Advertisement

ಸಿರಾಜ್‌ ಸಾಧನೆಯನ್ನು ಮೆಚ್ಚಿದ ರೋಹಿತ್‌ ಶರ್ಮ

11:14 PM Jul 25, 2023 | Team Udayavani |

ಪೋರ್ಟ್‌ ಆಫ್ ಸ್ಪೇನ್‌: ಹಿರಿಯ ಹಾಗೂ ಅನುಭವಿ ವೇಗಿಗಳ ಗೈರಲ್ಲಿ ಮೊಹಮ್ಮದ್‌ ಸಿರಾಜ್‌ ಉತ್ತಮ ನಿರ್ವಹಣೆ ತೋರಿದರು, ತಂಡವೀಗ ಸರಿಯಾದ ಹಾದಿಯಲ್ಲಿ ಸಾಗುತ್ತಿದೆ ಎಂಬುದಾಗಿ ಟೀಮ್‌ ಇಂಡಿಯಾ ನಾಯಕ ರೋಹಿತ್‌ ಶರ್ಮ ಹೇಳಿದ್ದಾರೆ. ವೆಸ್ಟ್‌ ಇಂಡೀಸ್‌ ಎದುರಿನ ಟೆಸ್ಟ್‌ ಸರಣಿಯ ಪ್ರಶಸ್ತಿ ಸಮಾರಂಭದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಮೊದಲ ಇನ್ನಿಂಗ್ಸ್‌ನಲ್ಲಿ ಮೊಹಮ್ಮದ್‌ ಸಿರಾಜ್‌ 5 ವಿಕೆಟ್‌ ಉರುಳಿಸಿ ಜೀವನಶ್ರೇಷ್ಠ ಬೌಲಿಂಗ್‌ ಪ್ರದರ್ಶಿಸಿದ್ದರು. ಈ ಸಾಧನೆಗಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿದಿತ್ತು.
“ಸಿರಾಜ್‌ ಅವರನ್ನು ನಾನು ತೀರಾ ಹತ್ತಿರದಿಂದ ಗಮನಿಸುತ್ತ ಬಂದಿದ್ದೇನೆ. ಅವರದೊಂದು ದೈತ್ಯ ಹೆಜ್ಜೆ ಎಂದೇ ಹೇಳಬೇಕು. ಪ್ರಧಾನ ವೇಗಿಗಳ ಗೈರಲ್ಲಿ ಸಿರಾಜ್‌ ಬೌಲಿಂಗ್‌ ಆಕ್ರಮಣದ ಜವಾಬ್ದಾರಿ ಹೊತ್ತರು ಮತ್ತು ಇದನ್ನು ಯಶಸ್ವಿಯಾಗಿ ನಿಭಾಯಿಸಿದರು. ಆದರೆ ಬೌಲಿಂಗ್‌ ವಿಭಾಗವನ್ನು ಒಬ್ಬರೇ ಮುನ್ನಡೆಸುವುದನ್ನು ನಾನು ಬಯಸುವುದಿಲ್ಲ. ಇದು ಎಲ್ಲರ ಜವಾಬ್ದಾರಿ ಎಂಬುದು ಹೆಚ್ಚು ಸೂಕ್ತ. ಚೆಂಡು ಕೈಗೆ ಸಿಕ್ಕಿದ ಕೂಡಲೇ ಎಲ್ಲರೂ ಲೀಡರ್‌ಗಳೇ. ಇಡೀ ಪೇಸ್‌ ಬ್ಯಾಟರಿ ಇದರ ಜವಾಬ್ದಾರಿ ಹೊರಬೇಕು’ ಎಂಬುದಾಗಿ ರೋಹಿತ್‌ ಹೇಳಿದರು.

ಪಂದ್ಯಶ್ರೇಷ್ಠ ಮೊಹಮ್ಮದ್‌ ಸಿರಾಜ್‌ ಬಹಳ ಖುಷಿಯಲ್ಲಿದ್ದರು. “ಇದು ಟೆಸ್ಟ್‌ನಲ್ಲಿ ನನಗೆ ಲಭಿಸಿದ ಮೊದಲ ಪಂದ್ಯಶ್ರೇಷ್ಠ ಪ್ರಶಸ್ತಿ. ಬಹಳ ಖುಷಿಯಾಗಿದೆ. ಆದರೆ ಇಲ್ಲಿನ ಟ್ರ್ಯಾಕ್‌ ಪೇಸರ್‌ಗಳಿಗೆ ಭಾರೀ ನೆರವನ್ನೇನೂ ನೀಡುತ್ತಿರಲಿಲ್ಲ. ಆದರೆ ನನ್ನದೇ ಆದ ಕಾರ್ಯತಂತ್ರ ರೂಪಿಸಿದ್ದೆ. ಇದು ಕ್ಲಿಕ್‌ ಆಯಿತು’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next