Advertisement

ಆರು ವರ್ಷಗಳಿಂದ ಕಾಯುತ್ತಿದೆ ರೋಹಿತ್‌ ದ್ವಿಶತಕದ ವಿಶ್ವದಾಖಲೆ

11:49 PM Nov 13, 2020 | mahesh |

ಮುಂಬಯಿ: ಮೊನ್ನೆಯಷ್ಟೇ ಮುಂಬೈ ಇಂಡಿಯನ್ಸ್‌ ತಂಡಕ್ಕೆ 5ನೇ ಐಪಿಎಲ್‌ ಟ್ರೋಫಿಯನ್ನು ತಂದಿತ್ತ ರೋಹಿತ್‌ ಶರ್ಮ ನ. 13ರಂದು ವಿಶೇಷ ಕಾರಣಕ್ಕಾಗಿ ಸುದ್ದಿ ಯಾಗುತ್ತಾರೆ. ಅವರು ಏಕದಿನ ಅಂತಾ ರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸರ್ವಾಧಿಕ ರನ್ನುಗಳ ವಿಶ್ವದಾಖಲೆ ನಿರ್ಮಿಸಿದ ದಿನವಿದು. ಅವರ 6 ವರ್ಷಗಳ ಹಿಂದಿನ ಪರಾಕ್ರಮ ಇಂದಿಗೂ ವಿಶ್ವದ ಬ್ಯಾಟ್ಸ್‌ಮನ್‌ಗಳಿಗೆ ಸವಾಲಾಗಿಯೇ ಉಳಿದಿದೆ.

Advertisement

ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಸಲ 200 ರನ್‌ ಬಾರಿಸಿದ ಹಿರಿಮೆ ಹೊಂದಿರುವವರು ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌. ಅದು 2010ರ ಕತೆ. ಇದರೊಂದಿಗೆ ಅವರು ಸಯೀದ್‌ ಅನ್ವರ್‌, ಚಾರ್ಲ್ಸ್‌ ಕೊವೆಂಟ್ರಿ ಅವರ ಸಾಧನೆಯನ್ನು ಮೀರಿ ನಿಲ್ಲುತ್ತಾರೆ. ಬಳಿಕ ವೀರೇಂದ್ರ ಸೆಹವಾಗ್‌, ರೋಹಿತ್‌ ಶರ್ಮ ಈ ಹಾದಿಯಲ್ಲಿ ಸಾಗಿ ಬರುತ್ತಾರೆ. ಇವರಲ್ಲಿ ರೋಹಿತ್‌ ಏಕದಿನದಲ್ಲಿ ಒಂದಕ್ಕಿಂತ ಹೆಚ್ಚು ದ್ವಿಶತಕ ಬಾರಿಸಿದ ವಿಶ್ವದ ಏಕೈಕ ಸಾಧಕನೆಂಬುದು ವಿಶೇಷ.

ಈಡನ್‌ನಲ್ಲಿ ಮೆರೆದಾಟ
2009ರಲ್ಲಿ ಆಸ್ಟ್ರೇಲಿಯ ವಿರುದ್ಧ ಬೆಂಗಳೂರು ಪಂದ್ಯದಲ್ಲಿ 209 ರನ್‌ ಬಾರಿಸಿದ ರೋಹಿತ್‌ ಶರ್ಮ, ಮರು ವರ್ಷವೇ ಪ್ರವಾಸಿ ಶ್ರೀಲಂಕಾ ಎದುರು “ಈಡನ್‌ ಗಾರ್ಡ್‌ನ್ಸ್‌’ನಲ್ಲಿ 264 ರನ್ನುಗಳ ವಿಶ್ವದಾಖಲೆಯ ಇನ್ನಿಂಗ್ಸ್‌ ಕಟ್ಟುತ್ತಾರೆ. ಅವರ ಪಾಲಿಗೆ ಇದೊಂದು ಅದೃಷ್ಟದ ಸಾಧನೆ. ಕೇವಲ 4 ರನ್‌ ಮಾಡಿದ್ದಾಗ ತಿಸರ ಪೆರೆರ ನೀಡಿದ ಜೀವದಾನ ಎನ್ನುವುದು ರೋಹಿತ್‌ ಅವರನ್ನು 264ರ ತನಕ ಬೆಳೆಸಿತ್ತು!

