ಹೈದರಾಬಾದ್ : 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ‘ಮನು ಸ್ಮತಿ ಇರಾನಿ’ಗೆ ಪಾಠ ಕಲಿಸಲು ರೋಹಿತ್ ವೇಮುಲ ತಾಯಿ ರಾಧಿಕಾ ವೇಮುಲ ಅವರು ರಾಜಕೀಯಕ್ಕೆ ಬರಬೇಕು ಎಂದು ಗುಜರಾತ್ ಶಾಸಕ ಮತ್ತು ದಲಿತ ನಾಯಕ ಜಿಗ್ನೇಶ್ ಮೇವಾನಿ ಹೇಳಿದ್ದಾರೆ.
ರೋಹಿತ್ ವೇಮುಲನ ಸಾವು ಸಾಂಸ್ಥಿಕವಾಗಿ ನಡೆದಿರುವ ಕೊಲೆಯಾಗಿದೆ ಎಂದು ಜಗ್ನೇಶ್ ಮೇವಾನಿ ತಮ್ಮ ಟ್ವಿಟರ್‌ನಲ್ಲಿ ಹೇಳಿದರು.
ಹೈದರಾಬಾದ್ ಜೈಲಿನಲ್ಲಿ ಇರಿಸಲ್ಪಟ್ಟಿರುವ ದಲಿತ ನಾಯಕ ಮಂಡ ಕೃಷ್ಣ ಮಾದಿಗ ಅವರನ್ನು ಭೇಟಿಯಾಗಿ ಬಂದ ಮೇವಾನಿ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತಾ, ದಲಿತರ ಏಳಿಗೆಗಾಗಿ ತಾನು ರಾಷ್ಟ್ರಾದ್ಯಂತದ ದಲಿತರನ್ನು ಒಗ್ಗೂಡಿಸಲು ಉದ್ದೇಶಿಸಿದ್ದೇನೆ ಎಂದು ಹೇಳಿದರು.
ಹೈದರಾಬಾದ್ ವಿವಿಯಲ್ಲಿ ದಲಿತ ಸಂಶೋಧನ ವಿದ್ಯಾರ್ಥಿಯಾಗಿದ್ದ 28ರ ಹರೆಯದ ರೋಹಿತ್ ವೇಮುಲ ಅವರ ಶವವು 2016ರ ಜನವರಿ 17ರಂದು ತನ್ನ ಹಾಸ್ಟೆಲ್ ಕೋಣೆಯಲ್ಲಿ ನೇಣು ಹಾಕಿಕೊಂಡಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಜಾತಿ ತಾರತಮ್ಯದ ಕಾರಣಕ್ಕೆ ರೋಹಿತ್ ವೇಮುಲಗೆ ಮಾಸಿಕ 25,000 ರೂ. ವಿದ್ಯಾರ್ಥಿ ವೇತನ ಕೊಡುವುದನ್ನು ವಿಶ್ವವಿದ್ಯಾಲಯ ನಿಲ್ಲಿಸಿತ್ತು ಮತ್ತು ಅದೇ ಕಾರಣಕ್ಕೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಆತನ ಸ್ನೇಹಿತರು ಮತ್ತು ಮನೆಯವರು ಆಪಾದಿಸಿದ್ದರು.