Advertisement

ಐಸಿಸಿ ಚಾಂಪಿಯನ್ಸ್‌ ಟ್ರೋಫಿ ತಂಡಕ್ಕೆ ಮರಳಿದ ರೋಹಿತ್‌, ಶಮಿ

12:32 PM May 09, 2017 | Harsha Rao |

ಹೊಸದಿಲ್ಲಿ: ಐಸಿಸಿ-ಬಿಸಿಸಿಐ ನಡುವಿನ ಭಾರೀ ಹಗ್ಗ ಜಗ್ಗಾಟದ ಬಳಿಕ ಪ್ರತಿಷ್ಠಿತ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿಗೆ ಸೋಮವಾರ ಭಾರತ ತಂಡವನ್ನು ಅಂತಿಮಗೊಳಿಸಲಾಯಿತು. ಈ ತಂಡ ಊಹಾಪೋಹಗಳನ್ನೆಲ್ಲ ಮೀರಿದ್ದಾಗಿದ್ದು, ಪೂರ್ಣ ಸಾಮರ್ಥ್ಯದ ಪಡೆಯನ್ನೇ ಹೊಂದಿದೆ. 

Advertisement

ಗಾಯಾಳಾಗಿ ಕಳೆದ ಕೆಲವು ತಿಂಗಳಿಂದ ಟೀಮ್‌ ಇಂಡಿಯಾದಿಂದ ಬೇರ್ಪಟ್ಟಿದ್ದ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮ ಮತ್ತು ಪೇಸ್‌ ಬೌಲರ್‌ ಮೊಹಮ್ಮದ್‌ ಶಮಿ ಮರಳಿದ್ದಷ್ಟೇ ಈ ತಂಡದ ವಿಶೇಷ. ಜತೆಗೆ ಕೆಲವು ಮಂದಿ ಮೀಸಲು ಆಟಗಾರರನ್ನೂ ಹೆಸರಿಸಲಾಗಿದೆ. ಅನುಭವಿ ಸುರೇಶ್‌ ರೈನಾ, ಭರವಸೆಯ ಕೀಪರ್‌ ರಿಷಬ್‌ ಪಂತ್‌, ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌, ಮತ್ತೂಬ್ಬ ಕೀಪರ್‌ ದಿನೇಶ್‌ ಕಾರ್ತಿಕ್‌, ಮಧ್ಯಮ ವೇಗಿ ಶಾದೂìಲ್‌ ಠಾಕೂರ್‌ ಅವರೆಲ್ಲ ಈ ಯಾದಿ ಯಲ್ಲಿದ್ದಾರೆ.

ತೊಡೆಯ ನೋವಿಗೆ ಸಿಲುಕಿದ್ದ ರೋಹಿತ್‌ ಶರ್ಮ ಕಳೆದ ಅಕ್ಟೋಬರ್‌ನಲ್ಲಿ ನ್ಯೂಜಿಲ್ಯಾಂಡ್‌ ವಿರುದ್ಧ ವಿಶಾಖಪಟ್ಟಣ ದಲ್ಲಿ ಕೊನೆಯ ಪಂದ್ಯವಾಡಿದ್ದರು. ಸದ್ಯ 10ನೇ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಬ್ಯಾಟಿಂಗ್‌ ಫಾರ್ಮ್ ಕೂಡ ಕಂಡುಕೊಂಡಿದ್ದಾರೆ. ಕರ್ನಾಟಕದ ಆರಂಭಕಾರ ಕೆ.ಎಲ್‌. ರಾಹುಲ್‌ ವಿಶ್ರಾಂತಿಯಲ್ಲಿರುವುದರಿಂದ ರೋಹಿತ್‌ ಶರ್ಮ ಮೊದಲ ಆಯ್ಕೆಯ ಆರಂಭಿಕನಾಗಿರುತ್ತಾರೆ. ಶಿಖರ್‌ ಧವನ್‌ ಇವರ ಜತೆಗಾರನಾಗಿರುವವರು. ಅಗತ್ಯ ಬಿದ್ದರೆ ಅಜಿಂಕ್ಯ ರಹಾನೆ ಕೂಡ ಇನ್ನಿಂಗ್ಸ್‌ ಆರಂಭಿಸುವುದರಿಂದ ಗೌತಮ್‌ ಗಂಭೀರ್‌ ಹೆಸರು ಚರ್ಚೆಗೆ ಬರಲಿಲ್ಲ ಎಂದು ಆಯ್ಕೆ ಸಮಿತಿ ಅಧ್ಯಕ್ಷ ಎಂ.ಎಸ್‌.ಕೆ. ಪ್ರಸಾದ್‌ ಹೇಳಿದರು.

