Advertisement

ಐವರಿಗೆ ಒಲಿಯಿತು ಖೇಲ್‌ರತ್ನ ; ರೋಹಿತ್‌, ಪೋಗಟ್‌, ಮರಿಯಪ್ಪನ್‌,ಮಣಿಕಾ, ರಾಮ್‌ಪಾಲ್‌ ಆಯ್ಕೆ

12:12 AM Aug 22, 2020 | mahesh |

ಹೊಸದಿಲ್ಲಿ: 2020ರ ರಾಷ್ಟ್ರೀಯ ಕ್ರೀಡಾಪ್ರಶಸ್ತಿಗಳಿಗೆ ಕೇಂದ್ರ ಕ್ರೀಡಾಸಚಿವ ಕಿರಣ್‌ ರಿಜಿಜು ಶುಕ್ರವಾರ ಅಂತಿಮ ಮುದ್ರೆಯೊತ್ತಿದ್ದಾರೆ. ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಪರಮೋಚ್ಚ ಕ್ರೀಡಾಪ್ರಶಸ್ತಿಯಾದ ರಾಜೀವ್‌ ಗಾಂಧಿ ಖೇಲ್‌ರತ್ನಕ್ಕೆ ಐವರು ಭಾಜನರಾಗಲಿದ್ದಾರೆ. ಕ್ರಿಕೆಟಿಗ ರೋಹಿತ್‌ ಶರ್ಮ, ಕುಸ್ತಿಪಟು ವಿನೇಶ್‌ ಪೋಗಟ್‌, ಪ್ಯಾರಾಲಿಂಪಿಯನ್‌ ತಂಗವೇಲು ಮರಿಯಪ್ಪನ್‌, ಟಿಟಿಪಟು ಮಣಿಕಾ ಭಾತ್ರಾ ಮತ್ತು ವನಿತಾ ಹಾಕಿ ತಂಡದ ನಾಯಕಿ ರಾಣಿ ರಾಮ್‌ಪಾಲ್‌ ಈ ಕ್ರೀಡಾರತ್ನಗಳಾಗಿದ್ದಾರೆ.

Advertisement

ಇದೇ ವೇಳೆ ಉಡುಪಿ ಮೂಲದ ಬ್ಯಾಡ್ಮಿಂಟನ್‌ ಆಟಗಾರ ಚಿರಾಗ್‌ ಶೆಟ್ಟಿ ಅರ್ಜುನ ಮತ್ತು ಪುತ್ತೂರು ಸೂತ್ರಬೆಟ್ಟುವಿನ ಕೋಚ್‌ ಪುರುಷೋತ್ತಮ ರೈ ಅವರು ಪ್ರತಿಷ್ಠಿತ ದ್ರೋಣಾಚಾರ್ಯ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಪ್ರಸ್ತುತ ಮುಂಬಯಿಯಲ್ಲಿ ನೆಲೆಸಿರುವ ಶಟ್ಲರ್‌ ಚಿರಾಗ್‌ ಶೆಟ್ಟಿ ಪುರುಷರ ಡಬಲ್ಸ್‌ನಲ್ಲಿ ಅಮೋಘ ಸಾಧನೆ ತೋರ್ಪಡಿಸುತ್ತಿದ್ದಾರೆ. ಪುರುಷೋತ್ತಮ ರೈ ಅವರು ಕರ್ನಾಟಕದ ಮಾಜಿ ಆ್ಯತ್ಲೆಟಿಕ್ಸ್‌ ತರಬೇತು ದಾರರಾಗಿದ್ದಾರೆ.

29 ಮಂದಿ ಅರ್ಜುನರು
ಈ ಹಿಂದೆಯೇ ಖೇಲ್‌ರತ್ನ ಪ್ರಶಸ್ತಿ ಪಡೆದಿರುವ ಸಾಕ್ಷಿ ಮಲಿಕ್‌ ಮತ್ತು ಸೈಖೋಮ್‌ ಮೀರಾಬಾಯಿ ಚಾನು ಅವರ ಹೆಸರನ್ನು ಅರ್ಜುನ ಪ್ರಶಸ್ತಿ ಯಾದಿಯಿಂದ ಕೈಬಿಡಲಾಗಿದೆ. ಇದರಿಂದ ಅರ್ಜುನ ಪ್ರಶಸ್ತಿ ವಿಜೇತರ ಸಂಖ್ಯೆ 29ರಿಂದ 27ಕ್ಕೆ ಇಳಿದಿದೆ. ರಾಷ್ಟ್ರೀಯ ಕ್ರೀಡಾದಿನವಾದ ಆ. 29ರಂದು ಆನ್‌ಲೈನ್‌ನಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಐವರಿಗೆ ಖೇಲ್‌ರತ್ನ!
ಈ ಬಾರಿ ಖೇಲ್‌ರತ್ನಕ್ಕೆ ಆರಂಭದಲ್ಲಿ ನಾಲ್ವರ ಹೆಸರನ್ನು ಅಂತಿಮ ಗೊಳಿಸಲಾಗಿತ್ತು. ಕೆಲವು ಗಂಟೆಗಳ ಅನಂತರ ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ರಾಂಪಾಲ್‌ ಹೆಸರನ್ನೂ ಆಯ್ಕೆ ಸಮಿತಿ ಸೇರಿಸಿ ಅಚ್ಚರಿ ಮೂಡಿಸಿತು. 2016ರಲ್ಲಿ ನಾಲ್ವರಿಗೆ ಖೇಲ್‌ರತ್ನ ನೀಡಿದ್ದು ಈವರೆಗಿನ ದಾಖಲೆಯಾಗಿತ್ತು.

