಿಗೆ ಸಲ್ಲುತ್ತದೆ. ಈ ಜೋಡಿಯನ್ನು ಬೇರ್ಪಡಿಸಲಾಗದ ಕಾಂಗರೂ ಪಡೆ ನಿಧಾನವಾಗಿ ಸೋಲಿನ ಸುಳಿಗೆ ಜಾರತೊಡಗಿತು. ಇವರಲ್ಲಿ ರಾಹುಲ್‌ ಟೆಸ್ಟ್‌ ವೈಫ‌ಲ್ಯದಿಂದಾಗಿ ಕೊನೆಯ 2 ಪಂದ್ಯಗಳಿಂದ ಹೊರಗುಳಿದಿದ್ದರು. ರವೀಂದ್ರ ಜಡೇಜ ಏಕದಿನ ಪಂದ್ಯವೊಂದನ್ನು ಆಡಿದ್ದು 8 ತಿಂಗಳ ಬಳಿಕ ಇದೇ ಮೊದಲು. ಇವರ 108 ರನ್‌ ಜತೆಯಾಟ ಭಾರತವನ್ನು ಸೋಲಿನ ದವಡೆಯಿಂದ ಪಾರುಮಾಡಿತು.

ರಾಹುಲ್‌ ಫಾರ್ಮ್ ಕಂಡುಕೊಂಡದ್ದು ಟೀಮ್‌ ಇಂಡಿಯಾ ಪಾಲಿಗೊಂದು ಸಂತಸದ ಸಂಗತಿ. ಆದರೆ ಅಗ್ರ ಕ್ರಮಾಂಕದ ಶೀಘ್ರ ಪತನಕ್ಕೊಂದು ಪರಿಹಾರ ಅಗತ್ಯವಿದೆ. ರೋಹಿತ್‌, ಕೊಹ್ಲಿ ಕ್ರೀಸ್‌ ಆಕ್ರಮಿಸಿಕೊಂಡರೆ ಇದು ಸಾಧ್ಯ. ಹಾಗೆಯೇ ಸೂರ್ಯಕುಮಾರ್‌ ಕೂಡ. ಟಿ20ಯಲ್ಲಿ ಸಿಡಿದು ನಿಲ್ಲುವ ಸೂರ್ಯ ಏಕದಿನದಲ್ಲಿನ್ನೂ ಪ್ರಜ್ವಲಿಸಿಲ್ಲ, ತಂಡದ ಸ್ಟಾರ್‌ ಆಟಗಾರನ ಮಟ್ಟಕ್ಕೆ ಏರಿಲ್ಲ. ಕಳೆದ 15 ಏಕದಿನಗಳಲ್ಲಿ 50ರ ಗಡಿ ಮುಟ್ಟಿಲ್ಲ. ಶ್ರೇಯಸ್‌ ಅಯ್ಯರ್‌ ಪುನರಾಗಮನ ವಿಳಂಬವಾದ್ದರಿಂದ ಸೂರ್ಯಕುಮಾರ್‌ ಅವರೇ 4ನೇ ಕ್ರಮಾಂಕಕ್ಕೆ ಆಸರೆಯಾಗಬೇಕಿದೆ. ಮುಖ್ಯವಾಗಿ ಇವರೆಲ್ಲ ಆಸ್ಟ್ರೇಲಿಯದ ಎಡಗೈ ವೇಗಿಗಳ ದಾಳಿಯನ್ನು ತಡೆದು ನಿಲ್ಲುವುದು ಅಗತ್ಯ.

ಮಧ್ಯಮ ಹಾಗೂ ಕೆಳ ಕ್ರಮಾಂಕದಲ್ಲಿ ಆಲ್‌ರೌಂಡರ್‌ಗಳಾದ ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ ಮೇಲೆ ನಂಬಿಕೆ ಇಡಬಹುದು. ಇವರಲ್ಲಿ ಪಾಂಡ್ಯ ತೃತೀಯ ಸೀಮರ್‌ ಆಗಿಯೂ ಬಳಸಲ್ಪಡುವುದರಿಂದ ತಂಡದ ಬೌಲಿಂಗ್‌ ವಿಭಾಗದಲ್ಲಿ ಬದಲಾವಣೆ ಸಾಧ್ಯತೆ ಕಡಿಮೆ.

Advertisement

ಸಂಭಾವ್ಯ ತಂಡಗಳು
ಭಾರತ
ರೋಹಿತ್‌ ಶರ್ಮ (ನಾಯಕ), ಶುಬಮಾನ್‌ ಗಿಲ್‌, ವಿರಾಟ್‌ ಕೊಹ್ಲಿ, ಸೂರ್ಯ ಕುಮಾರ್‌ ಯಾದವ್‌ / ಇಶಾನ್‌ ಕಿಶನ್‌, ಕೆ.ಎಲ್‌. ರಾಹುಲ್‌ ( ವಿಕೆಟ್‌ ಕೀಪರ್‌), ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜ, ಶಾರ್ದೂಲ್‌ ಠಾಕೂರ್‌/ ವಾಷಿಂಗ್ಟನ್‌ ಸುಂದರ್‌, ಕುಲ್ದೀಪ್‌ ಯಾದವ್‌, ಮೊಹಮ್ಮದ್‌ ಶಮಿ, ಮೊಹಮ್ಮದ್‌ ಸಿರಾಜ್‌.

ಆಸ್ಟ್ರೇಲಿಯ
ಮಿಚೆಲ್‌ ಮಾರ್ಷ್‌, ಟ್ರೇವಿಸ್‌ ಹೆಡ್‌, ಸ್ಟೀವನ್‌ ಸ್ಮಿತ್‌ ( ನಾಯಕ), ಮಾರ್ನಸ್‌, ಅಲೆಕ್ಸ್‌ ಕ್ಯಾರಿ (ವಿಕೆಟ್‌ ಕೀಪರ್‌), ಕ್ಯಾಮ ರೋನ್‌ ಗ್ರೀನ್‌, ಗ್ಲೆನ್‌ ಮ್ಯಾಕ್ಸ್‌ ವೆಲ್‌, ಸ್ಟೋನಿಸ್‌, ಅಬ್ಬೆಟ್‌, ಮಿಚೆಲ್‌ ಸ್ಟಾರ್ಕ್‌, ಆ್ಯಡಂ ಜಂಪ.

Advertisement

Udayavani is now on Telegram. Click here to join our channel and stay updated with the latest news.

Next