ನಾಗ್ಪುರ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಟಿ20 ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ. ನಾಯಕ ರೋಹಿತ್ ಶರ್ಮಾ ಅವರ ಅಜೇಯ ಆಟವು ಟೀಂ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಇದೇ ವೇಳೆ ರೋಹಿತ್ ಶರ್ಮಾ ನೂತನ ದಾಖಲೆಯೊಂದನ್ನು ಬರೆದರು. ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರ ಎಂಬ ದಾಖಲೆಗೆ ರೋಹಿತ್ ಪಾತ್ರರಾದರು. ಈ ಹಿಂದೆ ಈ ದಾಖಲೆಯು ನ್ಯೂಜಿಲ್ಯಾಂಡ್ ನ ಮಾರ್ಟಿನ್ ಗಪ್ಟಿಲ್ ಹೆಸರಲ್ಲಿತ್ತು.
ನಾಗ್ಪುರ ಪಂದ್ಯಕ್ಕೂ ಮುನ್ನ ರೋಹಿತ್ ಮತ್ತು ಗಪ್ಟಿಲ್ ತಲಾ 172 ಸಿಕ್ಸರ್ ಬಾರಿಸಿದ್ದರು. ಶುಕ್ರವಾರದ ಪಂದ್ಯದಲ್ಲಿ ಟೀಂ ಇಂಡಿಯಾ ನಾಯಕ ಭರ್ಜರಿ ನಾಲ್ಕು ಸಿಕ್ಸರ್ ಬಾರಿಸಿದರು. ಈ ಮೂಲಕ ರೋಹಿತ್ ಸಿಕ್ಸರ್ ಲೆಕ್ಕ 176ಕ್ಕೇರಿತು. ಮೂರನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ನ ಕ್ರಿಸ್ ಗೇಲ್ ಇದ್ದು, ಅವರು 124 ಸಿಕ್ಸರ್ ಬಾರಿಸಿದ್ದಾರೆ.
ಇದನ್ನೂ ಓದಿ:ಸಿಲಿಕಾನ್ ಸಿಟಿಯಲ್ಲಿ ಪೊನ್ನಿಯನ್ ಸೆಲ್ವನ್; ಅಪ್ಪು ನೆನೆದ ತ್ರಿಶಾ
ನೂರಕ್ಕಿಂತ ಹೆಚ್ಚು ಸಿಕ್ಸರ್ ಬಾರಿಸಿದವರ ಪಟ್ಟಿಯಲ್ಲಿರುವ ಇನ್ನೋರ್ವ ಭಾರತೀಯನೆಂದರೆ ಅದು ಮಾಜಿ ನಾಯಕ ವಿರಾಟ್ ಕೊಹ್ಲಿ. ಅವರು 104 ಸಿಕ್ಸರ್ ಬಾರಿಸಿದ್ದಾರೆ.
138 ಅಂತಾರಾಷ್ಟ್ರೀಯ ಟಿ20 ಪಂದ್ಯವಾಡಿರುವ ರೋಹಿತ್ 3677 ರನ್ ಗಳಿಸಿದ್ದಾರೆ. 3500ಕ್ಕಿಂತ ಹೆಚ್ಚು ಅಂತಾರಾಷ್ಟ್ರೀಯ ಟಿ20 ರನ್ ಗಳಿಸಿರುವ ಏಕೈಕ ಪುರುಷ ಬ್ಯಾಟರ್ ರೋಹಿತ್ ಆಗಿದ್ದಾರೆ.
ತಲಾ 8 ಓವರ್ ಗಳಂತೆ ನಡೆದ ನಾಗ್ಪುರ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸೀಸ್ ಐದು ವಿಕೆಟ್ ಕಳೆದುಕೊಂಡು 90 ರನ್ ಗಳಿಸಿದರೆ, ಗುರಿ ಬೆನ್ನತ್ತಿದ್ದ ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ ನಾಲ್ಕು ಎಸೆತ ಬಾಕಿ ಇರುವಂತೆ 92 ರನ್ ಗಳಿಸಿ ಜಯ ಸಾಧಿಸಿತು. ನಾಯಕ ರೋಹಿತ್ ಶರ್ಮಾ ಅಜೇಯ 46 ರನ್ ಗಳಿಸಿದರು.