Advertisement

ಸಿಡ್ನಿ ಸಮರಕ್ಕೆ ರೋಹಿತ್; ಸಿಡ್ನಿಯಲ್ಲಿ ಭಾರತ ಗೆಲ್ಲದೆ 4 ದಶಕಗಳೇ ಉರುಳಿವೆ!

09:28 AM Jan 06, 2021 | Team Udayavani |

ಸಿಡ್ನಿ:  ವರ್ಷಾಂತ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಕ್ಕೆ ಬಲವಾದ ಪಂಚ್‌ ಕೊಟ್ಟು ಸರಣಿಯನ್ನು ಸಮಬಲಗೊಳಿಸುವಲ್ಲಿ ಯಶಸ್ವಿಯಾದ ಭಾರತ ಗುರುವಾರದಿಂದ (ಜ.7) ಸಿಡ್ನಿ ಸಮರಕ್ಕೆ ಅಣಿಯಾಗಲಿದೆ. ಇಲ್ಲಿಯೂ ಕಾಂಗರೂ ತಂಡದ ಮೇಲೇರಿ ಹೋಗಿ ಹೊಸ ವರ್ಷವನ್ನು ಸ್ಮರಣೀಯವಾಗಿ ಆರಂಭಿಸುವುದು ಟೀಮ್‌ ಇಂಡಿಯಾದ ಗುರಿ.

Advertisement

ಈ ಪಂದ್ಯದಲ್ಲೂ ಭಾರತಕ್ಕೆ ಟೀಮ್‌ ಕಾಂಬಿನೇಶನ್‌ ತುಸು ಜಟಿಲವಾಗಿ ಗೋಚರಿಸಿದೆ. ಇಲ್ಲಿ 2 ಬದಲಾವಣೆಯಂತೂ ಅನಿವಾರ್ಯ. ಒಂದು, ರೋಹಿತ್‌ ಒಳಬರುವುದು; ಇನ್ನೊಂದು, ಉಮೇಶ್‌ ಯಾದವ್‌ ಸ್ಥಾನಕ್ಕೆ ಯಾರನ್ನು ಸೇರ್ಪಡೆಗೊಳಿಸುವುದು ಎಂಬುದು.

ರೋಹಿತ್‌ ಓಪನಿಂಗ್‌

ಈಗಿನ ಸಾಧ್ಯತೆ ಪ್ರಕಾರ ರೋಹಿತ್‌ ಶರ್ಮ ಅವರನ್ನು ಆರಂಭಿಕನನ್ನಾಗಿ ಆಡಿಸುವುದು ತಂಡದ ಯೋಜನೆ. ಆಗ ಕಳೆದೆರಡು ಟೆಸ್ಟ್‌ಗಳಲ್ಲಿ ಮಿಂಚುವಲ್ಲಿ ವಿಫಲರಾದ ಮಾಯಾಂಕ್‌ ಅಗರ್ವಾಲ್‌ ಜಾಗ ಬಿಡಬೇಕಾಗುತ್ತದೆ. ಮೆಲ್ಬರ್ನ್ ನಲ್ಲಿ ಯಶಸ್ವಿ ಪದಾರ್ಪಣೆ ಮಾಡಿದ ಶುಭಮನ್‌ ಗಿಲ್‌ ಮತ್ತೋರ್ವ ಆರಂಭಿಕನಾಗಿರುತ್ತಾರೆ. ಅಲ್ಲಿಗೆ ಭಾರತ ಈ ಸರಣಿಯಲ್ಲಿ ಟೆಸ್ಟ್‌ ಪಂದ್ಯಕ್ಕೊಂದರಂತೆ ಓಪನಿಂಗ್‌ ಜೋಡಿಯನ್ನು ಕಣಕ್ಕಿಳಿಸಿದಂತಾಗುತ್ತದೆ.

ಅಡಿಲೇಡ್‌ ನಲ್ಲಿ ಅಗರ್ವಾಲ್‌-ಶಾ, ಮೆಲ್ಬರ್ನ್ ನಲ್ಲಿ ಅಗರ್ವಾಲ್‌-ಗಿಲ್‌ ಇನ್ನಿಂಗ್ಸ್‌ ಆರಂಭಿಸಿದ್ದರು. ಇವರಲ್ಲಿ ಕ್ಲಿಕ್‌ ಆದದ್ದು ಗಿಲ್‌ ಮಾತ್ರ. ಉಳಿದಂತೆ ಈ 4 ಇನ್ನಿಂಗ್ಸ್‌ ಗಳಲ್ಲಿ ಭಾರತದ ಮೊದಲ ವಿಕೆಟಿಗೆ ಒಟ್ಟುಗೂಡಿದ ರನ್‌ ಕೇವಲ 23. ಇದರಲ್ಲಿ ಎರಡು ಸೊನ್ನೆ! ರೋಹಿತ್‌ ಆರಂಭಿಕನಾಗಿ ಇಳಿದ ಬಳಿಕ ಭಾರತದ ಓಪನಿಂಗ್‌ ಸಮಸ್ಯೆ ಒಮ್ಮೆಲೇ ಪರಿಹಾರಗೊಳ್ಳುತ್ತದೆ ಎಂದರ್ಥವಲ್ಲ. ಅವರ ಓಪನಿಂಗ್‌ ದಾಖಲೆ ಉತ್ತಮವಾಗೇನೂ ಇಲ್ಲ.