ಬಂಗಾಲದ ಪೇಸರ್‌ ಮೊಹಮ್ಮದ್‌ ಶಮಿ 2015ರ ವಿಶ್ವಕಪ್‌ ಪಂದ್ಯಾವಳಿಯ ಆಸ್ಟ್ರೇಲಿಯ ಎದುರಿನ ಸಿಡ್ನಿ ಸೆಮಿಫೈನಲ್‌ ಬಳಿಕ ಏಕದಿನ ಪಂದ್ಯವನ್ನೇ ಆಡಿಲ್ಲ. ಪ್ರಸ್ತುತ ಐಪಿಎಲ್‌ನಲ್ಲಿ ಆಡುತ್ತಿದ್ದು, ಸಾಮಾನ್ಯ ಮಟ್ಟದ ನಿರ್ವಹಣೆ ತೋರುತ್ತಿದ್ದಾರೆ.

ವಿರಾಟ್‌ ಕೊಹ್ಲಿ ಸಾರಥ್ಯದ ಈ ತಂಡದಲ್ಲಿ ಎಂದಿನಂತೆ ಮಾಜಿ ನಾಯಕ ಮಹೇಂದ್ರ ಸಿಂಗ್‌ ಧೋನಿ ಕೀಪಿಂಗ್‌ ಕಾಯಕ ನಿಭಾಯಿಸಲಿದ್ದಾರೆ. ಧೋನಿ ಅವರ ಕೀಪಿಂಗ್‌ ಕೌಶಲದ ಬಗ್ಗೆ ಯಾವುದೇ ಅನುಮಾನವಿಲ್ಲ, 19ರ ಹರೆಯದ ಪಂತ್‌ಗೆ
ಭವಿಷ್ಯದಲ್ಲಿ ಉಜ್ವಲ ಅವಕಾಶವಿದೆ ಎಂಬುದಾಗಿ ಪ್ರಸಾದ್‌ ಹೇಳಿದರು. ಯುವರಾಜ್‌ ಸಿಂಗ್‌, ಕೇದಾರ್‌ ಜಾಧವ್‌ ಮಧ್ಯಮ ಕ್ರಮಾಂಕದ ಪ್ರಮುಖ ಆಟಗಾರರು.

Advertisement

ಮೂರನೇ ಸ್ಪಿನ್ನರ್‌ ಅನಗತ್ಯ
ಕರ್ನಾಟಕದ ಮನೀಷ್‌ ಪಾಂಡೆ ಹೆಚ್ಚುವರಿ ಬ್ಯಾಟ್ಸ್‌ಮನ್‌ ಆಗಿ ತಂಡದಲ್ಲಿ ಸ್ಥಾನ ಸಂಪಾದಿಸಿದ್ದಾರೆ. ಇದರಿಂದಾಗಿ “ಅಚ್ಚರಿಯ ಆಯುಧ’, ಚೈನಾಮನ್‌ ಬೌಲರ್‌ ಕುಲದೀಪ್‌ ಯಾದವ್‌ ಹೊರಗುಳಿಯಬೇಕಾಯಿತು. ಇಂಗ್ಲೆಂಡ್‌ ಪಿಚ್‌ಗಳು ಸ್ಪಿನ್ನಿಗೆ ಹೆಚ್ಚು ಒಲಿಯದಿರು ವುದೂ ಯಾದವ್‌ ಹೊರಗುಳಿಯಲು ಮುಖ್ಯ ಕಾರಣವಾಗಿದೆ. ಅಶ್ವಿ‌ನ್‌, ಜಡೇಜ ಜತೆಗೆ ಯುವರಾಜ್‌ ಮತ್ತು ಜಾಧವ್‌ ಕೂಡ ಸ್ಪಿನ್‌ ಬೌಲಿಂಗ್‌ ನಡೆಸುವ ಕಾರಣ 3ನೇ ಸ್ಪೆಷಲಿಸ್ಟ್‌ ಸ್ಪಿನ್ನರ್‌ನ ಅಗತ್ಯ ಬೀಳದು; ಇದರಿಂದ ಕುಲದೀಪ್‌ ಸ್ವಲ್ಪದರಲ್ಲೇ ಅವಕಾಶ ವಂಚಿತರಾದರು ಎಂಬುದಾಗಿ ಪ್ರಸಾದ್‌ ಹೇಳಿದರು. 

