ಮುಂಬಯಿ: ಪುಣೆ ವಿರುದ್ಧದ ಪಂದ್ಯದ ವೇಳೆ ಅಂಪಾಯರ್ ಜತೆ ಅಸಭ್ಯವಾಗಿ ವರ್ತಿಸಿದ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮ ಅವರಿಗೆ ಸಂಭಾವನೆಯ ಶೇ. 50ರಷ್ಟು ದಂಡ ವಿಧಿಸಲಾಗಿದೆ. ಪಂದ್ಯದ ಅಂತಿಮ ಓವರ್ ವೇಳೆ ಗೆಲುವಿನ ಒತ್ತಡದಲ್ಲಿದ್ದಾಗ ರೋಹಿತ್ ಶರ್ಮ ಅಂಪಾಯರ್ ಎಸ್. ರವಿ ಜತೆ ವೈಡ್ ಎಸೆತಕ್ಕೆ ಸಂಬಂಧಿಸಿದಂತೆ ವಾಗ್ವಾದಕ್ಕಿಳಿದಿದ್ದರು. ಜೈದೇವ್ ಉನಾದ್ಕತ್ ಅವರ ಎಸೆತವೊಂದು ಆಫ್ಸ್ಟಂಪ್‌ನಿಂದ ತೀರಾ ಹೊರಕ್ಕೆ ಹೋದಾಗ ರೋಹಿತ್ ಅದನ್ನು ಎದುರಿಸದೆ ಬಿಟ್ಟಿದ್ದರು. ಅಂಪಾಯರ್ ಈ ಎಸೆತವನ್ನು ವೈಡ್ ಎಂದು ತೀರ್ಮಾನಿಸುತ್ತಾರೆ ಎಂಬುದು ಅವರ ನಿರೀಕ್ಷೆ ಆಗಿತ್ತು. ಆದರೆ ಅಂಪಾಯರ್ ಎಸ್. ರವಿ ಇದನ್ನು ವೈಡ್ ಎಂದು ಘೋಷಿಸಲಿಲ್ಲ. ಇದರಿಂದ ಆಘಾತಕ್ಕೊಳಗಾದ ರೋಹಿತ್ ಶರ್ಮ ಅಂಪಾಯರ್ ಅವರನ್ನು ದುರುಗುಟ್ಟಿ ನೋಡುತ್ತ ವಾದಕ್ಕಿಳಿದರು. ಇದಕ್ಕೂ ಮುನ್ನ ಸ್ಕ್ವೇರ್ ಲೆಗ್ ಅಂಪಾಯರ್ ಎ. ನಂದಕಿಶೋರ್ ವಿರುದ್ಧವೂ ರೋಹಿತ್ ಆಕ್ರೋಶಗೊಂಡಿದ್ದರು. ಅಂಪಾಯರ್ ದೂರನ್ನು ಪರಿಗಣಿಸಿದ ಮ್ಯಾಚ್ ರೆಫ್ರಿ ಜಾವಗಲ್ ಶ್ರೀನಾಥ್, ರೋಹಿತ್‌ಗೆ ದಂಡ ವಿಧಿಸುವ ನಿರ್ಧಾರಕ್ಕೆ ಬಂದರು.