Advertisement
ಹುನಗುಂದ: ಕಳೆದ ವಾರ ಬಿಟ್ಟುಬಿಡದೇ ಸುರಿದ ರೋಹಿಣಿ ಮಳೆಯು ಮುಂಗಾರು ಬಿತ್ತನೆಗೆ ಮುನ್ಸೂಚನೆ ನೀಡಿದೆ. ವರುಣ ತೋರಿದ ಕೃಪೆಗೆ ರೈತರ ಮೊಗದಲ್ಲಿ ಮಂದಹಾಸ ಮೂಡಿದ್ದು, ತಾಲೂಕಿನಾದ್ಯಂತ ಮುಂಗಾರು ಬಿತ್ತನೆ ಚಟುವಟಿಕೆಗೆ ಚಾಲನೆ ಸಿಕ್ಕಿದೆ.
Related Articles
Advertisement
ಮುಂಗಾರು ಬಿತ್ತನೆ ಕ್ಷೇತ್ರ: ತಾಲೂಕು ಒಟ್ಟು 1,12,298 ಹೆಕ್ಟೇರ್ ಸಾಗುವಳಿ ಭೂಮಿ ಹೊಂದಿದ್ದು, ಅದರಲ್ಲಿ 65 ಸಾವಿರ ಹೆಕ್ಟೇರ್ ಪ್ರದೇಶ ಒಣ ಬೇಸಾಯದಿಂದ ಕೂಡಿದೆ. 47 ಸಾವಿರ ಹೆಕ್ಟೇರ್ ನೀರಾವರಿ ಪ್ರದೇಶ ಹೊಂದಿದೆ. 42 ಸಾವಿರ ಹೆಕ್ಟೇರ್ ಒಣಬೇಸಾಯ ಪ್ರದೇಶ ಮತ್ತು 47 ಸಾವಿರ ಹೆಕ್ಟೇರ್ ನೀರಾವರಿ ಪ್ರದೇಶ ಸದ್ಯ ಮುಂಗಾರು ಬಿತ್ತನೆಗೆ ಸಜ್ಜಾಗಿದೆ. ಮುಂಗಾರು ಹಂಗಾಮಿನಲ್ಲಿ ಹೆಚ್ಚಾಗಿ ಹೆಸರು, ಸಜ್ಜೆ, ತೊಗರಿ, ಸೂರ್ಯಕಾಂತಿ, ಗೋವಿನಜೋಳ, ಸೋಯಾಬಿನ್, ಎಳ್ಳು, ಗುರೇಳ್ಳು ಹೆಚ್ಚಾಗಿ ಬಿತ್ತನೆಯಾಗಲಿದೆ.
ಬಿತ್ತನೆ ಬೀಜ-ರಸಗೊಬ್ಬರ ದಾಸ್ತಾನು: ಮುಂಗಾರು ಹಂಗಾಮಿನ ಬಿತ್ತನೆಗೆ ತಾಲೂಕಿನ 4 ಕೇಂದ್ರಗಳ ಮೂಲಕ ಕೃಷಿ ಇಲಾಖೆಯು ಬಿತ್ತನೆಯ ಬೀಜ ಮತ್ತು ರಸಗೊಬ್ಬರ ವಿತರಣೆ ಕಾರ್ಯ ಆರಂಭಿಸಿದೆ. ಹೆಸರು 30 ಕ್ವಿಂಟಲ್, ತೊಗರಿ 145 ಕ್ವಿಂಟಲ್, ಸಜ್ಜೆ 25 ಕ್ವಿಂಟಲ್, ಸೋಯಾಬಿನ್ 10 ಕ್ವಿಂಟಲ್ ಸದ್ಯ ದಾಸ್ತಾನು ಮಾಡಿದ್ದು, ಸೂರ್ಯಕಾಂತಿ 35 ಕ್ವಿಂಟಲ್ ಬೇಡಿಕೆ ಇದ್ದು, ಇನ್ನು ಪೂರೈಕೆಯಾಗಿಲ್ಲ. ಮುಂಗಾರು ಹಂಗಾಮಿನಲ್ಲಿ ಎಳ್ಳು ಮತ್ತು ಗುರೇಳ್ಳು ಬೀಜವನ್ನು ರೈತರೇ ಕಳೆದ ವರ್ಷದ ಬೀಜ ಶೇಖರಿಸಿಟ್ಟು ಅವುಗಳನ್ನೇ ಬಿತ್ತನೆ ಮಾಡುತ್ತಾರೆ. ಯೂರಿಯಾ 175 ಮೆಟ್ರಿಕ್ ಟನ್, ಡಿಎಪಿ 100 ಮೆಟ್ರಿಕ್ ಟನ್, ಕಾಂಪ್ಲೇಕ್ಸ್ 125 ಮೆಟ್ರಿಕ್ ಟನ್, ಎಂಒಸಿ 35 ಮೆಟ್ರಿಕ್ ಟನ್, 10:26:26-45 ಮೆಟ್ರಕ್ ಟನ್, ಅಮೋನಿಯೋ ಸೆಲ್ಪೇಟ್ 15 ಮೆಟ್ರಿಕ್ ಟನ್, 20:20-5 ಮೆಟ್ರಿಕ್ ಟನ್ ರಸಗೊಬ್ಬರವನ್ನು ದಾಸ್ತಾನು ಮಾಡಲಾಗಿದೆ ಎಂದು ಕೃಷಿ ಸಹಾಯಕ ನಿರ್ದೇಶಕ ಸಿದ್ದಪ್ಪ ಪಟ್ಟಿಹಾಳ ತಿಳಿಸಿದರು.
ಬೀಜ-ಗೊಬ್ಬರ ಖರೀದಿ ಜೋರು: ಸಮೃದ್ಧಿ ಮಳೆಯಾದ ಹಿನ್ನೆಲೆಯಲ್ಲಿ ಬಿತ್ತನೆ ಮಾಡಲು ರೈತರು ಬೀಜ ಮತ್ತು ರಸಗೊಬ್ಬರ ಖರೀದಿ ಜೋರಾಗಿದೆ. ಲಾಕ್‌ಡೌನ್ ಇರೋದರಿಂದ ಬೀಜ ಮತ್ತು ಗೊಬ್ಬರ ಖರೀದಿಗೆ ರೈತರು ನಸುಕಿನಲ್ಲಿ ಬಂದು ತಮ್ಮ ಬಿತ್ತನೆಗೆ ಬೇಕಾದ ಸಾಮಗ್ರಿಗಳ ಖರೀದಿ ಮಾಡುತ್ತಿದ್ದಾರೆ.