ಈ ವರ್ಷ ಐವರಿಗೆ ಖೇಲ್‌ರತ್ನ ನೀಡಲಾಗುತ್ತಿರುವುದು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಕುಸ್ತಿಪಟು ಸುಶೀಲ್‌ ಕುಮಾರ್‌ ನೇರವಾಗಿ ಇದನ್ನು ಆಕ್ಷೇಪಿಸಿದ್ದಾರೆ. ಹಲವರಿಗೆ ಪ್ರಶಸ್ತಿ ನೀಡಿ, ಪ್ರಶಸ್ತಿಯ ಮೌಲ್ಯವನ್ನು ಕುಗ್ಗಿಸಬಾರದೆಂದು ಹೇಳಿದ್ದಾರೆ. ಸಾಧನೆಯ ಮಾನದಂಡವನ್ನೇ ಇಟ್ಟುಕೊಂಡರೆ ಖೇಲ್‌ರತ್ನ ಪಟ್ಟಿಯಲ್ಲಿರುವ ಎಲ್ಲರೂ ಗೌರವಕ್ಕೆ ಅರ್ಹರಲ್ಲ ಎಂಬ ತಕರಾರೂ ಇದೆ. ಅದೇನೇ ಇದ್ದರೂ ಭಾರತ ಸೀಮಿತ ಓವರ್‌ಗಳ ಕ್ರಿಕೆಟ್‌ ತಂಡದ ಉಪನಾಯಕ ರೋಹಿತ್‌ ಶರ್ಮ, 2016ರ ಪ್ಯಾರಾಲಿಂಪಿಕ್ಸ್‌ನ ಎತ್ತರ ಜಿಗಿತದಲ್ಲಿ ಚಿನ್ನ ಗೆದ್ದಿರುವ ಮರಿಯಪ್ಪನ್‌ ತಂಗವೇಲು, ಮಹಿಳಾ ಕುಸ್ತಿಪಟು ವಿನೇಶ್‌ ಪೋಗಟ್‌ ಆಯ್ಕೆಯ ಬಗ್ಗೆ ಯಾರಿಗೂ ತಕರಾರಿಲ್ಲ.

Advertisement


ಕಡೆಗೂ ಪುರುಷೋತ್ತಮ ರೈಗೆ ದ್ರೋಣಾಚಾರ್ಯ

ರಾಷ್ಟ್ರೀಯ ಕ್ರೀಡಾ ಪ್ರಾಧಿಕಾರದ ತರಬೇತುದಾರರಾಗಿ ನಿವೃತ್ತರಾಗಿರುವ ಕರ್ನಾಟಕದ ಪುರುಷೋತ್ತಮ ರೈ ಅವರಿಗೆ ಈಗ 79 ವರ್ಷ. ಅವರಿಗೆ ಕೆಲವು ವರ್ಷಗಳ ಹಿಂದೆಯೇ ಈ ಪ್ರಶಸ್ತಿ ಸಲ್ಲಬೇಕಿತ್ತೆಂದು ಎಲ್ಲರೂ ಒಮ್ಮತದಿಂದ ಹೇಳುತ್ತಾರೆ. ಆದರೆ ತಡವಾಗಿಯಾದರೂ ಅವರ ಅಮೋಘ ಸೇವೆಗೆ ಮನ್ನಣೆ ಸಿಕ್ಕಿದೆ. ತರಬೇತುದಾರರಿಗೆ ನೀಡುವ ದ್ರೋಣಾಚಾರ್ಯ ಪ್ರಶಸ್ತಿಯನ್ನು ಆಜೀವ ಸಾಧನೆಗಾಗಿ ಪಡೆದುಕೊಂಡಿದ್ದಾರೆ.

ಪುರುಷೋತ್ತಮ ರೈ 1974ರಿಂದಲೇ ಕೋಚಿಂಗ್‌ ಕಾಯಕವನ್ನು ಆರಂಭಿಸಿದರು. ಹಲವಾರು ಏಶ್ಯನ್‌ ಗೇಮ್ಸ್‌, ಸ್ಯಾಫ್ ಗೇಮ್ಸ್‌, ಏಶ್ಯ ಮಟ್ಟದ ಇತರ ಕೂಟಗಳಿಗಾಗಿ ಅವರು ಆ್ಯತಿಲàಟ್‌ಗಳನ್ನು ತಯಾರು ಮಾಡಿದ್ದಾರೆ. 1987ರಲ್ಲಿ ಇಟಲಿಯ ರೋಮ್‌ನಲ್ಲಿ ವಿಶ್ವ ಆ್ಯತ್ಲೆಟಿಕ್‌ ಕೂಟಕ್ಕೆ ಭಾರತೀಯ ತಂಡದ ತರಬೇತುದಾರರಾಗಿ ತೆರಳಿದ್ದರು.

