ರಾಜಕೋಟ್: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ದ್ವಿತೀಯ ಏಕದಿನ ಪಂದ್ಯಕ್ಕೆ ಸಜ್ಜಾಗಿದೆ. ಮೊದಲ ಪಂದ್ಯವನ್ನು ಹೀನಾಯವಾಗಿ ಸೋತಿರುವ ವಿರಾಟ್ ಪಡೆ ಈ ಪಂದ್ಯದಲ್ಲಿ ಬಲಿಷ್ಟ ಆಸೀಸ್ ವಿರುದ್ಧ ತಿರುಗಿ ಬೀಳುವ ತವಕದಲ್ಲಿದೆ. ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸಲು ವಿರಾಟ್ ಹುಡುಗರು ಕಠಿಣ ಅಭ್ಯಾಸದಲ್ಲಿ ತೊಡಗಿದ್ದಾರೆ.
ಮೊದಲ ಪಂದ್ಯದಲ್ಲಿ ಅಗ್ಗದಲ್ಲಿ ವಿಕೆಟ್ ಕಳೆದುಕೊಂಡಿದ್ದ ರೋಹಿತ್ ಶರ್ಮಾ ಈ ಪಂದ್ಯದಲ್ಲಿ ಮತ್ತೆ ಮಿಂಚುವ ಭರವಸೆಯಲ್ಲಿದ್ದಾರೆ. ತವರು ಮೈದಾನ ವಾಂಖೆಡೆಯಲ್ಲಿ ಮಿಚೆಲ್ ಸ್ಟಾರ್ಕ್ ಎಸೆತವನ್ನು ಲಾಂಗ್ ಆಫ್ ಗೆ ಹೊಡೆಯಲು ಹೋಗಿ ಮಿಡ್ ಆಫ್ ನಲ್ಲಿದ್ದ ಡೇವಿಡ್ ವಾರ್ನರ್ ಗೆ ಕ್ಯಾಚ್ ನೀಡಿದ್ದರು. ಆ ಪಂದ್ಯದಲ್ಲಿ ರೋಹಿತ್ ಗಳಿಕೆ ಕೇವಲ 10 ರನ್.
ಆದರೆ ಇಂದಿನ ಪಂದ್ಯದಲ್ಲಿ ಮಿಂಚುವ ವಿಶ್ವಾಸದಲ್ಲಿರುವ ರೋಹಿತ್ ಕೇವಲ 46 ರನ್ ಗಳಸಿದರೆ ಹೊಸ ಮೈಲಿಗಲ್ಲನ್ನು ನೆಡಲಿದ್ದಾರೆ. ರೋಹಿತ್ ಶರ್ಮಾ ಏಕದಿನ ಕ್ರಿಕೆಟ್ ನಲ್ಲಿ 8954 ರನ್ ಗಳಿಸಿದ್ದು, ಇನ್ನು 46 ರನ್ ಗಳಿಸಿದರೆ 9000 ರನ್ ಗಳಿಸಿದ ಸಾಧನೆ ಮಾಡಲಿದ್ದಾರೆ.
215 ಏಕದಿನ ಇನ್ನಿಂಗ್ಸ್ ಆಡಿರುವ ರೋಹಿತ್ ಅತೀ ವೇಗವಾಗಿ 9000 ರನ್ ದಾಖಲಿಸಿದ ಪಟ್ಟಿಯಲ್ಲಿ ಗಂಗೂಲಿ, ಸಚಿನ್, ಮತ್ತು ಲಾರಾ ದಾಖಲೆ ಮುರಿಯಲಿದ್ದಾರೆ. ಗಂಗೂಲಿ 228 ಇನ್ನಿಂಗ್ಸ್, ಸಚಿನ್ 235 ಇನ್ನಿಂಗ್ಸ್ ಮತ್ತು ಬ್ರಿಯಾನ್ ಲಾರಾ 239 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದರು.
ಅತೀ ವೇಗವಾಗಿ 9000 ರನ್ ಗಳಿಸಿದವರ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವುದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ. ( 194 ಇನ್ನಿಂಗ್ಸ್) ಎರಡನೇ ಸ್ಥಾನ ಎ ಬಿ ಡಿವಿಲಿಯರ್ಸ್ (205 ಇನ್ನಿಂಗ್ಸ್)