ಇಂಧೋರ್: ಪ್ರವಾಸಿ ಕಿವೀಸ್ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಭಾರತೀಯ ಆರಂಭಿಕರು ಮೆರೆದಾಡಿದ್ದಾರೆ. ಇಂಧೋರ್ ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಇಬ್ಬರೂ ಶತಕ ಪೂರೈಸಿದರು.
83 ಎಸೆತಗಳಲ್ಲಿ ಶತಕ ಪೂರೈಸಿದ ರೋಹಿತ್ ಶರ್ಮಾ 101 ರನ್ ಗಳಿಸಿ ಔಟಾದರು. ರೋಹಿತ್ ಆರು ಸಿಕ್ಸರ್ ಮತ್ತು 9 ಬೌಂಡರಿ ಬಾರಿಸಿದರು. ಪ್ರಚಂಡ ಫಾರ್ಮ್ ಮುಂದುವರಿಸಿದ ಶುಭ್ಮನ್ ಗಿಲ್ ಅವರು 72 ಎಸೆತದಲ್ಲಿ ಶತಕ ಪೂರೈಸಿದರು.
ಈ ಶತಕದೊಂದಿಗೆ ರೋಹಿತ್ ಶರ್ಮಾ ಅವರ ಶತಕದ ಬರ ನೀಗಿತು. 2020ರ ಜನವರಿ 19ರ ಬಳಿಕ ರೋಹಿತ್ ಇಂದು ಮೊದಲ ಏಕದಿನ ಶತಕ ಬಾರಿಸಿದರು.
ಟಾಸ್ ಗೆದ್ದ ನ್ಯೂಜಿಲ್ಯಾಂಡ್ ಮೊದಲು ಫೀಲ್ಡಿಂಗ್ ಮಾಡಲು ನಿರ್ಧರಿಸಿತು. ಆರಂಭದಲ್ಲಿ ನಿಧಾನವಾಗಿ ಆಡಿದ ರೋಹಿತ್ ಗಿಲ್ ಜೋಡಿ ಬಳಿಕ ಕಿವೀಸ್ ಬೌಲರ್ ಗಳ ಮೇಲೆ ಸವಾರಿ ಮಾಡಿತು. ಕೇವಲ 76 ಎಸೆತಗಳಲ್ಲಿ ಶತಕದ ಜೊತೆಯಾಟವಾಡಿದರು. ಜೇಕಬ್ ಡಾಫಿ ಎಸೆದ ಹತ್ತನೇ ಓವರ್ ನಲ್ಲಿ ರೋಹಿತ್ 17 ರನ್ ಚಚ್ಚಿದರು. ಫರ್ಗುಸನ್ ಅವರ ಓವರ್ ನಲ್ಲಿ ಗಿಲ್ 22 ರನ್ ಚಚ್ಚಿದರು.