Advertisement
ರಾಕ್ಷಸನಿಗೆ ಹೋಲಿಸುತ್ತೀರಲ್ಲ ಎಂದು ವಿವಾದವೆಬ್ಬಿಸುವ ಅಗತ್ಯವಿಲ್ಲ. ಇಲ್ಲಿ ಹೋಲಿಸುತ್ತಿರುವುದು ಕುಂಭಕರ್ಣನ ಸಾಮರ್ಥ್ಯಕ್ಕೆ, ಸ್ವಭಾವಕ್ಕೆ. ರೋಹಿತ್ ಕೂಡ ಹಾಗೆಯೇ. ಕೆಲವೊಮ್ಮೆ ಅವರ ಬ್ಯಾಟ್ ಮಲಗಿಬಿಟ್ಟರೆ, ಅವರ ಸಾಮರ್ಥ್ಯದ ಬಗ್ಗೆಯೇ ಅನುಮಾನ ಬರುವಷ್ಟು ತಣ್ಣಗಾಗುತ್ತಾರೆ. ಸಿಡಿಯಲು ಆರಂಭಿಸಿದರೆ, ಆಗಲೂ ಅನುಮಾನ ಬರುವಷ್ಟು ಸಿಡಿಯುತ್ತಾರೆ. ರೋಹಿತ್ ಅಬ್ಬರಿಸುವಾಗ ಇವನು ನಿಜಕ್ಕೂ ಮನುಷ್ಯನಾ ಅಥವಾ ಮಾಯಗಾರನಾ ಎನ್ನುವಂತೆ ಕಾಣಿಸುತ್ತಾರೆ! ಇಂತಹ ರೋಹಿತ್ ಶರ್ಮಗಿದ್ದ ಏಕೈಕ ಕಳಂಕ ಟೆಸ್ಟ್‌ನಲ್ಲಿ ಅವರ ಆಟ ಏನೇನೂ ಇಲ್ಲ ಎನ್ನುವುದು.
Related Articles
Advertisement
ಆಗ ರೋಹಿತ್ ಪಾಲಿಗೆ ಭಾಗ್ಯದ ಬಾಗಿಲು ತೆರೆಯಿತು. ಕೆಳಕ್ರಮಾಂಕದಲ್ಲಿ ಬರುವ ರೋಹಿತ್ ಆರಂಭಿಕರಾಗಲೀ ಎಂದು ಸೌರವ್ ಗಂಗೂಲಿ ಧ್ವನಿಯೆತ್ತಿದರು. ಕೂಡಲೇ ಮುಂದಿನ ಸಭೆಯಲ್ಲಿ ಅದು ಜಾರಿಯಾಯಿತು. ಹೀಗಾದರೂ ಭಾರತ ಟೆಸ್ಟ್ ತಂಡಕ್ಕಿದ್ದ ಆರಂಭಿಕರ ಸಮಸ್ಯೆ ಬಗೆಹರಿಯಲಿ ಎನ್ನುವುದು ಎಲ್ಲರ ಆಶಯವಾಗಿತ್ತು. ಹಿಂದೆ ವೀರೇಂದ್ರ ಸೆಹ್ವಾಗ್ ಆರಂಭಿಕರಾಗಿ ನಿರ್ವಹಿಸಿದ್ದ ಪಾತ್ರವನ್ನು ರೋಹಿತ್‌ರಿಂದ ನಾಯಕ ಕೊಹ್ಲಿ ಬಯಸಿದ್ದರು. ಎಲ್ಲರೂ ನಿರೀಕ್ಷೆಗಳ ಮಹಾಪೂರ ಹೊಂದಿದ್ದರೂ ಪವಾಡಸದೃಶ ಆಟವನ್ನೇನು ನಿರೀಕ್ಷಿಸಿರಲಿಲ್ಲ. ತಂಡದಲ್ಲಿ ಅವರ ಸ್ಥಾನ ಗಟ್ಟಿಯಾದರೆ ಸಾಕು, ಆರಂಭಿಕ ಸ್ಥಾನದಲ್ಲಿದ್ದ ಕೊರತೆಯನ್ನು ತುಂಬಿದರೆ ಸಾಕು, ಇಷ್ಟು ಮಾತ್ರ ಬಯಕೆಯಿದ್ದಿದ್ದು. ಆದರೆ ನಡೆದಿದ್ದೇ ಬೇರೆ!
ಅಸಾಮಾನ್ಯ ಬ್ಯಾಟಿಂಗ್, ಅಸದೃಶ ಪ್ರತಿಭೆ!: ಟೆಸ್ಟ್‌ನಲ್ಲಿ ಆರಂಭಿಕರಾಗಿ ಬಡ್ತಿ ಪಡೆದ ರೋಹಿತ್ ಎದುರಾಳಿಗಳು ಬೆಚ್ಚಿಬೀಳುವಂತಹ ಆಟವಾಡಿದರು. ತಾವು ಆರಂಭಿಕರಾಗಿ ಕಣಕ್ಕಿಳಿದ ಮೊದಲ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 176 ರನ್ ಬಾರಿಸಿದರೆ, 2ನೆ ಇನಿಂಗ್ಸ್‌ನಲ್ಲಿ 127 ರನ್ ಚಚ್ಚಿದರು. ಇದು ವಿಶ್ವದಾಖಲೆಯಾಯಿತು. ಆರಂಭಿಕರಾಗಿ ಕಣಕ್ಕಿಳಿದ ಮೊದಲ ಪಂದ್ಯದ ಮೊದಲೆರಡು ಇನಿಂಗ್ಸ್‌ನಲ್ಲೇ ಶತಕ ಬಾರಿಸಿದ ವಿಶ್ವದ ಮೊದಲಿಗ ರೋಹಿತ್. ಆ ಪಂದ್ಯವನ್ನು ಭಾರತ 203 ರನ್‌ಗಳಿಂದ ಜಯಿಸಿತು. 2ನೆ ಟೆಸ್ಟ್‌ನಲ್ಲಿ ರೋಹಿತ್‌ಗೆ ಆಡಲು ಸಿಕ್ಕಿದ್ದೇ ಒಂದು ಇನಿಂಗ್ಸ್. ಅಲ್ಲಿ 14 ರನ್‌ಗೆ ಔಟಾದರು.
