ಮೊಹಾಲಿ: ಏಷ್ಯಾ ಕಪ್ ನ ಅಫ್ಗಾನಿಸ್ಥಾನ ತಂಡದ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದು ಶತಕ ಸಿಡಿಸಿದ ಬಳಿಕ ಟೀಂ ಇಂಡಿಯಾದ ಬ್ಯಾಟಿಂಗ್ ಕಾಂಬಿನೇಶನ್ ನ ಬಗ್ಗೆ ಹೊಸ ಚರ್ಚೆ ಆರಂಭವಾಗಿದೆ. ಇನ್ನು ಮುಂದೆ ಟಿ20 ಕ್ರಿಕೆಟ್ ನಲ್ಲಿ ನಾಯಕ ರೋಹಿತ್ ಶರ್ಮಾ ಜೊತೆ ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭಿಸಬೇಕು ಎಂದು ಹಲವು ಮಾಜಿ ಆಟಗಾರರು ಒತ್ತಾಯಿಸಿದ್ದಾರೆ.
ಇದೀಗ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೂಡಾ ಈ ಬಗ್ಗೆ ಮಾತನಾಡಿದ್ದಾರೆ. ಕೊಹ್ಲಿ ಇನ್ನಿಂಗ್ ಆರಂಭಿಸುವ ಬಗ್ಗೆ ಒಲವು ತೋರಿಸಿರುವ ರೋಹಿತ್, ವಿಶ್ವಕಪ್ ನಲ್ಲಿ ನಮಗೆ ಇದೊಂದು ಅವಕಾಶ ಸಿಗುತ್ತದೆ ಎಂದಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧ ಸೆ.20ರಂದು ಆರಂಭವಾಗಲಿರುವ ಟಿ20 ಸರಣಿಗೆ ಮುನ್ನಾ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ನಿಮಗೆ ಇಂತಹ ಆಯ್ಕೆಗಳು ಸಿಗುವುದು ಯಾವಾಗಲೂ ಒಳ್ಳೆಯದು. ನೀವು ಇಂತಹ ಅವಕಾಶಗಳೊಂದಿಗೆ ವಿಶ್ವಕಪ್ ಹೋಗುತ್ತಿರುವುದಾದರೆ ಅದು ಉತ್ತಮ ಲಕ್ಷಣ. ಯಾವುದೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವ ಆಟಗಾರರು ಉತ್ತಮ ಶೇಪ್ ನಲ್ಲಿರಬೇಕು. ನಾವು ಹೊಸದಾಗಿ ಏನೋ ಒಂದು ಮಾಡಿದರೆ, ಅಲ್ಲಿ ಏನೋ ಒಂದು ಸಮಸ್ಯೆಯಿದೆ ಎಂದರ್ಥವಲ್ಲ.” ಎಂದರು.
ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯಲ್ಲಿ ಕೊಹ್ಲಿಯ ಪ್ರದರ್ಶನದ ಬಗ್ಗೆಯೂ ರೋಹಿತ್ ಮಾತನಾಡಿದರು. ತಂಡದಲ್ಲಿ ಯಾವುದೇ ಮೀಸಲು ಆರಂಭಿಕರನ್ನು ಹೊಂದಿಲ್ಲದ ಕಾರಣ ಭಾರತವು ಈ ಆಯ್ಕೆಯನ್ನು (ವಿರಾಟ್ ಓಪನಿಂಗ್) ಮುಕ್ತವಾಗಿರಿಸಿಕೊಳ್ಳುತ್ತದೆ ಎಂದು ಹೇಳಿದರು.
ಇದನ್ನೂ ಓದಿ:ದೇಶದ ವಿರೋಧಿ ಚಟುವಟಿಕೆ ಆರೋಪ: ಆಂಧ್ರಪ್ರದೇಶದ ಹಲವೆಡೆ ಎನ್ ಐಎ ದಾಳಿ
ರೋಹಿತ್ ಈ ಹೇಳಿಕೆಯಿಂದ ಉಪ ನಾಯಕ ಕೆಎಲ್ ರಾಹುಲ್ ಅವರ ಸ್ಥಾನಕ್ಕೆ ಕುತ್ತು ಬಂದಿದ್ದೆ. ಗಾಯದ ಸಮಸ್ಯೆಯ ಕಾರಣದಿಂದ ಹಲವು ಸಮಯದ ಬಳಿಕ ಇತ್ತೀಚೆಗಷ್ಟೇ ತಂಡ ಕೂಡಿಕೊಂಡಿರುವ ರಾಹುಲ್ ಏಷ್ಯಾಕಪ್ ನಲ್ಲಿ ಉತ್ತಮ ಪ್ರದರ್ಶನ ತೋರಲು ವಿಫಲರಾಗಿದ್ದರು.