ಬೆಂಗಳೂರು: ಐಪಿಎಲ್ ವೇಳೆ ಗಾಯಾಳಾಗಿ ಆಸ್ಟ್ರೇಲಿಯ ಪ್ರವಾಸದ ಏಕದಿನ ಹಾಗೂ ಟಿ20 ಪಂದ್ಯಗಳ ಸರಣಿಯಿಂದ ಬೇರ್ಪಟ್ಟ ರೋಹಿತ್ ಶರ್ಮ ಈಗ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್‌ಸಿಎ) ಆಗಮಿಸಿ ಫಿಟ್‌ನೆಸ್ ಟ್ರೈನಿಂಗ್ ಆರಂಭಿಸಿದ್ದಾರೆ. ಇಶಾಂತ್ ಶರ್ಮಾ ಕೂಡಾ ಎನ್ ಸಿಎ ನಲ್ಲಿ ಅಭ್ಯಾಸ ನಡೆಸುತ್ತಿದ್ದು, ರಾಹುಲ್ ದ್ರಾವಿಡ್ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದಾರೆ.
ಗುರುವಾರದಿಂದ ರೋಹಿತ್ ಶರ್ಮ ಲಘು ಅಭ್ಯಾಸದಲ್ಲಿ ತೊಡಗಿದ್ದು, ಅವರಲ್ಲಿ ಯಾವುದೇ ಗಂಭೀರ ಸಮಸ್ಯೆ ಕಂಡುಬಂದಿಲ್ಲ ಎಂದು ಎನ್‌ಸಿಎ ಮೂಲಗಳು ತಿಳಿಸಿವೆ. ಪೂರ್ತಿ ಫಿಟ್‌ನೆಸ್‌ಗೆ ಮರಳಿದ ಬಳಿಕ ಅವರು ಆಸ್ಟ್ರೇಲಿಯಕ್ಕೆ ಪ್ರಯಾಣಿಸಲಿದ್ದಾರೆ.
ಐಪಿಎಲ್ ವೇಳೆ ಗಾಯಾಳು
ಐಪಿಎಲ್ ಕೊನೆಯ ಹಂತದತ್ತ ಸಾಗುತ್ತಿದ್ದಾಗ ರೋಹಿತ್ ಶರ್ಮ ಪಾರ್ಶ್ವ ಸ್ನಾಯು ಸೆಳೆತಕ್ಕೊಳಗಾ ಗಿದ್ದರು. ಹೀಗಾಗಿ ಕೆಲವು ಪಂದ್ಯಗಳಿಂದ ದೂರ ಉಳಿಯ ಬೇಕಾಯಿತು. ಆದರೆ ಕ್ವಾಲಿಫೈಯರ್ ಮತ್ತು ಫೈನಲ್ ಪಂದ್ಯದಲ್ಲಿ ಕಾಣಿಸಿಕೊಂಡ ರೋಹಿತ್, ಮುಂಬೈ ಇಂಡಿಯನ್ಸ್ ತಂಡವನ್ನು ಸತತ 2ನೇ ವರ್ಷ ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಯಶಸ್ವಿಯಾಗಿದ್ದರು.
ಆಗ ರೋಹಿತ್ ಬಗ್ಗೆ ಬಿಸಿಸಿಐ ಏನನ್ನೋ ಮುಚ್ಚಿಡುತ್ತಿದೆ ಎಂಬ ಅನುಮಾನ ಕಾಡಿದ್ದು ಸಹಜ. ಗಾಯಾಳಾದರೂ ಅವರು ಪುನಃ ಐಪಿಎಲ್ ಆಡಲಿಳಿಯಲು ಹೇಗೆ ಸಾಧ್ಯವಾಯಿತು ಎಂಬುದು ಕ್ರಿಕೆಟ್ ಪ್ರೇಮಿಗಳ ಪ್ರಶ್ನೆಯಾಗಿತ್ತು. ಬಳಿಕ ಇದಕ್ಕೆ ಬಿಸಿಸಿಐ ಅಧ್ಯಕ್ಷ ಗಂಗೂಲಿ ಸ್ಪಷ್ಟನೆ ನೀಡಿ, ರೋಹಿತ್ ಶೇ. 70ರಷ್ಟು ಮಾತ್ರ ಫಿಟ್‌ನೆಸ್ ಹೊಂದಿದ್ದಾರೆ ಎಂದಿದ್ದರು.
ಆಸ್ಟ್ರೇಲಿಯ ವಿರುದ್ಧದ ಕೊನೆಯ 3 ಟೆಸ್ಟ್‌ಗಳಿಂದ ವಿರಾಟ್ ಕೊಹ್ಲಿ ಹಿಂದೆ ಸರಿದಿರುವುದರಿಂದ ರೋಹಿತ್ ಶರ್ಮ ಅವರ ಫಿಟ್‌ನೆಸ್ ಟೀಮ್ ಇಂಡಿಯಾ ಪಾಲಿಗೆ ಅತೀ ಅಗತ್ಯವಾಗಿದೆ.
ಇಶಾಂತ್ ಶರ್ಮಾ ಮತ್ತು ರೋಹಿತ್ ಶರ್ಮಾ ಒಟ್ಟಿಗೆ ಆಸ್ಟ್ರೇಲಿಯಾಗೆ ಪ್ರಯಾಣ ಬೆಳೆಸಲಿದ್ದು, ಅಲ್ಲಿ 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿರಬೇಕಾಗುತ್ತದೆ.