ಭಾರತಕ್ಕೆ ಇನಿಂಗ್ಸ್ ಮತ್ತು 137 ರನ್‌ಗಳಿಂದ ಜಯ ಲಭಿಸಿತು. 3ನೆ ಟೆಸ್ಟ್‌ನಲ್ಲಿ ಮತ್ತೆ ರೋಹಿತ್ ಅಬ್ಬರಿಸಿದರು. ಬರೀ 255 ಎಸೆತದಲ್ಲಿ 28 ಬೌಂಡರಿ, 6 ಸಿಕ್ಸರ್‌ಗಳ ನೆರವಿನಿಂದ 212 ರನ್ ಚಚ್ಚಿದರು. 2ನೆ ಟೆಸ್ಟ್‌ನಲ್ಲಿ ಅವರು 14 ರನ್‌ಗೆ ಔಟಾಗಿದ್ದನ್ನು ನೋಡಿದಾಗ ಮೊದಲ ಟೆಸ್ಟ್‌ನಲ್ಲಿ ಅವರು ಆಡಿದ್ದು ಆಕಸ್ಮಿಕವೇ ಎಂಬ ಅನುಮಾನ ಮೂಡಿತ್ತು. ಮೂರನೆ ಟೆಸ್ಟ್‌ನಲ್ಲಿ ಅದನ್ನು ಸಂಪೂರ್ಣ ಸುಳ್ಳು ಮಾಡಿ ತನ್ನ ಆಟ ಸತ್ವಯುತವಾದದ್ದೇ ಎಂದು ಸಾಬೀತು ಮಾಡಿದರು! ಅಲ್ಲಿಗೆ ಕ್ರಿಕೆಟ್ ಮಟ್ಟಿಗೆ 32 ವರ್ಷದ ಇಳಿವಯಸ್ಸಿನಲ್ಲಿ ರೋಹಿತ್ ಶರ್ಮ ಟೆಸ್ಟ್‌ನಲ್ಲಿ ತನ್ನ ಸ್ಥಾನವನ್ನು ಖಾತ್ರಿಪಡಿಸಿಕೊಂಡಿದ್ದಾರೆ. ಇನ್ನೂ ಮುಂಚೆಯೇ ಅವರಿಗೆ ಆರಂಭಿಕನಾಗಿ ಸ್ಥಾನ ನೀಡಿದ್ದರೆ, ಇನ್ನಷ್ಟು ಅದ್ಭುತ ಫಲಿತಾಂಶಗಳು ಸಾಧ್ಯವಿತ್ತು ಎಲ್ಲರೂ ಮಾತನಾಡಿಕೊಳ್ಳುವ ಮಟ್ಟಿಗೆ ಪರಿಸ್ಥಿತಿ ಬದಲಾಗಿದೆ.
ಹೀಗೆ ಯೋಚಿಸಿದರೆ, ಅದು ಸತ್ಯ ಕೂಡ. ಈಗಿನ ತೀವ್ರ ಪೈಪೋಟಿಯ ಯುಗದಲ್ಲಿ ರೋಹಿತ್ ಶರ್ಮ ಇನ್ನೊಂದು ಆರುವರ್ಷ ಸಕ್ರಿಯರಾಗಿರಲು ಸಾಧ್ಯವಿದೆ. ಅಷ್ಟರಲ್ಲಾಗಲೇ ಅವರು ಹೊಸಬರಿಂದ ಪೈಪೋಟಿ ಎದುರಿಸುತ್ತಿರುತ್ತಾರೆ. ಅವರ ಲಯ ಕೂಡ ಕಡಿಮೆಯಾಗಿರುತ್ತದೆ. ಅಲ್ಲಿಯವರೆಗೆ ಅವರು ಗರಿಷ್ಠ 60 ಟೆಸ್ಟ್‌ಗಳನ್ನು ಆಡಲು ಸಾಧ್ಯವಿದೆ. ಇಲ್ಲಿ ರೋಹಿತ್ ಏನು ಸಾಧಿಸುತ್ತಾರೋ ಅದನ್ನು ಅಂಕಿಸಂಖ್ಯೆಗಳ ಗಾತ್ರದಿಂದ ಅಳೆಯಲು ಸಾಧ್ಯವಿಲ್ಲ. ಆ ಲೆಕ್ಕಾಚಾರದಲ್ಲಿ ಬಹಳ ಸಾಧ್ಯವಾಗಿರುವುದಿಲ್ಲ. ಆದರೆ ಪರಿಣಾಮದಲ್ಲಿ ಮಾತ್ರ ರೋಹಿತ್ ಬ್ರಾಡ್ಮನ್‌ರಂತೆ ಅದ್ಭುತ ಸಾಧಿಸಲು ಅವಕಾಶವಿದೆ. ಮಲಗಿದ ಹುಲಿ ಎದ್ದಿದೆ, ಇನ್ನು ಅದರ ಬೇಟೆಯನ್ನು ನೋಡುವುದಷ್ಟೇ ಕೆಲಸ.
* ನಿರೂಪ