ಮೀರ್‌ಪುರ: ಬಾಂಗ್ಲಾದೇಶ ವಿರುದ್ಧ ಬುಧವಾರ ಇಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಕ್ಯಾಚ್ ಹಿಡಿಯಲು ಯತ್ನಿಸಿದ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರ ಎಡಗೈ ಹೆಬ್ಬೆರಳಿಗೆ ಗಾಯವಾಗಿದ್ದು, ಅವರನ್ನು ಸ್ಕ್ಯಾನ್‌ಗಾಗಿ ಪಂದ್ಯದ ನಡುವೆಯೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಎರಡನೇ ಸ್ಲಿಪ್‌ನಲ್ಲಿ ನಿಂತಿದ್ದ ರೋಹಿತ್, ಎರಡನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಮೊಹಮ್ಮದ್ ಸಿರಾಜ್ ಅವರ ಎಸೆತದಲ್ಲಿ ಅನಾಮುಲ್ ಹಕ್ ಅವರ ಕ್ಯಾಚ್ ಪಡೆಯಲು ಯತ್ನಿಸಿದಾಗ ಎಡಗೈಗೆ ಬಲವಾದ ಪೆಟ್ಟು ಬಿದ್ದಿದೆ.
“ಭಾರತದ ನಾಯಕ ರೋಹಿತ್ ಶರ್ಮಾ 2 ನೇ ಏಕದಿನ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವಾಗ ಹೆಬ್ಬೆರಳಿಗೆ ಪೆಟ್ಟು ಬಿದ್ದಿದೆ. ಬಿಸಿಸಿಐ ವೈದ್ಯಕೀಯ ತಂಡ ಅವರನ್ನು ಪರೀಕ್ಷೆ ಮಾಡಿದೆ. ಅವರು ಈಗ ಸ್ಕ್ಯಾನ್‌ಗೆ ಒಳಗಾಗಿದ್ದಾರೆ” ಎಂದು ಬಿಸಿಸಿಐ ಟ್ವೀಟ್ ಮಾಡಿದೆ.
ವಿಕೆಟ್ ಕೀಪರ್, ಉಪನಾಯಕ ಕೆ.ಎಲ್. ರಾಹುಲ್ ಅವರು ರೋಹಿತ್ ಅನುಪಸ್ಥಿತಿಯಲ್ಲಿ ನಾಯಕತ್ವವನ್ನು ವಹಿಸಿಕೊಂಡರು. ಬಾಂಗ್ಲಾದೇಶ ಇನ್ನಿಂಗ್ಸ್‌ನ 39 ನೇ ಓವರ್‌ನಲ್ಲಿ, ಟಿವಿ ನಿರೂಪಕರು ರೋಹಿತ್ ಆಸ್ಪತ್ರೆಯಿಂದ ಹಿಂತಿರುಗಿದ್ದಾರೆ ಎಂದು ಹೇಳಿದರಾದರೂ ಅವರು ಫೀಲ್ಡಿಂಗ್‌ಗೆ ಇಳಿಯಲಿಲ್ಲ.ಚೇಸಿಂಗ್‌ನಲ್ಲಿ ರೋಹಿತ್ ಭಾರತದ ಇನ್ನಿಂಗ್ಸ್ ಆರಂಭಿಸಲಿಲ್ಲ, ವಿರಾಟ್ ಕೊಹ್ಲಿ ಅಗ್ರ ಕ್ರಮಾಂಕದಲ್ಲಿ ಶಿಖರ್ ಧವನ್ ಜೊತೆಗಾರರಾಗಿ ಬಂದರು. ತಂಡ 4 ವಿಕೆಟ್ ಕಳೆದುಕೊಂಡಾಗಲೂ ರೋಹಿತ್ ಬ್ಯಾಟಿಂಗ್ ಗೆ ಇಳಿದಿಲ್ಲ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬಾಂಗ್ಲಾದೇಶ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 271 ರನ್ ಗಳಿಸಿತು. 272 ರನ್ ಗಳ ಗುರಿಯನ್ನು ಬೆನ್ನಟ್ಟಿದ ಭಾರತ 24 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 116 ರನ್ ಗಳಿಸಿದೆ.