ರೋಹಿತ್‌ ಶರ್ಮ ಅವರ ಶತಕ ಸರಿಯಾಗಿ 100 ಎಸೆತಗಳಲ್ಲಿ ದಾಖಲಾಗುತ್ತದೆ. ಮುಂದಿನ 51 ಎಸೆತಗಳಲ್ಲಿ ಡಬಲ್‌ ಸೆಂಚುರಿ ಪೂರ್ತಿಗೊಳ್ಳುತ್ತದೆ. ಆಗಲೇ 46ನೇ ಓವರ್‌ ಜಾರಿಯಲ್ಲಿದ್ದ ಕಾರಣ ರೋಹಿತ್‌ಗೆ ಇನ್ನು ಹೆಚ್ಚು ರನ್‌ ಗಳಿಸಲಾಗದು ಎಂಬುದೇ ಎಲ್ಲರ ನಿರೀಕ್ಷೆ ಆಗಿತ್ತು. ಆದರೆ ಮುಂದಿನ 22 ಎಸೆತಗಳಲ್ಲಿ ಅವರು ಸಿಡಿದು ನಿಂತ ಪರಿ ಅಸಾಮಾನ್ಯ. ಈ ಕಿರು ಅವಧಿಯಲ್ಲಿ 9 ಬೌಂಡರಿ, 3 ಸಿಕ್ಸರ್‌ ಬಾರಿಸಿ 264ಕ್ಕೆ ಏರಿ ನಿಂತಿದ್ದರು. ಕೊನೆಯ ಎಸೆತದಲ್ಲಿ ಇವರ ವಿಕೆಟ್‌ ಬೀಳುತ್ತದೆ. ಒಟ್ಟು 173 ಎಸೆತ ಎದುರಿಸಿದ ರೋಹಿತ್‌ 33 ಫೋರ್‌, 9 ಸಿಕ್ಸರ್‌ಗಳ ಅಮೋಘ ಇನ್ನಿಂಗ್ಸ್‌ ಒಂದನ್ನು ಕಟ್ಟಿ ವಿಶ್ವ ಕ್ರಿಕೆಟ್‌ನಲ್ಲಿ ಹೊಸ ಸಂಚಲನ ಮೂಡಿಸುತ್ತಾರೆ.

ದಾಖಲೆಗಳು ಶಾಶ್ವತವಲ್ಲ
ಕ್ರಿಕೆಟ್‌ನಲ್ಲಿ ಯಾವ ದಾಖಲೆಗಳೂ ಶಾಶ್ವತವಲ್ಲ ಎಂಬ ಮಾತೊಂದಿದೆ. ಹೀಗಾಗಿ ರೋಹಿತ್‌ ಅವರ ಈ ದಾಖಲೆ ಮುರಿಯುವ ಸಾಹಸಿ ಯಾರು ಎಂಬ ಕುತೂಹಲ ಸಹಜ. ಬಹುಶಃ ರೋಹಿತ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಚಾಲ್ತಿಯಲ್ಲಿರುವಷ್ಟು ದಿನ ಅವರ ದಾಖಲೆಗೆ ಅವರೇ ಸ್ಪರ್ಧಿ ಆಗಬಹುದು. 2017ರಲ್ಲಿ ಶ್ರೀಲಂಕಾ ವಿರುದ್ಧವೇ ಅವರು ಮೊಹಾಲಿಯಲ್ಲಿ ಮತ್ತೂಂದು ದ್ವಿಶತಕ ಬಾರಿಸಿ ಮೆರೆದುದನ್ನು ಮರೆಯುವಂತಿಲ್ಲ. ಇಲ್ಲವೇ ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ ಓರ್ವ ಹೊಸ ದಾಖಲೆಯನ್ನು ತನ್ನ ಹೆಸರಿಗೆ ಬರೆಸಿಕೊಳ್ಳುವ ಸಾಧ್ಯತೆಯಂತೂ ಇದ್ದೇ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next