ರೂಪುಗೊಂಡ ಕ್ರೀಡಾಪಟುಗಳು
ಪುರುಷೋತ್ತಮ ಅವರಿಂದ ಹಲವಾರು ಕ್ರೀಡಾರತ್ನಗಳು ರೂಪುಗೊಂಡಿವೆ. ಮುರಳಿಕುಟ್ಟನ್‌, ಅಶ್ವಿ‌ನಿ ನಾಚಪ್ಪ, ಎಸ್‌.ಡಿ. ಈಶನ್‌, ರೋಸಾ ಕುಟ್ಟಿ, ಜಿ.ಜಿ. ಪ್ರಮೀಳಾ, ಎಂ.ಕೆ. ಆಶಾ, ಇ.ಬಿ. ಶೈಲಾ, ಜೈಸಿ ಥಾಮಸ್‌ ಇವರಲ್ಲಿ ಪ್ರಮುಖರು.


ಉಡುಪಿಯ ಉಚ್ಚಿಲದ ಚಿರಾಗ್‌ಗೆ ಶೆಟ್ಟಿಗೆ ಅರ್ಜುನ

ಬ್ಯಾಡ್ಮಿಂಟನ್‌ಸಾಧನೆಗಾಗಿ ಅರ್ಜುನ ಪ್ರಶಸ್ತಿ ಪಡೆದಿರುವ ಚಿರಾಗ್‌ ಶೆಟ್ಟಿ ಕರ್ನಾಟಕ ಮೂಲದವರು. ಅವರ ಕುಟುಂಬ ಉಡುಪಿ ಜಿಲ್ಲೆಯ ಉಚ್ಚಿಲಕ್ಕೆ ಸೇರಿದೆ. ಮುಂದೆ ಕುಟುಂಬ ಮುಂಬಯಿಯಲ್ಲಿ ನೆಲೆನಿಂತ ಪರಿಣಾಮ, ಚಿರಾಗ್‌ ಅಲ್ಲಿಯೇ ಬೆಳೆದು ಬ್ಯಾಡ್ಮಿಂಟನ್‌ನಲ್ಲಿ ಮಿಂಚತೊಡಗಿದರು. ತಂದೆ ಚಂದ್ರಶೇಖರ್‌ ಎಲ್‌. ಶೆಟ್ಟಿ ವರ್ಷಕ್ಕೊಮ್ಮೆ ಕುಟುಂಬ ಕಾರ್ಯಗಳಿಗಾಗಿ ಉಚ್ಚಿಲಕ್ಕೆ ಬರುತ್ತಿರುತ್ತಾರೆ.

ಅರ್ಜುನ ವಿವಾದವೇನು?
2016ರ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದರಿಂದ ಮಹಿಳಾ ಕುಸ್ತಿಪಟು ಸಾಕ್ಷಿ ಮಲಿಕ್‌ ಅವರಿಗೆ ಅದೇ ವರ್ಷ ಖೇಲ್‌ರತ್ನ ನೀಡಲಾಗಿತ್ತು. 2018ರಲ್ಲಿ ಮಹಿಳಾ ವೇಟ್‌ಲಿಫ್ಟರ್‌ ಸೈಖೋಮ್‌ ಮೀರಾಬಾಯಿ ಚಾನುಗೆ ಖೇಲ್‌ರತ್ನ ಒಲಿದಿತ್ತು. ಇಬ್ಬರೂ ದೇಶದ ಪರಮೋಚ್ಚ ಕ್ರೀಡಾಪ್ರಶಸ್ತಿ ಪಡೆದ ಮೇಲೆ ಅರ್ಜುನಕ್ಕೆ ಶಿಫಾರಸಾಗಿದ್ದು ಆಶ್ಚರ್ಯ ಮೂಡಿಸಿತ್ತು. ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಅಂತಿಮವಾಗಿ ಕಿರಣ್‌ ರಿಜಿಜು ಈ ಇಬ್ಬರ ಹೆಸರನ್ನು ತಿರಸ್ಕರಿಸಿದ್ದಾರೆ.

ಈ ಪ್ರಶಸ್ತಿ ನನಗೆ 20 ವರ್ಷಗಳ ಹಿಂದೆಯೇ ಬರಬೇಕಿತ್ತು. ಬೇರೆ ಬೇರೆ ಕಾರಣಗಳಿಂದ ಲಭಿಸಿರಲಿಲ್ಲ. ಪ್ರಸ್ತುತ ಸಾಧನೆಯನ್ನು ಗುರುತಿಸಿ ಗೌರವಿಸಿರುವುದಕ್ಕೆ ಸಂತೋಷವಾಗಿದೆ.
ಪುರುಷೋತ್ತಮ ರೈ, ಮಾಜಿ ಆ್ಯತ್ಲೆಟಿಕ್ಸ್‌ ತರಬೇತುದಾರ


 

Advertisement

Udayavani is now on Telegram. Click here to join our channel and stay updated with the latest news.

Next