ಆರ್‌. ಅಶ್ವಿ‌ನ್‌ ಗಾಯಾಳಾಗಿ ಐಪಿಎಲ್‌ನಿಂದ ಸಂಪೂರ್ಣ ದೂರ ಉಳಿದರೂ ಆಯ್ಕೆಯಾದ ಬಗ್ಗೆ ಪ್ರತಿಕ್ರಿಯಿಸಿದ ಪ್ರಸಾದ್‌, “ಅಶ್ವಿ‌ನ್‌ ಗಾಯ ಗಂಭೀರ ಸ್ವರೂಪದ್ದಾಗಿರಲಿಲ್ಲ. ಬಿಡುವಿಲ್ಲದೇ ಆಡಿದ್ದರಿಂದ ಅವರಿಗೆ ವಿಶ್ರಾಂತಿಯ ಅಗತ್ಯವಿತ್ತು. ಈಗ ಅವರು ಫಿಟ್‌ ಆಗಿಯೇ ಇದ್ದಾರೆ’ ಎಂದರು.

ಭಾರತದ ವೇಗದ ಬೌಲಿಂಗ್‌ ವಿಭಾಗದಲ್ಲಿ ಶಮಿ ಹೊರತುಪಡಿಸಿ ಉಮೇಶ್‌ ಯಾದವ್‌, ಭುವನೇಶ್ವರ್‌ ಕುಮಾರ್‌, ಜಸ್‌ಪ್ರೀತ್‌ ಬುಮ್ರಾ ಇದ್ದಾರೆ. ಹಾರ್ದಿಕ್‌ ಪಾಂಡ್ಯ ಆಲ್‌ರೌಂಡ್‌ ಪಾತ್ರ ವಹಿಸಲಿದ್ದಾರೆ.

ಭಾರತ ತಂಡ 
ವಿರಾಟ್‌ ಕೊಹ್ಲಿ (ನಾಯಕ), ಶಿಖರ್‌ ಧವನ್‌, ರೋಹಿತ್‌ ಶರ್ಮ, ಅಜಿಂಕ್ಯ ರಹಾನೆ, ಯುವರಾಜ್‌ ಸಿಂಗ್‌, ಮಹೇಂದ್ರ ಸಿಂಗ್‌ ಧೋನಿ (ವಿ.ಕೀ.), ಕೇದಾರ್‌ ಜಾಧವ್‌, ಮನೀಷ್‌ ಪಾಂಡೆ, ಹಾರ್ದಿಕ್‌ ಪಾಂಡ್ಯ, ಆರ್‌. ಅಶ್ವಿ‌ನ್‌, ರವೀಂದ್ರ ಜಡೇಜ, ಜಸ್‌ಪ್ರೀತ್‌ ಬುಮ್ರಾ, ಉಮೇಶ್‌ ಯಾದವ್‌, ಮೊಹಮ್ಮದ್‌ ಶಮಿ, ಭುವನೇಶ್ವರ್‌ ಕುಮಾರ್‌.
ಮೀಸಲು ಆಟಗಾರರು: ಕುಲದೀಪ್‌ ಯಾದವ್‌, ರಿಷಬ್‌ ಪಂತ್‌, ದಿನೇಶ್‌ ಕಾರ್ತಿಕ್‌, ಶಾದೂìಲ್‌ ಠಾಕೂರ್‌, ಸುರೇಶ್‌ ರೈನಾ.

