Advertisement

ರೋಹಿಣಿ ವರ್ಗಾವಣೆ ಹಸ್ತಕ್ಷೇಪ ಆರೋಪ: ಸಿಎಸ್‌ಗೆ ಮಣಿವಣ್ಣನ್‌ ಪತ್ರ

10:44 PM Sep 24, 2019 | Lakshmi GovindaRaju |

ಬೆಂಗಳೂರು: ಕಾರ್ಮಿಕ ಕಲ್ಯಾಣ ಮಂಡಳಿಯ ಕಾರ್ಯದರ್ಶಿ ಹುದ್ದೆಯಿಂದ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ವಿಷಯದಲ್ಲಿ ತಮ್ಮ ಹಸ್ತಕ್ಷೇಪವಿಲ್ಲ ಎಂದು ಕಾರ್ಮಿಕ ಇಲಾಖೆ ಕಾರ್ಯದರ್ಶಿ ಕ್ಯಾಪ್ಟನ್‌ ಪಿ. ಮಣಿವಣ್ಣನ್‌ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯ್‌ ಭಾಸ್ಕರ್‌ಗೆ ಪತ್ರ ಬರೆದಿದ್ದಾರೆ.

Advertisement

ಕಟ್ಟಡ ಕಾರ್ಮಿಕರು ಹಾಗೂ ಇತರ ನಿರ್ಮಾಣ ಹಂತದ ಕಾರ್ಮಿಕರ ಕಲ್ಯಾಣ ಮಂಡ ಳಿಯ ಕಾರ್ಯದರ್ಶಿಯಾಗಿದ್ದ ರೋಹಿಣಿ ಸಿಂಧೂರಿ ಅವರು ಕಲ್ಯಾಣ ಮಂಡಳಿ ಯಲ್ಲಿರುವ ಕಟ್ಟಡ ಕಾರ್ಮಿಕರು ಹಾಗೂ ಅವರ ಮಕ್ಕಳ ಶ್ರೇಯೋಭಿವೃದ್ಧಿಗೆ ಮೀಸಲಿರುವ ಸುಮಾರು 8 ಸಾವಿರ ಕೋಟಿ ಹಣದಲ್ಲಿ ಕನಿಷ್ಠ 3 ಸಾವಿರ ಕೋಟಿ ರೂ.ನ್ನು ಪ್ರವಾಹ ಸಂತ್ರಸ್ತರ ಪುನರ್ವಸತಿ ಹಾಗೂ ಇತರ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಲು ಹಣ ವರ್ಗಾವಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಅದೇ ಕಾರಣಕ್ಕೆ ಅವರನ್ನು ಮಂಡಳಿಯ ಕಾರ್ಯದರ್ಶಿ ಹುದ್ದೆಯಿಂದ ಯಾವುದೇ ಹುದ್ದೆ ತೋರಿಸದೇ ವರ್ಗಾವಣೆ ಮಾಡಲಾಗಿತ್ತು.

ರೋಹಿಣಿ ಸಿಂಧೂರಿ ವರ್ಗಾವಣೆಗೆ “ಕಾರ್ಮಿಕರ ಕಲ್ಯಾಣ ನಿಧಿಯಿಂದ ಹಣ ವರ್ಗಾವಣೆಗೆ ನಿರಾಕರಿಸಿದ್ದೇ ಕಾರಣ’ ಎಂಬ ಮಾತುಗಳು ಐಎಎಸ್‌ ಅಧಿಕಾರಿಗಳ ವಲಯ ದಲ್ಲಿ ಕೇಳಿ ಬಂದಿತ್ತು. ಅಲ್ಲದೇ ಕಾರ್ಮಿಕರ ಕಲ್ಯಾಣ ಕಾರ್ಯಕ್ರಮಗಳನ್ನು ಕೈಗೊಳ್ಳಲು ಮಂಡಳಿಯಲ್ಲಿ ತಂತ್ರಜ್ಞಾನ ಹಾಗೂ ಆ್ಯಪ್‌ ಅಭಿವೃದ್ಧಿ ಪಡಿಸಲು ರೋಹಿಣಿ ಸಿಂಧೂರಿ ನಿರ್ಧರಿಸಿದ್ದರು. ಕಾರ್ಮಿಕರ ಸಹಾಯವಾಣಿ ಆ್ಯಪ್‌ ಅಭಿವೃದ್ಧಿ ಕಾರ್ಯವನ್ನು ಕಿಯೋನಿಕ್ಸ್‌ಗೆ ನೀಡುವಂತೆ ಮಣಿವಣ್ಣನ್‌, ರೋಹಿಣಿ ಅವರ ಮೇಲೆ ಒತ್ತಡ ಹಾಕಿದ್ದರು ಎಂಬ ಆರೋಪ ಕೇಳಿ ಬಂದಿತ್ತು.

ಆದರೆ, ಈ ಆರೋಪದ ಬಗ್ಗೆ ಟಿ.ಎಂ. ವಿಜಯಭಾಸ್ಕರ್‌ಗೆ ಪತ್ರ ಬರೆದು ಸ್ಪಷ್ಟನೆ ನೀಡಿರುವ ಮಣಿವಣ್ಣನ್‌, ಆ್ಯಪ್‌ ಅಭಿವೃದ್ಧಿ ಪಡಿಸಲು ನಿಯಮಗಳ ಪ್ರಕಾರ ಟೆಂಡರ್‌ ಮೂಲಕವೇ ಅವಕಾಶ ಕಲ್ಪಿಸಲಾಗಿದೆ. ಈ ಕುರಿತಂತೆ ಕಾರ್ಮಿಕ ಇಲಾಖೆಯಿಂದ ಸರ್ಕಾರಿ ಆದೇಶವೂ ಆಗಿದೆ. ಟೆಂಡರ್‌ ಪ್ರಕ್ರಿಯೆ ಮುಗಿಯುವವರೆಗೂ ಕಟ್ಟಡ ಕಾರ್ಮಿಕ ಸಹಾಯವಾಣಿ ತೆರೆಯುವ ಬಗ್ಗೆ ಮಾತ್ರ ನಾನು ಸೂಚನೆ ನೀಡಿದ್ದೆ ಎಂದು ತಿಳಿಸಿದ್ದಾರೆ. ಅಲ್ಲದೆ ಮಂಡಳಿಯ ಅಭಿವೃದ್ದಿ ದೃಷ್ಠಿಯಿಂದ ರೋಹಿಣಿ ಸಿಂಧೂರಿ ಅವರನ್ನು ಮಂಡಳಿಯ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿಸ ಬಹುದು ಎಂದು ತಮ್ಮ ಪತ್ರದಲ್ಲಿ ಉಲ್ಲೇಖೀಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next