Advertisement

ಆದರೆ ಅನುಭವದ ದೃಷ್ಟಿಯಲ್ಲಿ ರೋಹಿತ್‌ ಆಗಮನ ತಂಡದ ಆತ್ಮಸ್ಥೈರ್ಯ ಹೆಚ್ಚಿಸುವುದಂತೂ ನಿಜ. ಒಮ್ಮೆ ಕ್ರೀಸ್‌ ಆಕ್ರಮಿಸಿಕೊಂಡರೆಂದರೆ ಮತ್ತೆ ರೋಹಿತ್‌ ಅವರನ್ನು ತಡೆಯುವುದು ಕಷ್ಟ. ಆಕಸ್ಮಾತ್‌ ರೋಹಿತ್‌ ಶರ್ಮ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸುವುದಾದರೆ ಹನುಮ ವಿಹಾರಿ ಹೊರಗುಳಿಯಬೇಕಾಗುತ್ತದೆ. ಆದರೆ ಈ ಸಾಧ್ಯತೆ ಕಡಿಮೆ.

ಸಿಡ್ನಿಯಲ್ಲಿ ಭಾರತ ಗೆಲ್ಲದೆ 4 ದಶಕಗಳೇ ಉರುಳಿವೆ!

ಭಾರತ ಸಿಡ್ನಿ ಕ್ರಿಕೆಟ್‌ ಗ್ರೌಂಡ್‌ನ‌ಲ್ಲಿ 1947ರಿಂದ ಮೊದಲ್ಗೊಂಡು ಈವರೆಗೆ 12 ಟೆಸ್ಟ್‌ ಪಂದ್ಯಗಳನ್ನಾಡಿದೆ. ಜಯಿಸಿದ್ದು ಒಂದರಲ್ಲಿ ಮಾತ್ರ. ಉಳಿದಂತೆ ಐದರಲ್ಲಿ  ಸೋಲನುಭವಿಸಿದರೆ, 6 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಏಕೈಕ ಗೆಲುವು ಒಲಿದದ್ದು 1978ರಷ್ಟು ಹಿಂದೆ. ಅದು ಭಾರತದ ಸ್ಪಿನ್‌ ಮಾಂತ್ರಿಕರ ಮೆರೆದಾಟದ ಸಂಧ್ಯಾಕಾಲವಾಗಿತ್ತು. ಬಿಷನ್‌ ಸಿಂಗ್‌ ಬೇಡಿ ನಾಯಕರಾಗಿದ್ದರು. ಬಿ.ಎಸ್‌. ಚಂದ್ರಶೇಖರ್‌, ಇ.ಎ.ಎಸ್‌. ಪ್ರಸನ್ನ ಕೂಡ ತಂಡದಲ್ಲಿದ್ದರು. ಅಂದು ಸಿಡ್ನಿಯಲ್ಲಿ ನಡೆದ 4ನೇ ಟೆಸ್ಟ್‌ ಪಂದ್ಯವನ್ನು ಭಾರತ ಇನ್ನಿಂಗ್ಸ್‌ ಹಾಗೂ 2 ರನ್‌ ಅಂತರದಿಂದ ಗೆದ್ದಿತ್ತು. ಸರಣಿ 2-2 ಸಮಬಲಕ್ಕೆ ಬಂದಿತ್ತು.

ಬಾಬ್‌ ಸಿಂಪ್ಟನ್‌ ನಾಯಕತ್ವದ ಆಸ್ಟ್ರೇಲಿಯ, ಚಂದ್ರು (30ಕ್ಕೆ 4), ಬೇಡಿ (49ಕ್ಕೆ 3) ದಾಳಿಗೆ ಸಿಲುಕಿ ಮೊದಲ ಸರದಿಯಲ್ಲಿ 131ಕ್ಕೆ ಕುಸಿಯಿತು. ಜವಾಬಿತ್ತ ಭಾರತ 8ಕ್ಕೆ 396 ರನ್‌ ಬಾರಿಸಿ ಡಿಕ್ಲೇರ್‌ ಮಾಡಿತು. ವಿಶ್ವನಾಥ್‌ 79, ಕರ್ಸನ್‌ ಘಾವ್ರಿ 64, ಗಾವಸ್ಕರ್‌ 49, ವೆಂಗ್‌ಸರ್ಕಾರ್‌ 49, ಚೇತನ್‌ ಚೌಹಾಣ್‌ 42, ಸಯ್ಯದ್‌ ಕಿರ್ಮಾನಿ 42 ರನ್‌ ಹೊಡೆದು ಇನ್ನಿಂಗ್ಸ್‌ ಬೆಳೆಸಿದ್ದರು. 265 ರನ್ನುಗಳ ಭಾರೀ ಹಿನ್ನಡೆಗೆ ಸಿಲುಕಿದ ಆಸ್ಟ್ರೇಲಿಯಕ್ಕೆ ಸ್ಪಿನ್‌ ತ್ರಿವಳಿಗಳು ಸಿಂಹಸ್ವಪ್ನರಾದರು. ಬೇಡಿ, ಚಂದ್ರು, ಪ್ರಸನ್ನ ಸೇರಿ 8 ವಿಕೆಟ್‌ ಉಡಾಯಿಸಿದರು. ಆಸೀಸ್‌ 263ರ ತನಕ ಬಂದು ಇನ್ನಿಂಗ್ಸ್‌ ಸೋಲಿಗೆ ಸಿಲುಕಿತು.

ಇದನ್ನೂ ಓದಿ: ದೆಹಲಿ ಟ್ರ್ಯಾಕ್ಟರ್ ಜಾಥಕ್ಕೆ ಕುಟುಂಬದ ಸದಸ್ಯರೊಬ್ಬರನ್ನು ಕಳುಹಿಸಿ: ರೈತ ಮುಖಂಡರ ಒತ್ತಾಯ

Advertisement

Udayavani is now on Telegram. Click here to join our channel and stay updated with the latest news.

Next