ಐಪಿಎಲ್‌ ಮಾನದಂಡವಲ್ಲ
ಈ ಬಾರಿಯ ಐಪಿಎಲ್‌ನಲ್ಲಿ ಅನೇಕ ಯುವ ಆಟಗಾರರು ಮಿಂಚಿದರೂ ಇವರನ್ನು ಆಯ್ಕೆ ಮಾಡದಿರಲು ಕಾರಣವೇನು ಎಂಬ ಪ್ರಶ್ನೆಯೂ ಆಯ್ಕೆ ಸಮಿತಿ ಅಧ್ಯಕ್ಷರಿಗೆ ಎದುರಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಸಾದ್‌, “ಐಪಿಎಲ್‌ ದೇಶಿ ಕ್ರಿಕೆಟ್‌ ಟೂರ್ನಿ. 50 ಓವರ್‌ಗಳ ಪಂದ್ಯಾವಳಿಗೆ ಟಿ-20 ಟೂರ್ನಿಯ ಸಾಧನೆ ಮಾನದಂಡವಾಗದು. ಆಯ್ಕೆಯ ಸಂದರ್ಭದಲ್ಲಿ ನಾವು ಇಂಗ್ಲೆಂಡಿನ ವಾತಾವರಣವನ್ನೂ ಗಮನದಲ್ಲಿರಿಸಿದ್ದೇವೆ. ಇದೊಂದು ದೊಡ್ಡ ಪಂದ್ಯಾವಳಿ. ಆಯ್ಕೆಯ ವೇಳೆ ಆಟಗಾರರ ಕಳೆದ ಒಂದು ವರ್ಷದ ಸಾಧನೆಯನ್ನೂ ಪರಿಗಣಿಸಲಾಗಿದೆ…’ ಎಂದರು.

“ಹೌದು, ಇದೇನೂ ಅಚ್ಚರಿಯ ತಂಡವಲ್ಲ. ನಿರೀಕ್ಷಿತ ತಂಡ ಎನ್ನಲಡ್ಡಿಯಿಲ್ಲ. ಇಂಗ್ಲೆಂಡ್‌ ವಿರುದ್ಧದ ಸರಣಿಯಲ್ಲಿ ಆಡಿದ ಆಟಗಾರರ ಮೇಲೆ ವಿಶ್ವಾಸ ಇರಿಸಲಾಗಿದೆ. ಒಂದೆರಡು ಹೆಸರು ಆಚೀಚೆ ಆಗಿರಬಹುದು, ಅಷ್ಟೇ…’ ಎಂದು ಪ್ರಸಾದ್‌ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಭಾರತ-ಪಾಕ್‌ ಮುಖಾಮುಖೀ
ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್‌ ಪಂದ್ಯಾವಳಿ ಜೂ. ಒಂದರಿಂದ ಜೂ. 18ರ ತನಕ ಇಂಗ್ಲೆಂಡಿನಲ್ಲಿ ಸಾಗಲಿದೆ. ಒಟ್ಟು 8 ತಂಡಗಳು ಸೆಣಸಲಿವೆ. ಹಾಲಿ ಚಾಂಪಿಯನ್‌ ಭಾರತ “ಬಿ’ ವಿಭಾಗದಲ್ಲಿದ್ದು, ಜೂ. 4ರಂದು ಬದ್ಧ ಎದುರಾಳಿ ಪಾಕಿಸ್ಥಾನವನ್ನು ಎದುರಿಸಲಿದೆ. “ಬಿ’ ವಿಭಾಗದ ಉಳಿದ ತಂಡಗಳೆಂದರೆ ಶ್ರೀಲಂಕಾ ಮತ್ತು ದಕ್ಷಿಣ ಆಫ್ರಿಕಾ.
“ಎ’ ವಿಭಾಗದಲ್ಲಿ ಇಂಗ್ಲೆಂಡ್‌, ಆಸ್ಟ್ರೇಲಿಯ, ನ್ಯೂಜಿ ಲ್ಯಾಂಡ್‌ ಮತ್ತು ಬಾಂಗ್ಲಾದೇಶ ತಂಡಗಳಿವೆ. ಅವಕಾಶ ವಂಚಿತ ಪ್ರಮುಖ ತಂಡವೆಂದರೆ ವೆಸ್ಟ್‌ ಇಂಡೀಸ್‌.

Advertisement

Udayavani is now on Telegram. Click here to join our channel and stay updated with the latest news.

Next